

ಮೈಸೂರು: ಕನ್ನಡದ ಪ್ರಬಂಧ ಸಾಹಿತ್ಯವು ಇಂಗ್ಲಿಷ್ ಪ್ರಬಂಧಕಾರೆಲ್ಲರ ಚೈತನ್ಯವನ್ನುಂಡು ಬೆಳೆದಿದೆ ಎಂದು ವಿದ್ವಾಂಸ ಪ್ರೊ.ಸಿ.ನಾಗಣ್ಣ ಅಭಿಪ್ರಾಯಪಟ್ಟರು.
ಹೊಯ್ಸಳ ಕನ್ನಡ ಸಂಘ ಮತ್ತು ಸವಿಗನ್ನಡ ಪತ್ರಿಕಾ ಬಳಗ ಸಹಯೋಗದಲ್ಲಿ ಇಂಜಿನಿಯರ್‌ಗಳ ಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ ಬಿ.ಕೆ.ಮೀನಾಕ್ಷಿ ಅವರ ಮೂರು ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ‘ನಗುವಿನಿಬ್ಬನಿ ಮಿನುಗುತಿರಲಿ’ ಪ್ರಬಂಧ ಸಂಕಲವನ್ನು ಕುರಿತು ಮಾತನಾಡಿದರು.
ನಂದಳಿಕೆ ನಾರಾಯಣಪ್ಪ ಅವರು ಕನ್ನಡ ಸಾಹಿತ್ಯದ ಪ್ರಬಂಧ ಪ್ರಕಾರದ ಪಿತಾಮಹ ಎಂದು ಗೋವಿಂದ ಪೈ ಹೇಳಿದ್ದಾರೆ. ಅದೇ ರೀತಿ 1913ರಲ್ಲಿ ಪ್ರಕಟವಾದ ಬಿ.ವೆಂಕಟಾಚಾರ್ಯರ ‘ದಾದಿಯ ಹೇಳಿಕೆ’ ಪ್ರಬಂಧವೇ ಕನ್ನಡದ ಮೊದಲ ಲಲಿತ ಪ್ರಬಂಧ ಎಂಬ ವಾದವೂ ಇದೆ ಎಂದರು.
ಕನ್ನಡ ಸಾಹಿತ್ಯದ ಹಲವು ಪ್ರಕಾರಗಳಿಗೆ ಶಕ್ತಿ ತುಂಬಿದ ಮುಂಚೂಣಿ ಸಾಹಿತಿಗಳು ಪ್ರಬಂಧ ಸಾಹಿತ್ಯವನ್ನು ಗಟ್ಟಿಯಾಗಿ ಬೆಳೆಸಿದರು. 20ನೇ ಶತಮಾನದಲ್ಲಿ ಈ ಪ್ರಕಾರವನ್ನು ಚೈತನ್ಯಗೊಳಿಸಿದ ಒಂದು ಪಡೆಯೇ ಇದೆ.
ಪುತಿನ, ಕುವೆಂಪು, ದ.ರಾ.ಬೇಂದ್ರೆ, ಶಿವರಾಮ ಕಾರಂತ, ಎ.ಎನ್.ಮೂರ್ತಿರಾಯರು, ಗೊರೂರು ರಾಮಸ್ವಾಮಿ ಅಯ್ಯಂಗಾರ್, ನಾ.ಕಸ್ತೂರಿ, ವಿ.ಸೀತಾರಾಮಯ್ಯ, ಎಂ.ವಿ.ಸೀತಾರಾಮಯ್ಯ, ವಿ.ಕೃ.ಗೋಕಾಕ, ಹಾ.ಮಾ.ನಾಯಕ, ಎಂ.ಎಸ್.ಕಾಮತ್, ಶ್ರೀರಂಗ, ಎಚ್ಚೆಸ್ಕೆ, ತೀನಂಶ್ರೀ, ಸಿದ್ದವನಹಳ್ಳಿ ಕೃಷ್ಣ ಶರ್ಮ, ಎಚ್.ಎನ್.ನಾಗೇಗೌಡ ಮುಂತಾದವರನ್ನು ನೆನೆಯಲೇಬೇಕಾಗಿದೆ ಎಂದರು.
