ಲಲಿತಕಲೆ ಶಿಕ್ಷಕರ ನೇಮಕಾತಿಗೆ ಆಗ್ರಹ  -ಎಐಡಿವೈಒ ಸಂಘಟನೆ ಪ್ರತಿಭಟನೆ

IMG-20231128-WA0050.jpg
Published on

ದಾವಣಗೆರೆ: ಸಂಗೀತ, ಚಿತ್ರಕಲೆ ಹಾಗೂ ರಂಗಕಲಾ ಶಿಕ್ಷಕರ ನೇಮಕಾತಿಗಾಗಿ ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ ಜಿಲ್ಲಾ ಸಮಿತಿ ವತಿಯಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಜಯದೇವ ವೃತ್ತದಿಂದ ಮೆರವಣಿಗೆ ನಡೆಸಿದ ಸಮಿತಿ ಕಾರ್ಯಕರ್ತರು, ದೃಶ್ಯಕಲಾ ಕಾಲೇಜಿನ ವಿದ್ಯಾರ್ಥಿಗಳು ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಎಸಿ ದುರ್ಗಾಶ್ರೀ ಅವರಿಗೆ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿದೆ. ಈ ಸಾಲಿಗೆ ಸಂಗೀತ, ಚಿತ್ರಕಲೆ, ನೃತ್ಯ ಮತ್ತು ನಾಟಕ ವಿಷಯಗಳಲ್ಲಿ ಪದವಿ ಪಡೆದವರೂ ಇದ್ದಾರೆ. ಗುತ್ತಿಗೆ ಆಧಾರ ಅಥವಾ ಅತಿಥಿ ರೂಪದಲ್ಲಿ ಶಿಕ್ಷಕರು ಕೆಲಸ ಮಾಡುತ್ತಿದ್ದು, ಗೌರವಯುತ ಜೀವನ ನಡೆಸುವುದು ಕಷ್ಟವಾಗಿದೆ. ಕೂಡಲೆ ಎಲ್ಲಾ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಸಂಗೀತ, ಚಿತ್ರಕಲೆ, ರಂಗ ಕಲಾ ಶಿಕ್ಷಕರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಅಲ್ಪಸಂಖ್ಯಾತ, ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲದೆ ಎಲ್ಲಾ ಸರ್ಕಾರಿ ಶಾಲೆಗಳಿಗೆ ಈ ಎಲ್ಲ ಸಹಪಠ್ಯ ವಿಷಯಗಳಿಗೆ ಕಾಯಂ ಶಿಕ್ಷಕರನ್ನು ನೇಮಿಸಬೇಕು. ಕಡಿಮೆ ದಾಖಲಾತಿಯ ಕಾರಣಕ್ಕೆ ಈ ಹುದ್ದೆಗಳನ್ನು ರದ್ದುಪಡಿಸುವುದನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ಸಂಘಟನೆ ಜಿಲ್ಲಾ ಸಂಚಾಲಕ ಪರಶುರಾಮ್ ಮಾತನಾಡಿ, ರಾಜ್ಯದ 5240 ಸರ್ಕಾರಿ ಪ್ರೌಢಶಾಲೆಗಳಿದ್ದು, ಒಟ್ಟು ಬೋಧಕರ ಸಂಖ್ಯೆ 1500 ಕೂಡ ದಾಟುವುದಿಲ್ಲ. ಇವರಲ್ಲಿ ಅನೇಕರು ನಿವೃತ್ತಿ ಅಂಚಿನಲ್ಲಿದ್ದಾರೆ. ಮಕ್ಕಳ ಕಡಿಮೆ ದಾಖಲಾತಿ ಕಾರಣಕ್ಕೆ ಕೆಲವರನ್ನು ಬೇರೆ ಶಾಲೆಗಳಿಗೆ ಅವೈಜ್ಞಾನಿಕವಾಗಿ ವರ್ಗಾಯಿಸಲಾಗುತ್ತಿದೆ ಎಂದು ಟೀಕಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಸಂಘಟನಾಕಾರರಾದ ಅನಿಲ್ ಕುಮಾರ್, ಗುರು, ರಾಘವೇಂದ್ರ ಹಾಗೂ ದೃಶ್ಯಕಲಾ ಕಾಲೇಜಿನ ವಿದ್ಯಾರ್ಥಿಗಳಾದ ಕಾವ್ಯಾ, ಆರ್ಶಿಯಾ, ಶಿಲ್ಪಾ, ಸುಶ್ಮಿತಾ, ಲೇಖಕ್, ಗುರುಪ್ರಸಾದ್, ಲಕ್ಷ್ಮಣ್, ಸಬ್ರೀನ್, ಅನುಷಾ, ಗೌತಮ್, ವಿಠಲ್, ನಾಗರಾಜ್ ಇತರರು ಪಾಲ್ಗೊಂಡಿದ್ದರು.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net