ಲಕ್ಷ್ಮಮ್ಮ ಅಧ್ಯಕ್ಷೆ, ಗಂಗಾಧರ್ ಉಪಾಧ್ಯಕ್ಷ

ಫೋಟೋ ಶೀರ್ಷಿಕೆ 20 ಸಿಆರ್_ಪಿ-2 ಎ
Published on

ಚನ್ನರಾಯಪಟ್ಟಣ: ತಾಲೂಕಿನ ದಂಡಿಗನಹಳ್ಳಿ ಹೋಬಳಿ ನೊರನಕ್ಕಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಲಕ್ಷ್ಮಮ್ಮ ಮತ್ತು ಉಪಾಧ್ಯಕ್ಷರಾಗಿ ಗಂಗಾಧರ್ ಅವಿರೋಧವಾಗಿ ಆಯ್ಕೆಯಾದರು.


16 ಸದಸ್ಯ ಬಲದ ನೊರನಕ್ಕಿ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗಾಗಿ ಗುರುವಾರ ಹಮ್ಮಿಕೊಂಡಿದ್ದ ಚುನಾವಣಾ ಪ್ರಕ್ರಿಯೆಯಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಬಿಂಡೇನಹಳ್ಳಿ ಗ್ರಾಮದ ಲಕ್ಷ್ಮಮ್ಮ ಮತ್ತು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ನಾರಾಯಣಪುರ ಗ್ರಾಮದ ಗಂಗಾಧರ್ ನಾಮಪತ್ರ ಸಲ್ಲಿಕೆ ಮಾಡಿದ್ದರು.

ಇವರಿಬ್ಬರನ್ನು ಹೊರತುಪಡಿಸಿ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿದ್ದ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ರಾಮಪ್ಪಾಜಿ ನೂತನ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರನ್ನು ಅವಿರೋಧ ಆಯ್ಕೆಯನ್ನು ಘೋಷಿಸಿದರು.


ಚುನಾವಣೆ ಪ್ರಕಿಯೆಯಲ್ಲಿ 16 ಸದಸ್ಯರ ಪೈಕಿ ಬಿಜೆಪಿ ಬೆಂಬಲಿತ ಇಬ್ಬರು ಸದಸ್ಯರು ಗೈರಾಗಿದ್ದರು. ಇನ್ನುಳಿದಂತೆ ಜೆಡಿಎಸ್ ಬೆಂಬಲಿತ 13 ಮಂದಿ, ಕಾಂಗ್ರೆಸ್ ಬೆಂಬಲಿತ ಒಬ್ಬ ಸದಸ್ಯರಿದ್ದರು.


ನೂತನ ಅಧ್ಯಕ್ಷೆ ಲಕ್ಷ್ಮಮ್ಮ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯ ಎಲ್ಲ ಹಳ್ಳಿಗಳಲ್ಲಿ ಸ್ವಚ್ಛತೆ, ಕುಡಿಯುವ ನೀರು, ಬೀದಿ ದೀಪಗಳ ನಿರ್ವಹಣೆಗೆ ಆದ್ಯತೆ ನೀಡಲಾಗುವುದು. ಜತೆಗೆ ನರೇಗಾ ಯೋಜನೆಯಡಿ ಉತ್ತಮ ಗುರಿ ಸಾಧಿಸುವುದಾಗಿ ಹೇಳಿದರು.


ಗ್ರಾಪಂ ಮಾಜಿ ಅಧ್ಯಕ್ಷೆ ಗೀತಾ ಮಂಜುನಾಥ್, ಸದಸ್ಯರಾದ ಕೋಮಲಾಕ್ಷಿ, ರಘು, ವಸಂತರಾಣಿ, ವರ, ಲಕ್ಷ್ಮೀಶ, ತಿಮ್ಮೇಗೌಡ, ಮಂಜೇಗೌಡ, ಪುಟ್ಟತಾಯಮ್ಮ, ಶಶಿಕಲಾ, ಮುಖಂಡರಾದ ಆನೇಕೆರೆ ಬಾಲಣ್ಣ, ಮಾಳೇನಹಳ್ಳಿ ನವೀನ್ ಇತರರು ನೂತನ ಅಧ್ಯಕ್ಷರು, ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net