

ಪಾಂಡವಪುರ: ಆಚಾರ್ಯ ರಾಮಾನುಜರ ತಪೋಭೂಮಿ ಲಕ್ಷ್ಮೀಸಾಗರ ಗ್ರಾಮವನ್ನು ರಾಜ್ಯ ಸರ್ಕಾರ ದತ್ತು ತೆಗೆದುಕೊಂಡು ಆದಷ್ಟು ಬೇಗ ಅಭಿವೃದ್ಧಿಪಡಿಸಬೇಕೆಂದು ಆದಿಚುಂಚನಗಿರಿ ಮಠದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಒತ್ತಾಯಿಸಿದರು.
ತಾಲೂಕಿನ ಲಕ್ಷ್ಮೀಸಾಗರ ಗ್ರಾಮದಲ್ಲಿ ಮಂಗಳವಾರ ಶ್ರೀ ಚಕ್ರಸಹಿತ ಲಕ್ಷ್ಮೀದೇವಿ ದೇವಸ್ಥಾನದ ಮೂರನೇ ವರ್ಷದ ಶ್ರಾವಣ ಸಂಭ್ರಮ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಲಕ್ಷ್ಮೀಸಾಗರ ಗ್ರಾಮ ರಾಮಾನುಜರ ವೈಷ್ಣವ ಧರ್ಮ ಪ್ರಚಾರದ ತಪೋಭೂಮಿಯಾಗಿತ್ತು. ಇಲ್ಲಿಂದಲೇ ರಾಮಾನುಜರು ವೈಷ್ಣವ ಧರ್ಮಪ್ರಚಾರವನ್ನು ಆರಂಭಿಸಿ ಬಿಟ್ಟಿದೇವನನ್ನು ವಿಷ್ಣುವರ್ಧನನನ್ನಾಗಿ ಪರಿವರ್ತಿಸಿದರು. ಇಂತಹ ಪುಣ್ಯಭೂಮಿಯನ್ನು ಸರ್ಕಾರ ದತ್ತು ಪಡೆದು ಅಭಿವೃದ್ಧಿಪಡಿಸಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಬಿಜೆಪಿಯ ರಾಷ್ಟ್ರೀಯ ನಾಯಕ ಸಿ.ಟಿ.ರವಿ ಮಾತನಾಡಿ, ಲಕ್ಷ್ಮೀಸಾಗರದ ಅಭಿವೃದ್ಧಿಗೆ ಸರ್ಕಾರ ಕ್ರಮವಹಿಸಬೇಕು. ಇಲ್ಲವಾದಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಲಕ್ಷ್ಮೀಸಾಗರ ಮತ್ತು ಕೆರೆತೊಣ್ಣೂರಿನ ಅಭಿವೃದ್ಧಿಗೆ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗುವುದು ಎಂದರು.
ವೇದಿಕೆಯಲ್ಲಿ ಬಿಜೆಪಿ ಮುಖಂಡ ಅದ್ದಿಗಾನಹಳ್ಳಿ ಆನಂದ, ಲಕ್ಷ್ಮೀಸಾಗರ ಗ್ರಾಮದ ಯಜಮಾನರಾದ ಕಿಟ್ಟೇಗೌಡ, ಎಲ್.ಡಿ.ಸಂಜಯ್, ಸಿ.ಜಯರಾಮು, ಎಲ್.ಕೆ.ರವಿ, ಎಲ್.ಸಿ.ಬೆಟ್ಟೇಗೌಡ, ಲಕ್ಷ್ಮೀಸಾಗರ ಸ್ವಾಮಿಗೌಡ ಇದ್ದರು.