ಲಲಿತ ಕಲೆಗಳತ್ತ ಯುವಜನರ ಚಿತ್ತ!

img_5360
Published on

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ಮೈಸೂರು ವಿಶ್ವವಿದ್ಯಾಲಯದ ಲಲಿತಕಲಾ ಕಾಲೇಜಿಗೆ ಇದೀಗ ಶುಕ್ರದೆಸೆ ಬಂದಿದೆ. ವಿವಿ ವ್ಯಾಪ್ತಿಯ ಕಾಲೇಜು ಸೇರಿದಂತೆ ಅನ್ಯ ಕಾಲೇಜಿನ ಪದವಿ ವಿದ್ಯಾರ್ಥಿಗಳು ಇಲ್ಲಿ ಸಂಗೀತ, ನೃತ್ಯ, ನಾಟಕ ಕಲಿಕೆಗೆ ಆಸಕ್ತಿ ತೋರುತ್ತಿದ್ದಾರೆ.

ರಾಜ್ಯದಲ್ಲೇ ಮೊದಲ ಬಾರಿಗೆ ಮೈಸೂರು ವಿಶ್ವವಿದ್ಯಾಲಯ ರಾಷ್ಟ್ರೀಯ ಶಿಕ್ಷಣ ನೀತಿ-2020(ಎನ್‌ಇಪಿ) ಜಾರಿ ಮಾಡಿದೆ. ಇದರ ಅನ್ವಯ ಮುಖ್ಯ ವಿಷಯದೊಂದಿಗೆ ಆಸಕ್ತಿಕರ ವಿಷಯ ಕಲಿಕೆಗೆ ಅವಕಾಶ ದೊರೆತಿದೆ. ಸದ್ಯಕ್ಕೆ ಇದನ್ನು ಸದ್ಬಳಕೆ ಮಾಡಿಕೊಂಡಿರುವ ಮೈಸೂರು ವಿವಿ ವ್ಯಾಪ್ತಿಯ ಕಾಲೇಜುಗಳ ವಿಜ್ಞಾನ, ವಾಣಿಜ್ಯ ನಿಕಾಯದ ವಿದ್ಯಾರ್ಥಿಗಳು ಪ್ರದರ್ಶಕ ಕಲೆಗಳ ಕಲಿಕೆಗೆ ಮುಂದಾಗಿದ್ದಾರೆ. ವಿವಿ ವ್ಯಾಪ್ತಿಯ ಕಾಲೇಜುಗಳಲ್ಲದೆ, ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳೂ ಇಲ್ಲಿ ಕಲಿಯಬಹುದಾಗಿದೆ.

ಎನ್‌ಇಪಿಯಲ್ಲಿ ಅವಕಾಶ: ಈ ಹಿಂದೆ ಪದವಿ ವಿದ್ಯಾರ್ಥಿಗಳು ಮೂರು ಐಚ್ಛಿಕ ವಿಷಯಗಳೊಂದಿಗೆ ಎರಡು ಭಾಷೆಗಳನ್ನು ಅಧ್ಯಯನ ಮಾಡುತ್ತಿದ್ದರು. ಇದನ್ನು ಹೊರತುಪಡಿಸಿ ಬೇರೆ ವಿಷಯಗಳ ಕಲಿಕೆಗೆ ಅವಕಾಶ ಇರಲಿಲ್ಲ. ಆದರೀಗ ಎನ್‌ಇಪಿಯಲ್ಲಿ ಎರಡು ವಿಷಯಗಳ 4 ಪೇಪರ್ + ಮುಕ್ತ ಆಯ್ಕೆಯ ಒಂದು ಪೇಪರ್ + 2 ಭಾಷೆಗಳನ್ನು ಅಧ್ಯಯನ ಮಾಡಬೇಕಿದೆ. ಮುಕ್ತ ಆಯ್ಕೆಯಲ್ಲಿ ವಿದ್ಯಾರ್ಥಿಗಳು ತಾವು ಕಲಿಯುತ್ತಿರುವ ಕೋರ್ಸ್‌ಗೆ ಸಂಬಂಧವಿಲ್ಲದ ಇನ್ನೊಂದು ವಿಷಯವನ್ನು ಕಲಿಯಬೇಕಾಗಿರುವುದು ಕಡ್ಡಾಯ.

