ಲಕ್ಷ್ಮೀದೇವಿಗೆ ಭಕ್ತಿ-ಭಾವದಿಂದ ಪೂಜೆ

24ark5
Published on

ಅರಕಲಗೂಡು: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ದೀಪಾವಳಿ ಪ್ರಯುಕ್ತ ಮನೆ, ಅಂಗಡಿಗಳಲ್ಲಿ ಸೋಮವಾರ ಭಕ್ತರು ಲಕ್ಷ್ಮೀ ದೇವಿಯನ್ನು ಪ್ರತಿಷ್ಠಾಪಿಸಿ ಭಕ್ತಿ, ಭಾವದಿಂದ ಪೂಜಾ ಕಾರ್ಯ ನೆರವೇರಿಸಿದರು.


ಅಂಗಡಿ, ಮಳಿಗೆಗಳನ್ನು ಸ್ವಚ್ಛಗೊಳಿಸಿ, ಬಣ್ಣ ಬಳಿದು, ತಳಿರು, ತೋರಣ, ಬಾಳೆಗಿಡ, ಹೂವು, ಝಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಮನೆ, ಅಂಗಡಿ, ಮಳಿಗೆಗಳ ಎದುರು ಮಹಿಳೆಯರು ಬೃಹದಾಕಾರದ ರಂಗೋಲಿಯನ್ನು ಬಿಡಿಸಿದ್ದರು. ಲಕ್ಷ್ಮೀ ಫೋಟೋವನ್ನು ಅಂಗಡಿಗಳ ಒಳಗೆ ಇಟ್ಟು ಪೂಜಿಸಲಾಯಿತು. ಕುಟುಂಬದವರು, ನೆಂಟರು, ಸ್ನೇಹಿತರನ್ನು ಪೂಜೆಗೆ ಆಹ್ವಾನಿಸಿ, ಸಿಹಿ ಹಂಚಿ ಸಂಭ್ರಮಿಸಿದರು.


ಸಂಜೆಯಾಗುತ್ತಲೇ ಮನೆಯಂಗಳಲ್ಲಿ ಹಣತೆಗಳನ್ನು ಬೆಳಗಿಸಿ, ಆಕಾಶ ಬುಟ್ಟಿಯನ್ನು ಹೊತ್ತಿಸಿ, ಲಕ್ಷ್ಮೀಗೆ ನೈವೇದ್ಯ ಅರ್ಪಿಸುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂತು. ವ್ಯಾಪಾರಿಗಳು ತಮ್ಮ ಅಂಗಡಿಗಳಲ್ಲಿ ಹೊಸ ಪುಸ್ತಕದಲ್ಲಿ ಶುಭ-ಲಾಭವನ್ನು ಬರೆಯುವ ಮೂಲಕ ಲೆಕ್ಕವನ್ನು ಆರಂಭಿಸಿದರು. ಸಂಜೆಯಿಂದ ಆರಂಭವಾದ ಅಂಗಡಿ, ಮಳಿಗೆಗಳ ಪೂಜೆ ತಡರಾತ್ರಿವರೆಗೂ ನಡೆಯಿತು.


ಪೂಜೆಯ ವೇಳೆ ಮಕ್ಕಳು, ಯುವಕರು ಬಗೆಬಗೆಯ ಪಟಾಕಿಗಳನ್ನು ಸಿಡಿಸಿ ಆನಂದಿಸಿದರು. ಪಟಾಕಿಗಳ ಸಿಡಿಸುವ ಸದ್ದು ಜೋರಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net