

ಮೈಸೂರು: ಕೆ.ಆರ್.ಕ್ಷೇತ್ರದ ಫಲಾನುಭವಿಗಳಿಗೆ ಚಾಮುಂಡಿಬೆಟ್ಟದ ತಪ್ಪಲಿನ ಲಲಿತಾದ್ರಿಪುರದಲ್ಲಿ ಬಹುಮಹಡಿ ವಸತಿ ಸಮುಚ್ಚಯ ಕಟ್ಟಡ ನಿರ್ಮಾಣವಾಗುತ್ತಿದ್ದು, 2026ರ ಡಿಸೆಂಬರ್ ಒಳಗೆ ಪೂರ್ಣಗೊಳಿಸಿ ಮನೆಗಳ ಹಕ್ಕುಪತ್ರ ವಿತರಿಸಲಾಗುವುದು ಎಂದು ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.
ಕೆ.ಆರ್.ಕ್ಷೇತ್ರದ ಗುಂಪು ಮನೆಗಳ ಫಲಾನುಭವಿಗಳಿಗೆ ಪುರಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಲ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಈ ಕ್ಷೇತ್ರದ ಬಡವರಿಗೆ ಆಶ್ರಯ ಮನೆ ನೀಡಲು ಅರ್ಜಿ ಆಹ್ವಾನಿಸಲಾಗಿತ್ತು. ಆಯ್ಕೆಯಾದ ಫಲಾನುಭವಿಗಳಲ್ಲಿ 940 ಜನರು ಮಾತ್ರ ಹಣ ಪಾವತಿಸಿದ್ದು, ಉಳಿದ 500 ಮನೆಗಳನ್ನು ವರುಣ ಕ್ಷೇತ್ರದ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಮಂಜೂರು ಮಾಡಿ ಯೋಜನೆ ಪೂರ್ಣಗೊಳಿಸಲಾಗುವುದು ಎಂದರು.
2026ರೊಳಗೆ ಈ ಯೋಜನೆಯನ್ನು ಪೂರ್ಣಗೊಳಿಸಲು ಫಲಾನುಭವಿಗಳು ತಮ್ಮ ವಂತಿಗೆ ಪಾವತಿಸುವಂತೆ ಸರ್ಕಾರ ಸೂಚಿಸಿದೆ. 75 ಸಾವಿರ ರೂ., 1 ಲಕ್ಷ ರೂ.ಪಾವತಿ ಮಾಡಿದವರು ಉಳಿದ ಮೊತ್ತ ಪಾವತಿಸಬೇಕು. ಇದಲ್ಲದೆ, ಸಬ್ಸಿಡಿ ಮೊತ್ತವನ್ನು ಬಿಟ್ಟು ಉಳಿಕೆ 7.44 ಲಕ್ಷ ರೂ.ಹಣವನ್ನು ಕಟ್ಟುವುದು ಕಷ್ಟಕರವಾಗಲಿದೆ ಎಂಬ ಕಾರಣಕ್ಕಾಗಿ ರಾಜ್ಯಸರ್ಕಾರವು ಹೆಚ್ಚುವರಿಯಾಗಿ 4 ಲಕ್ಷ ರೂ. ವಂತಿಗೆಯಾಗಿ ಕಟ್ಟಲು ತೀರ್ಮಾನಿಸಿದೆ. ಇದಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಗುವ ವಿಶ್ವಾಸ ಇದೆ ಎಂದರು.
ಫಲಾನುಭವಿಗಳು ಪಾವತಿಸಬೇಕಿರುವ ಮೊತ್ತಕ್ಕೆ ಬ್ಯಾಂಕ್‌ನಿಂದ ಸಾಲ ಕೊಡಿಸಲು ಸಾಲ ಮೇಳ ಆಯೋಜನೆ ಮಾಡಲಾಗಿದೆ. ಪಾಲಿಕೆ, ಬ್ಯಾಂಕ್‌ಗಳು ಮತ್ತು ಫಲಾನುಭವಿಗಳ ನಡುವೆ ಒಪ್ಪಂದವಾಗಿ ಸಾಲ ಕೊಡಲಿದ್ದಾರೆ. ಮನೆ ಮಂಜೂರಾಗಿರುವ ಫಲಾನುಭವಿಗಳಿಗೆ ಸಾಲ ಮಂಜೂರಾದ ಮೇಲೆ ಮುಂದೆ ಸಾಲ ಹಣ ಕಟ್ಟಬೇಕು.
ಬಹುಮಹಡಿ ವಸತಿ ಸಮುಚ್ಚಯದ ನಿರ್ಮಾಣದ ಹೊಣೆ ಹೊತ್ತಿರುವ ಗುತ್ತಿಗೆದಾರರು 3 ಅಂತಸ್ತು ಕಟ್ಟಿದ್ದು, ಇನ್ನೂ 5 ಅಂತಸ್ತು ಕಟ್ಟಡ ಕಾಮಗಾರಿ ನಡೆಯಲಿದೆ. ಇದು ಮುಗಿದ ನಂತರ ಹಕ್ಕುಪತ್ರ ವಿತರಿಸಲಾಗುವುದು ಎಂದರು.
ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಒಂದು ಮನೆಗೆ 13.44 ಲಕ್ಷ ರೂ. ವೆಚ್ಚವಾಗಲಿದೆ.
ಕೇಂದ್ರ, ರಾಜ್ಯಸರ್ಕಾರದ ಸಬ್ಸಿಡಿ, ವಂತಿಗೆ ಹಣ ಬಿಟ್ಟು ಉಳಿದ ಹಣಕ್ಕೆ ಸಾಲ ಕೊಡಿಸಲಾಗುವುದು. 15 ರಾಷ್ಟ್ರೀಕೃತ ಹಾಗೂ ಮೂರು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಸಾಲ ಕೊಡಲು ಮುಂದಾಗಿವೆ. ಫಲಾನುಭವಿಗಳು ಹಣ ಕಟ್ಟುವುದು ವಿಳಂಬ ಮಾಡಿದರೆ ಕಟ್ಟಡ ಕಾಮಗಾರಿ ನಿಧಾನವಾಗಿದೆ.
ಕಾಮಗಾರಿ ಮುಗಿಯದಿದ್ದರೆ ಹಕ್ಕುಪತ್ರ ಸಿಗುವುದು ತಡವಾಗಲಿದೆ. ಆದ್ದರಿಂದ ಫಲಾನುಭವಿಗಳು ಉಳಿಕೆ ವಂತಿಗೆ ಹಣವನ್ನು ಪಾವತಿಸಬೇಕು ಎಂದು ತಿಳಿಸಿದರು.
ಪಾಲಿಕೆ ಹೆಚ್ಚುವರಿ ಆಯುಕ್ತೆ ಕುಸುಮಕುಮಾರಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಕೃಷ್ಣಮೂರ್ತಿ, ಆಶ್ರಯ ಸಮಿತಿ ಸದಸ್ಯರಾದ ಗುಣಶೇಖರ್, ಫಾರೂಕ್, ಸೋಮಣ್ಣ, ನೀಲಾ ಪಂಪಾವತಿ, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ಅಧಿಕಾರಿ ವಿಜಯೇಂದ್ರ ಇದ್ದರು.
ಕೆ.ಆರ್. ಕ್ಷೇತ್ರದ ನಿವಾಸಿಗಳಿಗೆ ನಿವೇಶನ ಹಂಚಿಕೆ ಮಾಡಲು ಲಲಿತಾದ್ರಿಪುರ ಬಳಿ 13.5 ಎಕರೆ ಪ್ರದೇಶದಲ್ಲಿ ಬಹುಮಹಡಿ ವಸತಿ ಸಮುಚ್ಚಯ ನಿರ್ಮಾಣ ಕೆಲಸವನ್ನು 202 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ.
ಎಸ್‌ಸಿ-ಎಸ್‌ಟಿ ಫಲಾನುಭವಿಯು 1.20 ಲಕ್ಷ ರೂ., ಹಿಂದುಳಿದ ವರ್ಗ, ಸಾಮಾನ್ಯ ವರ್ಗದವರು 1.50 ಲಕ್ಷ ರೂ. ವಂತಿಗೆ ಪಾವತಿಸಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಸಬ್ಸಿಡಿ ಎಸ್‌ಸಿ-ಎಸ್‌ಟಿ ಫಲಾನುಭವಿಗಳಿಗೆ 2.50 ಲಕ್ಷ ರೂ. ಒಬಿಸಿ, ಸಾಮಾನ್ಯ ವರ್ಗದವರಿಗೆ 2 ಲಕ್ಷ ರೂ. ದೊರೆಯಲಿದೆ.
ಉಳಿಕೆ ಹಣಕ್ಕಾಗಿ ಬ್ಯಾಂಕ್‌ನಿಂದ ಸಾಲವನ್ನು ಕೊಡಿಸುವ ಕೆಲಸವಾಗಲಿದೆ. ಎಸ್‌ಬಿಐ, ಎಚ್‌ಡಿಎಫ್‌ಸಿ, ಕರ್ಣಾಟಕ ಬ್ಯಾಂಕ್, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಐಸಿಐಸಿಐ ಬ್ಯಾಂಕ್, ಯೂನಿಯನ್ ಬ್ಯಾಂಕ್, ಕರ್ನಾಟಕ ಗ್ರಾಮೀಣ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೇರಿದಂತೆ ಇನ್ನಿತರ ಬ್ಯಾಂಕ್ ಪ್ರತಿನಿಧಿಗಳು ಹಾಜರಿದ್ದು ನೋಂದಣಿ ಮಾಡಿಸಿಕೊಂಡರು.