ಕಾಲೇಜಿಗೆ ಜೀವಕಳೆ:
ಮುಕ್ತ ಆಯ್ಕೆ ಎಂದರೆ ಯಾವುದೇ ಪ್ರೋಗ್ರಾಂನ ವಿದ್ಯಾರ್ಥಿ ಇನ್ನಾವುದೇ ಪ್ರೋಗ್ರಾಂನ ಒಂದು ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು. ಉದಾಹರಣೆಗೆ ಇತಿಹಾಸ, ಅರ್ಥಶಾಸ್ತ್ರದ ಜತೆಗೆ ಭೌತಶಾಸ್ತ್ರ, ವಾಣಿಜ್ಯಶಾಸ್ತ್ರ ಏನಾದರೂ ತೆಗೆದುಕೊಳ್ಳಬಹುದು. ಆದರೆ, ತಮ್ಮದೇ ಪ್ರೋಗ್ರಾಂನ ಇನ್ನೊಂದು ವಿಷಯವನ್ನು ತೆಗೆದುಕೊಳ್ಳಲು ಅವಕಾಶ ಇಲ್ಲ.

ಈ ಹಿನ್ನೆಲೆಯಲ್ಲಿ ವಾಣಿಜ್ಯ, ವಿಜ್ಞಾನ ನಿಕಾಯದ ವಿದ್ಯಾರ್ಥಿಗಳು ಮಾನವಿಕ ವಿಷಯಗಳ ಕಲಿಕೆಗೆ ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ. ಬದಲಿಗೆ ಮನೋಲ್ಲಾಸ ಉಂಟುಮಾಡುವ ಸಂಗೀತ, ಗಾಯನ, ನೃತ್ಯ, ನಾಟಕ ಅಭ್ಯಾಸದತ್ತ ಹೆಚ್ಚು ಆಕರ್ಷಿತರಾಗಿದ್ದಾರೆ. ಇದರ ಫಲವಾಗಿ ವಿವಿಧ ಕೋರ್ಸ್‌ಗಳ ವಿದ್ಯಾರ್ಥಿಗಳು ಲಲಿತಕಲಾ ಕಾಲೇಜಿನ ಕಡೆಗೆ ಮುಖ ಮಾಡುತ್ತಿದ್ದಾರೆ. ಗಣಿತ, ವಿಜ್ಞಾನ ನಿಕಾಯದ ವಿದ್ಯಾರ್ಥಿಗಳೇ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಿದ್ದಾರೆ. ಇದರಿಂದಾಗಿ ಲಲಿತಕಲಾ ಕಾಲೇಜಿಗೆ ಇನ್ನಷ್ಟು ಜೀವಕಳೆ ಬಂದಿದೆ.

ಉತ್ಸುಕತೆಯಲ್ಲಿ ಕಲಿಕಾರ್ಥಿಗಳು:
ಮುಕ್ತ ಆಯ್ಕೆ ವಿಷಯದ ತರಗತಿಗಳು ಪ್ರತಿ ಶನಿವಾರ ನಡೆಯುತ್ತವೆ. ಇಲ್ಲಿ ಸಂಗೀತ, ನಾಟಕ, ನೃತ್ಯ ಕಲಿಸಲಾಗುತ್ತಿದೆ. ಪ್ರಾಯೋಗಿಕ ತರಗತಿಗಳು, ಥಿಯರಿ ಕ್ಲಾಸ್‌ಗಳಿಂದ ಏಕತಾನತೆ ಅನುಭವಿಸುತ್ತಿರುವ ವಿದ್ಯಾರ್ಥಿಗಳು ಪ್ರದರ್ಶಕ ಕಲೆಗಳ ಕಲಿಕೆಯಲ್ಲಿ ಲವಲವಿಕೆಯಿಂದ ತೊಡಗಿಕೊಳ್ಳುತ್ತಿರುವುದು ವಿಶೇಷ.

ಸಂಗೀತ ವಿವಿ ಪ್ರಭಾವ ಇಲ್ಲ:
ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ದಶಕಗಳ ಹಿಂದೆ ಮೈಸೂರಿನಲ್ಲೇ ಸ್ಥಾಪನೆಯಾಗಿದ್ದರೂ ಮೈಸೂರು ವಿ.ವಿ. ಲಲಿತಕಲಾ ಕಾಲೇಜಿಗೆ ಯಾವುದೇ ರೀತಿ ಸ್ಪರ್ಧಾತ್ಮಕ ಪರಿಣಾಮ ಬೀರಿಲ್ಲ. ಹೀಗಾಗಿ, ಇದು ಅಬಾಧಿತವಾಗಿ ಮುಂದುವರಿಯುತ್ತಿದೆ. ಉತ್ತಮ ಮೂಲಸೌಕರ್ಯಗಳು, ನುರಿತ ಬೋಧಕರಿಂದ ಲಲಿತಕಲಾ ಕಾಲೇಜು ಈಗಲೂ ವಿದ್ಯಾರ್ಥಿಗಳನ್ನು ಆಕರ್ಷಿಸಲು ಯಶಸ್ವಿಯಾಗಿದೆ. ಈ ಕಾಲೇಜು ಹೊಂದಿರುವಷ್ಟು ಉತ್ತಮ ಕಟ್ಟಡ, ಮೂಲಸೌಕರ್ಯಗಳು ಸಂಗೀತ ವಿವಿಗೆ ಇನ್ನೂ ಪಡೆದುಕೊಳ್ಳಲು ಆಗಿಲ್ಲ.

