ಲಲಿತೆಯ ಉಪಾಸನೆ ಭಾವ ಪ್ರಧಾನವಾದುದು

23gkn3
Published on

ಗೋಕರ್ಣ: ಕರ್ಮದಿಂದ, ಧನದಿಂದ, ವಂಶಪರಂಪರೆಯಿಂದ, ವಿಧಿಗಳಿಂದ ಶ್ರೀಲಲಿತಾದೇವಿಯನ್ನು ಒಲಿಸಿಕೊಳ್ಳಲಾಗದು. ಭಾವಭರಿತ ಅರ್ಥಾನು ಸಂಧಾನ ಮತ್ತು ತ್ಯಾಗ ಮುಖೇನ ಮಾತ್ರ ಆಕೆಯ ಒಲುಮೆ ಸಾಧ್ಯ ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ನವರಾತ್ರಿ ನಮಸ್ಯಾ ನಿಮಿತ್ತ ಸಾಗರದ ಶ್ರೀ ರಾಘವೇಶ್ವರ ಸಭಾಭವನದಲ್ಲಿ ನಡೆಯುತ್ತಿರುವ ಲಲಿತೋಪಾಖ್ಯಾನದಲ್ಲಿ ಎರಡನೆಯ ದಿನದ ಪ್ರವಚನದಲ್ಲಿ ಶ್ರೀಲಲಿತಾ ರಾಜರಾಜೇಶ್ವರಿಯ ಉಪಾಸನಾ ವಿಧಿಯನ್ನು ವರ್ಣಿಸಿದರು.

ತಾಯಿ ಲಲಿತೆಯ ಉಪಾಸನೆ ಭಾವ ಪ್ರಧಾನವಾದುದು. ವಿಧಿ ಮತ್ತು ಅವಿಧಿಯಿಂದಾದರೂ ಅಡ್ಡಿಯಿಲ್ಲ. ಭಾವ ಮುಖ್ಯ. ಶ್ಲೋಕದ ಅರ್ಥ ಅರಿತು ಅದರ ಜೊತೆಗೆ ಭಾವದ ಅನುಸಂಧಾನ ಆಗಬೇಕು. ಜೊತೆಗೆ ಮಹಾತ್ಯಾಗವೂ ಸೇರಿದಲ್ಲಿ ಅಮೃತತ್ವವನ್ನು ಆಕೆ ಅನುಗ್ರಹಿಸುವಳು. ಇದಕ್ಕೆ ದೇವೇಂದ್ರನ ನೇತೃತ್ವದಲ್ಲಿ ದೇವತೆಗಳು ಕೈಗೊಂಡ ದೈಹಿಕ ತ್ಯಾಗಯುಕ್ತವಾದ ಮಹಾಯಾಗ ಸಾರ್ವಕಾಲಿಕ ನಿದರ್ಶನವಾಗಿ ಇವತ್ತಿಗೂ ವಿಶ್ವದ ಮುಂದಿದೆ. ಮಹಾಯಾಗದ ಮೂಲಕ ಇಂದ್ರಾದಿ ದೇವತೆಗಳು ಅಂಗಾಂಗ, ಮಾಂಸ ಸಹಿತ ಸಂಪೂರ್ಣ ದೇಹ ಸಮರ್ಪಣೆಗೆ ಒಲಿದು ಪ್ರಾದುರ್ಭಾವವಾದ ಶ್ರೀಲಲಿತೆ ಯಾವ ವರ ಬೇಕಾದರೂ ಕೇಳು ಎಂದು ಇಂದ್ರನಿಗೆ ತಿಳಿಸುವಳು. ಯಾವುದೇ ವರದ ಬೇಡಿಕೆಯನ್ನು ತಾಯಿಯ ಮುಂದಿಡದ ದೇವೇಂದ್ರ, ಲಲಿತಾಸ್ತುವರವನ್ನು ಮಾತ್ರ ಪಠಿಸಿ ಭಂಡಾಸುರನಿಂದ ಸಮಸ್ತ ದೇವತೆಗಳಿಗಾದ ದುಸ್ಥಿತಿಯನ್ನು ವಿವರಿಸಿ ‘ಯಥಾ ಯೋಗ್ಯಂ ತಥಾ ಕುರು’ ಎಂದಷ್ಟೇ ಪ್ರಾರ್ಥಿಸುತ್ತಾನೆ. ಈ ಅಲ್ಪ ಪ್ರಾರ್ಥನೆಗೆ ಒಲಿದ ಆನಂದ ರಸ ಸಾಗರೆ ಮತ್ತು ಸೌಂದರ್ಯ ಸೀಮಾಂತಳಾದ ಶ್ರೀ ಲಲಿತೆ ಕೇವಲ ತನ್ನ ದೃಷ್ಟಿ ಪಾತದಿಂದ ದೇವತೆಗಳು ಸಶರೀರರಾಗುವಂತೆ ಮಾಡುವಳು. ಇದರ ಜೊತೆಗೆ ಮೊದಲಿಗಿಂತ ದೃಢತರ ದೇಹಿಗಳಾಗುವ ಕೃಪೆ ತೋರಿ ಭಯ ನಾಶ ಮಾಡಿ ದೇವತೆಗಳಿಗೆ ಪುನರುಜ್ಜೀವನ ನೀಡುವಳು. ಹೀಗೆ ನಾವು ಕೊಟ್ಟಿದ್ದಕ್ಕೆ ಮಿಗಿಲಾಗಿ ದಯಪಾಲಿಸುವ ಕಾಮಾಕ್ಷಿ ಲಲಿತಾ ತ್ರಿಪುರಸುಂದರಿ ಎನ್ನುವುದನ್ನು ಋಜುವಾಗಿಸುತ್ತಾಳೆ. ಕಾರಣ, ಉದ್ದನೆಯ ಹಗ್ಗ ಕಟ್ಟಿ ಹುಲ್ಲುಗಾವಲಿನಲ್ಲಿ ಮೇಯಲು ಬಿಟ್ಟ ಕರುವಿನಂತೆ ನಿಮ್ಮ ಮನಸು ಎಲ್ಲೆಲ್ಲೋ ಓಡಾಡದೆ ಶ್ರೀ ಲಲಿತಾ ಸ್ಮರಣೆಯ ಪರಿಧಿಯಲ್ಲಿಯೇ ಓಡಾಡಿ ಆಕೆಯ ನಾಮಗಳ ಎಳೆಹಸಿರು ಹುಲ್ಲನ್ನು ಮೇಯುವಂತಾಗಬೇಕು. ಆ ಮೂಲಕ ಆಕೆಯ ಉದಯ ಸೂರ್ಯ ಪ್ರಭೆ ನಿಮ್ಮನ್ನು ಆವರಿಸುವಂತಾಗಲಿ ಎಂದು ರಾಘವೇಶ್ವರ ಶ್ರೀಗಳು ಆಶೀರ್ವದಿಸಿದರು.