ಮೀನಾಕ್ಷಿಯವರ ಬರಹಗಳ ಮೊತ್ತವನ್ನು ಗಮನಿಸಿದರೆ ಪ್ರಬಂಧ ಅವರ ಒಲವಿನ ಪ್ರಕಾರವೆಂಬುದು ಸ್ಪಷ್ಟವಾಗುತ್ತದೆ. ದಶಕಗಳ ಕಾಲ ಚಿಕ್ಕ ಮಕ್ಕಳಿಗೆ ಪಾಠ ಹೇಳುತ್ತಲೇ ಬರಹವನ್ನು ಸೂಕ್ಷ್ಮಗೊಳಿಸಿಕೊಂಡಿರುವ ಅವರು, ತಮ್ಮ ವೃತ್ತಿ ಜೀವನದ ಅನುಭವಗಳನ್ನು ಯುಕ್ತವಾದ ರೀತಿಯಲ್ಲಿ ಹೆಕ್ಕಿ ತೆಗೆದು ಅವುಗಳನ್ನು ಸಮಯೋಚಿತವಾಗಿ ಸಂಯೋಜನೆಗೊಳಿಸಿ ತಮ್ಮ ಪ್ರಬಂಧಗಳಿಗೆ ಜೀವ ತುಂಬಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಪ್ರಬಂಧಕ್ಕೆ ಅದರಲ್ಲೂ ಲಘು ಧಾಟಿಯ ಪ್ರಬಂಧಗಳಿಗೆ ವ್ಯಂಗ್ಯದ ದೃಷ್ಟಿ ಬಹಳ ಮುಖ್ಯ. ಇಲ್ಲಿಯ ಪ್ರಬಂಧಗಳಲ್ಲಿ ವ್ಯಂಗ್ಯದಲ್ಲಿ ಕುಹಕವಿಲ್ಲದಿದ್ದರಿಂದ ಅವು ಹಿತವಾಗುತ್ತವೆ. ಇಲ್ಲಿ 30 ಪ್ರಬಂಧಗಳಿದ್ದು, ಲವಲವಿಕೆ, ಉಲ್ಲಾಸವಿದೆ. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಇರಾದೆಯಿದ್ದರೂ ಎಲ್ಲೂ ಕುಹಕದ ಕಹಿಯಿಲ್ಲ ಎಂದು ಹೇಳಿದರು.
‘ಸದಾ ನಿಮ್ಮೊಂದಿಗೆ’ ಅಂಕಣ ಬರಹಗಳನ್ನು ಕುರಿತು ಜೆಎಸ್‌ಎಸ್ ಮಹಾವಿದ್ಯಾಪೀಠದ ಪ್ರಕಟಣ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ಮಾತನಾಡಿ, ಇಲ್ಲಿರುವ ಲೇಖನಗಳು ಜ್ಞಾನದ ಜತೆಗೆ ವಿನಯವನ್ನು ಉದ್ದೀಪನಗೊಳಿಸುತ್ತವೆ. ಬಹುತೇಕ ಲೇಖನಗಳು ಪ್ರೀತಿಯನ್ನು ಮೂಡಿಸುತ್ತವೆ. ಸಂದೇಶವನ್ನು ನೀಡುತ್ತವೆ ಎಂದರು.
‘ಮೋನು ಮತ್ತು ಆನೆ’ ಮಕ್ಕಳ ಕಥಾ ಸಂಕಲನ ಕುರಿತು ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಶಿಕ್ಷಕಿಯಾಗಿ ಕೆಲಸ ಮಾಡಿರುವ ಬಿ.ಕೆ.ಮೀನಾಕ್ಷಿ ಅವರಿಗೆ ಕಥನ ಶೈಲಿ ಸಿದ್ಧಿಸಿದೆ. ಮಕ್ಕಳಿಗೆ ಆಪ್ತವಾಗುವ ರೀತಿಯಲ್ಲಿ ಕಥೆಗಳನ್ನು ಕಟ್ಟಿಕೊಟ್ಟಿದ್ದಾರೆ. ಮಕ್ಕಳ ಜತೆಗೆ ಹಿರಿಯರಿಗೂ ನೈತಿಕತೆಯನ್ನು ಬೋಧಿಸುವ ಅಂಶಗಳು ಇಲ್ಲಿವೆ ಎಂದರು.
ಶ್ರೀ ಇಳೈ ಆಳ್ವಾರ್ ಸ್ವಾಮೀಜಿ ಮಾತನಾಡಿ, ಮೈವಿವಿ ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿರುವ ಹಳೆಯ ಕಾಲದ ಓಲೆಗರಿ ಗ್ರಂಥಗಳನ್ನು ರಕ್ಷಿಸಬೇಕಾಗಿದೆ ಎಂದರು.
‘ಮೋನು ಮತ್ತು ಆನೆ’, ‘ಸದಾ ನಿಮ್ಮೊಂದಿಗೆ’ ಹಾಗೂ ’ನಗುವಿನಿಬ್ಬನಿ ಮಿನುಗುತಿರಲಿ’ ಕೃತಿಗಳನ್ನು ಸಂಸ್ಕೃತ ವಿದ್ವಾಂಸ ಡಾ.ಎಚ್.ವಿ.ನಾಗರಾಜ ರಾವ್ ಬಿಡುಗಡೆಗೊಳಿಸಿದರು. ಲೇಖಕಿ ಬಿ.ಕೆ. ಮೀನಾಕ್ಷಿ ಅವರು ತಮ್ಮ ಪ್ರೌಢಶಾಲಾ ಶಿಕ್ಷಕಿ ದಾವಣಗೆರೆಯ ಕಮಲಮ್ಮ ದಂಪತಿಗೆ ಗುರುವಂದನೆ ಸಲ್ಲಿಸಿದರು.
ಪುಟಾಣಿ ಇಳಾ ‘ಮೋನು ಮತ್ತು ಆನೆ’ ಕತೆ ಹೇಳಿದರೆ, ಸಿ.ವಿ. ಧನ್ವ ಇಂಗ್ಲಿಷ್ ಕವನ ವಾಚಿಸಿದರು. ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಇದ್ದರು