ಸಾಮಾನ್ಯ ಕಾಲೇಜಿನಲ್ಲಿರುವುದಕ್ಕಿಂತ ಇಲ್ಲಿ ವಿಭಿನ್ನ ರೀತಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಲಾಗಿದೆ. ಇದರೊಂದಿಗೆ, ಪ್ರದರ್ಶಕ ಕಲೆಗಳ ಕಲಿಕೆಗೆ ಅನುಕೂಲಕರ ಮತ್ತು ಉತ್ತಮ ವಾತಾವರಣವನ್ನು ವೈಜ್ಞಾನಿಕವಾಗಿ ಸೃಷ್ಟಿಸಲಾಗಿದೆ. ಆದ್ದರಿಂದ ಸಂಗೀತ, ನಾಟಕ, ನೃತ್ಯ ಸೇರಿದಂತೆ ಇನ್ನಿತರ ಪ್ರದರ್ಶಕ ಕಲೆಗಳನ್ನು ಕಲಿಯಲು ವಿದ್ಯಾರ್ಥಿಗಳು ಮೈವಿವಿ ಅಧೀನದ ಈ ಕಾಲೇಜನ್ನೇ ಆಯ್ದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಇದು ಹೊಸ ಚೈನತ್ಯದೊಂದಿಗೆ ಮುನ್ನುಗುತ್ತಿದೆ.

ಯಾವ ಕೋರ್ಸ್‌ಗಳಿವೆ?:

ಕಾಲೇಜಿನ ಸ್ನಾತಕೋತ್ತರ ವಿಭಾಗದಲ್ಲಿ(ಎಪಿಎ) ಎಂ.ಮ್ಯೂಸಿಕ್, ಎಂ.ಡಾನ್ಸ್ ಕೋರ್ಸ್‌ಗಳಿವೆ. ಸ್ನಾತಕ ವಿಭಾಗವಾದ ಬಿ.ಪಿ.ಎ. ಕೋರ್ಸ್‌ನಲ್ಲಿ ಸಂಗೀತ (ಕೊಳಲು, ಪಿಟೀಲು), ನೃತ್ಯ (ಭರತನಾಟ್ಯ), ನಾಟಕ, ಗಮಕ, ಮೃದಂಗ ಕಲಿಸಲಾಗುತ್ತದೆ. ಇದರೊಂದಿಗೆ, ಕನ್ನಡ ಭಾಷೆ, ಕನ್ನಡ ಐಚ್ಛಿಕ, ಆಂಗ್ಲ ಭಾಷೆಯಿದ್ದು, ಹಿಂದಿ, ತೆಲುಗು, ತಮಿಳು ಸ್ವಯಂ ಅಧ್ಯಯನ ಮಾಡಿಕೊಳ್ಳಬೇಕಿದೆ. ಡಿಪ್ಲೊಮಾ ಕೋರ್ಸ್‌ನಲ್ಲಿ ಡಿಪ್ಲೊಮಾ ಇನ್ ಮೃದಂಗ ಸಹ ಅಧ್ಯಯನ ಮಾಡಬಹುದಾಗಿದೆ.

