

ನಂಜನಗೂಡು: ಲಯನ್ಸ್ ಇಂಟರ್ ನ್ಯಾಷನಲ್ ಸಂಸ್ಥೆ ವಿದ್ಯಾದಾನದ ಜತೆಗೆ ಸಾರ್ವಜನಿಕರ ಆರೋಗ್ಯದ ಮೇಲೂ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿದೆ ಎಂದು ಲಯನ್ ಸಂಸ್ಥೆಯ ಸಂಯೋಜಕ ಕೆ.ದೇವೇಗೌಡ ಅಭಿಪ್ರಾಯಪಟ್ಟರು.
ನಗರದ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ಲಯನ್ ಸಂಸ್ಥೆ ನಂಜನಗೂಡು ವತಿಯಿಂದ ಶನಿವಾರ ಆಯೋಜಿಸಿದ್ದ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಲಯನ್ಸ್ ಸಂಸ್ಥೆ ಈ ಭಾಗದ ಮಕ್ಕಳಿಗೆ ವಿದ್ಯಾದಾನ ಮಾಡಿ ಒಳ್ಳೆಯ ಸ್ಥಾನಮಾನಗಳನ್ನು ಒದಗಿಸಿಕೊಟ್ಟಿದೆ. ಕರ್ನಾಟಕ, ಗೋವಾ, ಆಂಧ್ರಪ್ರದೇಶ, ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಸಂಸ್ಥೆಗೆ ಸೇರಿದ ಆಸ್ಪತ್ರೆಗಳು ಇವೆ. ಮೈಸೂರು ಮತ್ತು ಚಾಮರಾಜನಗರ ಸೇರಿದಂತೆ ವಿವಿಧ ಜಿಲ್ಲೆಯ ಸಾವಿರಕ್ಕೂ ಹೆಚ್ಚು ಬಡಜನರಿಗೆ ಪರೀಕ್ಷೆ ಮಾಡಿಸಿ ಸುಮಾರು 3 ಕೋಟಿ ರೂ.ವೆಚ್ಚದಲ್ಲಿ ಚಿಕಿತ್ಸೆ ಕೊಡಿಸಿದ್ದೇವೆ. ಜತೆಗೆ ಶಾಲಾ ಕಾಲೇಜುಗಳು ಹಾಗೂ ಡಯಾಲಿಸಿಸ್ ಕೇಂದ್ರಗಳಿವೆ. ಅನನುಕೂಲ ಇರುವ ಜನರಿಗೆ ಲಯನ್ ಸಂಸ್ಥೆ ಆಶಾಕಿರಣವಾಗಿದೆ ಎಂದರು.
ಸಂಸ್ಥೆಯ ನಂಜನಗೂಡು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಲಯನ್ ಕೆ.ಮಹೇಶ್ ಮಾತನಾಡಿ, ಪ್ರತಿ ತಿಂಗಳು ಸಂಸ್ಥೆ ಮತ್ತು ಸಾರ್ವಜನಿಕರಿಗೆ ಆರೋಗ್ಯ ಶಿಬಿರ, ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆ, ಅನಾಥರಿಗೆ ಬಟ್ಟೆ ಊಟ ಸೇರಿದಂತೆ ಹಲವು ಸೇವಾ ಕಾರ್ಯಗಳನ್ನು ನಡೆಸಿಕೊಂಡು ಹೋಗುತ್ತೇವೆ ಎಂದರು.
ಸಮಾರಂಭದಲ್ಲಿ 2025-26ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ವೈದ್ಯರ ದಿನಾಚರಣೆ ಹಿನ್ನೆಲೆ ಇಬ್ಬರು ವೈದ್ಯರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು.
ಇಬ್ಬರು ಬಡ ಮಹಿಳೆಯರಿಗೆ ಹೊಲಿಗೆ ಯಂತ್ರ, ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ಸೇರಿದಂತೆ ದೊಡ್ಡ ಕವಲಂದೆ ಹಾಗೂ ಕೈವಲ್ಯಪುರ ಸರ್ಕಾರಿ ಶಾಲೆಗಳಿಗೆ ಕುಡಿಯುವ ನೀರಿನ ಫಿಲ್ಟರ್ ವಿತರಣೆ ಮಾಡಿದರು.
ನಾರಾಯಣಸ್ವಾಮಿ, ಜಯರಾಮ, ಮಾಜಿ ಅಧ್ಯಕ್ಷ ಮಹದೇವ, ಕಾರ್ಯದರ್ಶಿ ನಾಗರಾಜು, ಖಜಾಂಚಿ ವರದನಾಯಕ, ನಿರ್ದೇಶಕರಾದ ಎನ್.ಆರ್. ಕೃಷ್ಣಪ್ಪಗೌಡ, ಲ.ಡಾ.ವೃಷಭೇಂದ್ರ ಸ್ವಾಮಿ, ಜಿಲ್ಲಾ ಸಹ ಕಾರ್ಯದರ್ಶಿ ಉಮೇಶ್, ಲ.ನಂಜುಂಡಿ, ಲ. ಗೋಪಾಲಕೃಷ್ಣ, ಲ.ನಂಜುಂಡಸ್ವಾಮಿ, ಲ.ಬಸವರಾಜು, ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು, ನಿರ್ದೇಶಕರು ಹಾಜರಿದ್ದರು.