

ಸೋಮವಾರಪೇಟೆ: ತಾಲೂಕು ಕಚೇರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಜಿಲ್ಲಾ ಜೆಡಿಎಸ್ ನೇತೃತ್ವದಲ್ಲಿ ರೈತರು ಸೋಮವಾರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ವಿವೇಕಾನಂದ ವೃತ್ತದಿಂದ ಮೆರವಣಿಗೆ ನಡೆಸಿದ ರೈತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ತಾಲೂಕು ಕಚೇರಿಯಲ್ಲಿ ರೈತರ ಕೆಲಸಗಳು ಲಂಚವಿಲ್ಲದೆ ವಿಲೇವಾರಿ ಆಗುತ್ತಿಲ್ಲ. ಲಂಚ ಕೊಡದ ಕಡಗಳಿಗೆ ಸಣ್ಣಪುಟ್ಟ ತಾಂತ್ರಿಕ ದೋಷಗಳ ಕಾರಣ ನೀಡಿ ತೊಂದರೆ ನೀಡುತ್ತಾರೆ. ಮಧ್ಯವರ್ತಿಗಳ ಮೂಲಕ ಹೋಗುವ ಫೈಲ್‌ಗಳಿಗೆ ಯಾವುದೇ ತೊಂದರೆಯಾಗದೆ ಹಕ್ಕುಪತ್ರಗಳು ಸಿಗುತ್ತಿವೆ ಎಂದು ಜೆಡಿಎಸ್ ಕ್ಷೇತ್ರ ಸಮಿತಿ ಅಧ್ಯಕ್ಷ ಎಚ್.ಆರ್.ಸುರೇಶ್ ಆರೋಪಿಸಿದರು.
ರೈತರಿಗೆ ಅನ್ಯಾಯ: ಅಕ್ರಮ-ಸಕ್ರಮಕ್ಕೆ ಸಲ್ಲಿಸಿದ ರೈತರ ಅರ್ಜಿಗಳು ಕಚೇರಿಯಲ್ಲಿ ಕೊಳೆಯುತ್ತಿವೆ. ಆದರೆ ಆಡಳಿತ ಪಕ್ಷದ ಕಾರ್ಯಕರ್ತರ ಅರ್ಜಿಗಳು ವಿಲೇವಾರಿಯಾಗಿ ಹಕ್ಕುಪತ್ರಗಳನ್ನು ಪಡೆಯುತ್ತಿದ್ದಾರೆ. ನಿಯಮಗಳನ್ನು ಗಾಳಿಗೆ ತೂರಿದ ಕಾರಣ ಒಂದು ಪಕ್ಷದ ಕಾರ್ಯಕರ್ತರಿಗೆ ಹಕ್ಕುಪತ್ರ ದೊರಕುತ್ತಿಲ್ಲ ಎಂದವರು ದೂರಿದರು.
ಪಕ್ಷದ ಜಿಲ್ಲಾ ಉಪಾಧ್ಯಕ್ಷ ಬಿ.ಪಿ.ಅನಿಲ್‌ಕುಮಾರ್ ಮಾತನಾಡಿ, ಮೊದಲು ಅರ್ಜಿ ಸಲ್ಲಿಸಿದವರಿಗೆ ಹಕ್ಕುಪತ್ರ ಸಿಗುವಂತಾಗಬೇಕು ಎಂದು ಆಗ್ರಹಿಸಿದರು. ಸೋಮವಾರ ನಡೆಯುವ ಅಕ್ರಮ-ಸಕ್ರಮ ಸಮಿತಿಯ ಸಭೆಯಲ್ಲಿ ಮಂಡನೆಯಾಗಿರುವ 45 ಅರ್ಜಿಗಳಿಗೆ ಮಂಜೂರಾತಿ ಸಿಗಬೇಕು. ಇಲ್ಲದಿದ್ದಲ್ಲಿ ಸೆ.5ರಂದು ತಾಲೂಕು ಕಚೇರಿ ಎದುರು ಆಹೋರಾತ್ರಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.