

ವಿಜಯಪುರ: ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲು ಇಂಡಿ ವಿಧಾನ ಸಭೆ ಕ್ಷೇತ್ರದಲ್ಲಿ ಕಮಲ ಅರಳಿಸಬೇಕೆಂದು ಬಿಜೆಪಿ ಅಭ್ಯರ್ಥಿ ದಯಾಸಾಗರ ಪಾಟೀಲ ಹೇಳಿದರು.
ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಮಂಗಳವಾರ ನಡೆದ ಜನಸಂಪರ್ಕ ಸಭೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆಗಳ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ ಎನ್ನುವ ಭಾವ ನಮ್ಮದು. ಪ್ರಧಾನಿ ನರೇಂದ್ರ ಮೋದಿ ಹಾಕಿಕೊಟ್ಟ ಈ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕಿದೆ ಎಂದರು.
2018 ಚುನಾವಣೆಯಲ್ಲಿ ನನಗೆ ಸೋಲಾಗಿದ್ದಕ್ಕೆ ನೋವಿಲ್ಲ. ಕಾರಣ ಪ್ರಚಾರಕ್ಕೆ ನನಗೆ ಸಿಕ್ಕ ಕಾಲಾವಕಾಶ ಅತ್ಯಂತ ಕಡಿಮೆ. ಹೀಗಾಗಿ ಎಲ್ಲ ಹಳ್ಳಿಗಳಿಗೆ ಭೇಟಿ ನೀಡಿ ಜನರಿಗೆ ನನ್ನ ವಿಚಾರ ತಿಳಿಸಲು ಸಾಧ್ಯವಾಗಲಿಲ್ಲ. ಆದರೆ, ಈ ಬಾರಿ ಕ್ಷೇತ್ರದ ಜನ ನನ್ನ ವಿಚಾರಗಳನ್ನು ಅರಿತುಕೊಂಡಿದ್ದಾರೆ. ಮಾತ್ರವಲ್ಲ, ಬಿಜೆಪಿ ತತ್ವ-ಸಿದ್ದಾಂತಕ್ಕೆ ಮಣೆಹಾಕುವರೆಂಬ ವಿಶ್ವಾಸ ಇದೆ ಎಂದರು.
ಮುಖಂಡರಾದ ಡಿ.ಎಸ್. ಪಾಟೀಲ, ಭೀಮರಾಯ ಪಾಟೀಲ, ಎಂ.ಎಸ್. ಮುಜಗೊಂಡ, ಸೋಮಶೇಖರ ದೇವರ, ಭೀಮಸಿಂಗ ರಾಥೋಡ, ಬಾಳು ಮುಳಜಿ, ವಿಠಲ್ ಬಾಬಳ್ಗಾವ, ಚನ್ನಬಸು ಮುಜಗೊಂಡ, ಸಿದ್ದಪ್ಪ ವಾಲಿ, ಅಶೋಗೌಡ ಪಾಟೀಲ, ಗಂಗಾಧರ ಪಾಟೀಲ, ಯಶವಂತ ಬಿರಾದಾರ, ಶ್ರೀಮಂತ ಪಾಟೀಲ, ಈರಣ್ಣ ಮುಜಗೊಂಡ, ರಮೇಶ ಧರೆನ್ನವರ, ದೊಡ್ಡನಗೌಡ ಪಾಟೀಲ ಮತ್ತಿತರರಿದ್ದರು.