ಕೊಳ್ಳೇಗಾಲ: ಪಟ್ಟಣದ ಸರ್ಕಾರಿ ಎಸ್‌ವಿಕೆ ಬಾಲಕಿಯರ ಶಾಲೆಯಲ್ಲಿ ಶನಿವಾರ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ, ಯೋಗ ದಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿಸುತ್ತದೆ. ಸತತವಾಗಿ ಅಧ್ಯಯನ ಮಾಡಲು ವಿದ್ಯಾರ್ಥಿಗಳಲ್ಲಿ ಏಕಾಗ್ರತೆಯನ್ನು ಹೆಚ್ಚಿಸಲಿದೆ. ಪ್ರತಿದಿನ ಅರ್ಧ ತಾಸು ಯೋಗ ಮಾಡುವುದನ್ನು ರೂಢಿಸಿಕೊಂಡಲ್ಲಿ ರೋಗಗಳಿಂದ ಮುಕ್ತಿ ಹೊಂದಬಹುದು ಎಂದು ತಿಳಿಸಿದರು.
ಬಾಲ್ಯದಲ್ಲಿಯೇ ವ್ಯಾಯಾಮ, ಯೋಗಾಸನ, ಕ್ರೀಡಾ ಚಟುವಟಿಕೆಗಳಲ್ಲಿ ಮಕ್ಕಳು ಭಾಗವಹಿಸಿದರೆ ಜೀವನವಿಡಿ ಲವಲವಿಕೆಯಿಂದ ಇರಲು ಸಾಧ್ಯ ಎಂದರು. ಶಾಲೆಯ ದೈಹಿಕ ಶಿಕ್ಷಕ ಉಮಾಶಂಕರ್‌ಯೋಗಾಸನದ ವಿವಿಧ ಭಂಗಿಗಳನ್ನು ಮಕ್ಕಳಿಗೆ ಹೇಳಿಕೊಟ್ಟರು. ಎಸ್‌ವಿಕೆ ಶಾಲೆಯ ಉಪ ಪ್ರಾಂಶುಪಾಲ ವಿಶ್ವನಾಥ್, ಶಿಕ್ಷಕರಾದ ದೊರೆಸ್ವಾಮಿ, ಲೋಕೇಶ್, ಧನಲಕ್ಷ್ಮೀ, ಮಲ್ಲಣ್ಣ, ಸವಿತಾ ಇತರರಿದ್ದರು.