1965ರಲ್ಲಿ ಕಾಲೇಜು ಆರಂಭ
ಲಲಿತ ಕಲೆಗಳ ಸಂರಕ್ಷಣೆ, ಪ್ರಸಾರ, ಪ್ರಚಾರ ಮಾಡುವ ಉದ್ದೇಶದಿಂದ 1965ರಲ್ಲಿ ಮೈವಿವಿ ಈ ಕಾಲೇಜನ್ನು ಪ್ರಾರಂಭಿಸಿತು. ಮಾನಸಗಂಗೋತ್ರಿ ಕ್ಯಾಂಪಸ್‌ನಲ್ಲಿರುವ ಇದು ಪ್ರತ್ಯೇಕ ಕಟ್ಟಡದೊಂದಿಗೆ ವಿಸ್ತಾರವಾಗಿ ಬೆಳೆದಿದೆ. ಇಂದು ದೇಶದ ಉನ್ನತ ಲಲಿತ ಕಲಾ ಸಂಸ್ಥೆಗಳಲ್ಲಿ ಒಂದಾಗಿ ರೂಪುಗೊಂಡಿದೆ. ಇಲ್ಲಿ ಪ್ರಖ್ಯಾತ ಪಿಟೀಲು ವಿದ್ವಾಂಸ ಡಾ.ಮೈಸೂರು ಮಂಜುನಾಥ್ ಸಹ ಪ್ರಾಧ್ಯಾಪಕರು. ವಿದ್ಯಾರ್ಥಿಗಳಿಗೆ ಇವರು ಸಂಗೀತ (ಪಿಟೀಲು) ಕಲಿಸಿಕೊಡುತ್ತಿದ್ದಾರೆ. ಉಳಿದಂತೆ ಸಹ ಪ್ರಾಧ್ಯಾಪಕರಾದ ಡಾ.ಸಿ.ಎ.ಶ್ರೀಧರ ಅವರು ಸಂಗೀತ (ಕೊಳಲು), ಡಾ.ಎಚ್.ಕೆ.ಶೀಲಾ ಮತ್ತು ಡಾ.ಕೆ.ಕುಮಾರ್ ಅವರು ನೃತ್ಯವನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡುತ್ತಾರೆ.

ಖಾಸಗಿ ಸಂಸ್ಥೆಗಳಿಗಿಂತ ಶುಲ್ಕ ಕಡಿಮೆ
ಖಾಸಗಿ ಸಂಸ್ಥೆ, ಅಕಾಡೆಮಿಗಳಿಗೆ ಹೋಲಿಕೆ ಮಾಡಿದರೆ ಇಲ್ಲಿ ಶುಲ್ಕ ಬಹಳ ಕಡಿಮೆ ಇದೆ. 10,000 ರೂ.ಗಳಿಂದ 12 ಸಾವಿರ ರೂ. ಒಳಗೆ ವಾರ್ಷಿಕ ಶುಲ್ಕವಿದೆ. ಖಾಸಗಿ ಸಂಸ್ಥೆಗಳಿಂದ ಪಡೆದುಕೊಂಡ ಪ್ರಮಾಣಪತ್ರಕ್ಕೆ ಮಾನ್ಯತೆ ಇರಲ್ಲ. ಇಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಮೈವಿವಿಯಿಂದ ಅಧಿಕೃತವಾಗಿ ಪ್ರಮಾಣಪತ್ರ, ಅಂಕಪಟ್ಟಿ, ಘಟಿಕೋತ್ಸವ ಪ್ರಮಾಣ ದೊರೆಯಲಿದ್ದು, ಇದು ಮುಂದಿನ ಕಲಿಕೆ, ಉದ್ಯೋಗಕ್ಕೂ ಹೆಚ್ಚಿನ ಮನ್ನಣೆ, ಅರ್ಹತೆ ಪಡೆದುಕೊಂಡಿದೆ. ಆದ್ದರಿಂದ ಖಾಸಗಿ ಸಂಸ್ಥೆಗಳನ್ನು ಬಿಟ್ಟು ವಿದ್ಯಾರ್ಥಿಗಳು ಇಲ್ಲಿ ಕಲಿಯಲು ಆಸಕ್ತಿ ತೋರುತ್ತಿದ್ದಾರೆ.

ಎನ್‌ಇಪಿ ಅಡಿ ಅವಕಾಶ ನೀಡಿರುವ ಮುಕ್ತ ಆಯ್ಕೆ ಪದ್ಧತಿಯಿಂದ ಅನ್ಯ ಕೋರ್ಸ್‌ಗಳ ವಿದ್ಯಾರ್ಥಿಗಳು ಪ್ರದರ್ಶಕ ಕಲೆಗಳನ್ನು ಕಲಿಯಲು ಉತ್ಸುಕತೆ ತೋರುತ್ತಿದ್ದಾರೆ. ಅವರಿಗಾಗಿ ಶನಿವಾರ ಪ್ರತ್ಯೇಕ ತರಗತಿಗಳನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಆಸಕ್ತಿಯಿಂದ ಕಲಿಯುತ್ತಿದ್ದಾರೆ.
> ಅನಿತಾ ವಿಮ್ಲಾ ಬ್ರಾಗ್ಸ್
ಪ್ರಾಂಶುಪಾಲರು, ಲಲಿತಕಲಾ ಕಾಲೇಜು, ಮೈವಿವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net