ಮಂಗಳವಾರದ ಸಮಾಜ ಸಂಭ್ರಮದಲ್ಲಿ ಮೊಗವೀರ ಸಮಾಜ ಅಧ್ಯಕ್ಷ ಸತೀಶ ಮೊಗವೀರ, ಗಂಗಾಮತಸ್ಥ ಸಮಾಜ ಅಧ್ಯಕ್ಷ ಶಿವಾನಂದ, ಬಂಟ ಯಾನೆ ನಾಡವ ಸಮಾಜ ಅಧ್ಯಕ್ಷ ಸುಧೀರ ಶೆಟ್ಟಿ ,ರಾಮಕ್ಷತ್ರಿಯ ಸಮಾಜ ಅಧ್ಯಕ್ಷ ಗಣೇಶ ಸಮಾಜ ಗೌರವ ಸ್ವೀಕರಿಸಿದರು. ಶ್ರೀಕ್ಷೇತ್ರ ವರದಹಳ್ಳಿಯ ಅಧ್ಯಕ್ಷ ಎಂ.ಜಿ.ಕೃಷ್ಣಮೂರ್ತಿ ಶ್ರೀಧರ ಸೇವಾ ಮಂಡಳಿಗೆ ಕೊಡಮಾಡಿದ ಗೌರವವನ್ನು ಸ್ವೀಕರಿಸಿದರು. ಹೊಸನಗರ ತಾಪಂ ಮಾಜಿ ಅಧ್ಯಕ್ಷೆ ಸುಮಾ ಸುಬ್ರಹ್ಮಣ್ಯ ಮತ್ತಿತರರು ಶ್ರೀಗಳ ಆಶೀರ್ವಾದ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net