ಲಸಿಕಾಕರಣ ಶೇ. 25 ಮಾತ್ರ!

HVR_VACCINE
Published on

ಪರಶುರಾಮ ಕೆರಿ ಹಾವೇರಿ
ಜಿಲ್ಲೆಯಲ್ಲಿ ಕರೊನಾ 2ನೇ ಅಲೆ ಇದೀಗ ಇಳಿಮುಖವಾಗಿದೆ. 18 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದ ಅಭಿಯಾನ ಮಾದರಿಯಲ್ಲಿ ಲಸಿಕೆ ಹಾಕಲಾಗುತ್ತಿದೆ. ಆದರೆ, ಜಿಲ್ಲೆಗೆ ಅಗತ್ಯ ಪ್ರಮಾಣದ ಲಸಿಕೆ ಪೂರೈಕೆಯಾಗದ ಪರಿಣಾಮ ಶೇ. 25ರಷ್ಟು ಮಾತ್ರ ಸಾಧನೆ ಯಾಗಿದೆ.
ಜಿಲ್ಲೆಯಲ್ಲಿ ಒಟ್ಟು 12,19,886 ಜನರಿಗೆ ಲಸಿಕೆ ಹಾಕುವ ಗುರಿ ನಿಗದಿಯಾಗಿದೆ. ಆದರೆ, ಈವರೆಗೆ ಮೊದಲ ಡೋಸ್ ಲಸಿಕೆ ಪಡೆದವರ ಸಂಖ್ಯೆ ಕೇವಲ 3,08,845. ಇನ್ನು ಇದರಲ್ಲಿ 2ನೇ ಡೋಸ್ ಲಸಿಕೆಯನ್ನು 60,817 ಜನರು ಹಾಕಿಸಿಕೊಂಡಿದ್ದು ಇದರಲ್ಲಿಯೂ ಸಾಧನೆ ಶೇ. 20ರಷ್ಟಿದೆ.
ಕೋವ್ಯಾಕ್ಸಿನ್​ಗಿಂತ ಕೋವಿಶೀಲ್ಡ್ ಲಸಿಕೆಯನ್ನು ಹೆಚ್ಚು ಜನರು ಪಡೆದಿದ್ದಾರೆ. ಮೊದಲಿನಿಂದಲೂ ಕೋವಿಶೀಲ್ಡ್ ಲಸಿಕೆ ಹೆಚ್ಚಾಗಿ ಪೂರೈಕೆಯಾಗುತ್ತಿದ್ದು, ಹಾಗಾಗಿಯೇ, ಜನರು ಅನಿವಾರ್ಯವಾಗಿ ಕೋವಿಶೀಲ್ಡ್ ಲಸಿಕೆಯತ್ತ ವಾಲಿದ್ದಾರೆ. ಜನರಿಗೆ ಕೋವಿಡ್ ಲಸಿಕೆ ನೀಡಲು ಆರಂಭಿಸಿದಾಗಿನಿಂದ ಒಟ್ಟು 3,00,330 ಜನರು ಕೋವಿಶೀಲ್ಡ್, 46,600 ಜನರು ಕೋವ್ಯಾಕ್ಸಿನ್ ಲಸಿಕೆ ಪಡೆದಿದ್ದಾರೆ.
ಮೊದಲ ಹಂತದಲ್ಲಿ 10,664 ಆರೋಗ್ಯ ಇಲಾಖೆಯ ಸೇನಾನಿಗಳಿಗೆ ಲಸಿಕೆ ನೀಡಲು ಆದ್ಯತೆ ನೀಡಲಾಗಿತ್ತು. ಇದರಲ್ಲಿ 9,074 ಜನರು ಮಾತ್ರ ಲಸಿಕೆ ಪಡೆದಿದ್ದು, ಶೇ. 85ರಷ್ಟು ಸಾಧನೆಯಾಗಿದೆ. 2ನೇ ಹಂತದಲ್ಲಿ ಫ್ರಂಟ್​ಲೈನ್ ಸೇನಾನಿಗಳಿಗೆ ಲಸಿಕೆ ನೀಡಲು ಆರಂಭಿಸಲಾಯಿತು. ಆಗ ಲಸಿಕೆ ಪಡೆಯಲು ಬಹಳಷ್ಟು ಜನರು ಮುಂದೆ ಬಂದಿರಲಿಲ್ಲ. ನಂತರ ಲಸಿಕೆ ಪಡೆಯಲು ಮುಂದಾಗಿದ್ದರಿಂದ ಒಟ್ಟು ಗುರಿ 9,662ರಲ್ಲಿ 8,111 ಜನರು ಈವರೆಗೆ ಲಸಿಕೆ ಪಡೆದಿದ್ದು, ಶೇ. 84ರಷ್ಟು ಸಾಧನೆಯಾಗಿದೆ.
ನಂತರ 60 ವರ್ಷ ಮೇಲ್ಪಟ್ಟವರಿಗೆ ಲಸಿಕಾಕರಣ ಆರಂಭವಾಯಿತು. 1,35,145 ಜನರಿಗೆ ಲಸಿಕೆ ಹಾಕುವ ಗುರಿ ಇದ್ದು ಕೇವಲ 90,761 ಜನರು ಮಾತ್ರ ಈವರೆಗೆ ಲಸಿಕೆ ಪಡೆದಿದ್ದು, ಶೇ. 60 ಮಾತ್ರ ಸಾಧನೆಯಾಗಿದೆ. ನಂತರ 45 ವರ್ಷ ಮೇಲ್ಪಟ್ಟವರಿಗೆ ಲಸಿಕಾಕರಣ ಆರಂಭಗೊಂಡಿತು. 2,80,280 ಜನರು ಲಸಿಕೆಗೆ ನೋಂದಾಯಿಸಿಕೊಂಡಿದ್ದರು. ಈವರೆಗೆ ಇದರಲ್ಲಿ ಶೇ. 37ರಷ್ಟು ಮಾತ್ರ ಸಾಧನೆಯಾಗಿದೆ. ಕೊನೆಯ ಹಂತದಲ್ಲಿ 18ರಿಂದ 44 ವರ್ಷದೊಳಗಿನವರಿಗೆ ಲಸಿಕೆ ಹಾಕಲು ಆರಂಭಿಸಿದಾಗ 7,84,138 ಜನರು ಲಸಿಕೆಗೆ ನೋಂದಾಯಿಸಿಕೊಂಡಿದ್ದು, ಅದರಲ್ಲಿ 1,07,842 ಜನರಿಗೆ ಲಸಿಕೆ ಹಾಕಲಾಗಿದೆ. ಶೇ. 14ರಷ್ಟು ಮಾತ್ರ ಸಾಧನೆಯಾಗಿದೆ.
ಈಗ ಲಸಿಕೆ ಕೊರತೆ: ಮೊದಮೊದಲು ಹೆಚ್ಚಿನ ಪ್ರಮಾಣದಲ್ಲಿ ಜನರು ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರಲಿಲ್ಲ. ಯಾವಾಗ ಕರೊನಾ 2ನೇ ಅಲೆ ಅಬ್ಬರ ಜೋರಾಯಿತೋ ಆಗ ಲಸಿಕೆಗೆ ಜನರು ಒಮ್ಮೆಲೆ ಮುಗಿಬಿದ್ದರು. ಹೀಗಾಗಿ ಲಸಿಕೆಯ ಅಭಾವ ಆರಂಭವಾಯಿತು. ಇದೀಗ ದಿನಕ್ಕೆ 3ರಿಂದ ಮೂರುವರೆ ಸಾವಿರದಷ್ಟು ಜನರಿಗೆ ಮಾತ್ರ ಲಸಿಕೆ ಹಾಕಲಾಗುತ್ತಿದೆ.

ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ, ಜಿಲ್ಲಾಸ್ಪತ್ರೆ, ತಾಲೂಕಾಸ್ಪತ್ರೆಯಲ್ಲಿ ಲಸಿಕೆ ನೀಡಲಾಗುತ್ತಿದೆ. ಸರ್ಕಾರಿ, ಅರೆ ಸರ್ಕಾರಿ ಹಾಗೂ ಸರ್ಕಾರೇತರ ಸಂಘ, ಸಂಸ್ಥೆಗಳಲ್ಲಿ ವಾರಿಯರ್ಸ್ ರೀತಿ ಕೆಲಸ ಮಾಡುವವರಿಗೂ ಅಭಿಯಾನದ ಮೂಲಕ ಲಸಿಕೆ ನೀಡಲಾಗುತ್ತಿದೆ. ವ್ಯಾಕ್ಸಿನ್ ಜಿಲ್ಲೆಗೆ ಪೂರೈಕೆಯಾದಂತೆ ಸ್ವಲ್ಪವೂ ವಿಳಂಬ ಮಾಡದೆ ನೀಡಲಾಗುತ್ತಿದೆ. ಇತ್ತೀಚೆಗೆ ಜಿಲ್ಲೆಗೆ ಹೆಚ್ಚಿನ ಪ್ರಮಾಣದಲ್ಲಿ ವ್ಯಾಕ್ಸಿನ್ ಬರುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಕ್ಸಿನ್ ಪೂರೈಕೆಯಾಗಲಿದೆ. ಆದಷ್ಟು ಶೀಘ್ರದಲ್ಲಿಯೇ ಗುರಿ ಸಾಧನೆ ಮಾಡುವ ವಿಶ್ವಾಸವಿದೆ. | ಡಾ. ಎಂ. ಜಯಾನಂದ, ಜಿಲ್ಲಾ ಆರ್​ಸಿಎಚ್ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net