

ಮಲ್ಲಪ್ಪ ಗೌಡ ಔರಾದ್
ಇಂದಿನ ಆಧುನಿಕ ಕಾಲದ ಇಂಗ್ಲಿಷ್ ಮೆಡಿಸಿನ್ ಪ್ರಭಾವ, ಪ್ರಾಬಲ್ಯದ ನಡುವೆಯೇ ನಾಟಿ ವೈದ್ಯ ಕುಟುಂಬವೊಂದು ಕಳೆದ ಆರೇಳು ದಶಕದಿಂದ ಲಕ್ವಾ (ಪಾಶ್ವು ೯ವಾಯು) ಪೀಡಿತರಿಗೆ ಉಚಿತ ಚಿಕಿತ್ಸೆ ನೀಡುತ್ತ ಅಪರೂಪದ ಸೇವೆ ಸಲ್ಲಿಸುತ್ತಿದೆ.
ಹೌದು. ಯನಗುಂದಾ ಗ್ರಾಮದ ಘೂಳೆ ಕುಟುಂಬ ಜಾನಪದ ವೈದ್ಯ(ನಾಟಿ) ಪದ್ಧತಿ ಮೂಲಕ ಲಕ್ವಾ ರೋಗಿಗಳಿಗೆ ಫ್ರೀ ಚಿಕಿತ್ಸೆ ಕೊಡುತ್ತಿದೆ. ಅನೇಕರು ಚೇತರಿಸಿಕೊಂಡಿದ್ದು ವಿಶೇಷ. ಹೀಗಾಗಿ ಈ ಭಾಗದಲ್ಲಿ ಯಾರಿಗಾದ್ರೂ ಲಕ್ವಾ ಹೊಡೆದರೆ ಘೂಳೆ ಕುಟುಂಬ ನೆನಪಿಗೆ ಬರುತ್ತದೆ.
ಮೂರು ತಲೆಮಾರಿನಿಂದ ಘೂಳೆ ಕುಟುಂಬ ಉಚಿತ ನಾಟಿ ಚಿಕಿತ್ಸೆ ನೀಡುವ ಕೈಂಕರ್ಯದಲ್ಲಿ ತೊಡಗಿಕೊಂಡಿದೆ. 85ರ ಹರೆಯದ ರೇವಣಪ್ಪ ಘೂಳೆ ಹಾಗೂ ಅವರ ಪುತ್ರ ಬಸವರಾಜ ಸದ್ಯ (ಕಳೆದ ಮೂರು ದಶಕ) ಈ ಕೆಲಸದಲ್ಲಿ ತೊಡಗಿದ್ದಾರೆ. ಇವರ ಹತ್ತಿರ ಚಿಕಿತ್ಸೆ ಪಡೆದ ಅದೆಷ್ಟೋ ರೋಗಿಗಳು ಗುಣಮುಖರಾಗಿ ನೆಮ್ಮದಿ ಜೀವನ ನಡೆಸುತ್ತಿದ್ದಾರೆ. ಹೀಗಾಗಿ ಘೂಳೆ ಅವರ ಚಿಕಿತ್ಸೆ ಜನರ ನಂಬಿಕೆ ಹೆಚ್ಚಿಸಿದೆ.
ನಾಟಿ ವೈದ್ಯ ಪದ್ಧತಿಯಲ್ಲಿ ಹೆಸರು ಮಾಡಿರುವ ಈ ಕುಟುಂಬದಲ್ಲಿ ರೇವಣಪ್ಪ ಅವರು ತಂದೆ ದಿ.ಯಶವಂತಪ್ಪ ಅವರಿಂದ ಈ ವಿದ್ಯೆ ಕಲಿತಿದ್ದರು. ಲಕ್ವಾಕ್ಕೆ ನಾಟಿ ಔಷಧ ನೀಡುತ್ತಿದ್ದ ಯಶವಂತಪ್ಪ ಮಾರ್ಗದರ್ಶನದಲ್ಲಿ ರೇವಣಪ್ಪ ಸಹ ಪರಿಣಾಮಕಾರಿ ಚಿಕಿತ್ಸೆ ನೀಡುತ್ತಿದ್ದಾರೆ. ರೇವಣಪ್ಪ ಅವರಿಗೆ ವಯಸ್ಸಾಗಿದ್ದರಿಂದ ಈಗ ಕೈಲಾಗುತ್ತಿಲ್ಲ. ಆದರೂ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಕೊಡಲು ದುಡಿಯುತ್ತಿದ್ದಾರೆ. ರೇವಣಪ್ಪ ಪುತ್ರ ಬಸವರಾಜ ಅವರಿಗೂ ಈ ಕಲೆ ಕಲಿಸಿದ್ದು, ಅವರ ಮೂಲಕ ಔಷಧ ಕೊಡಿಸುತ್ತಿದ್ದಾರೆ.
ಬಸವರಾಜ ಎಂಎ, ಬಿಇಡಿ ಹಾಗೂ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಿಂದ ಜಾನಪದ ವೈದ್ಯ ಪದವಿ ಪಡೆದಿದ್ದಾರೆ. ತಂದೆ ಮಾರ್ಗದರ್ಶನದಲ್ಲಿ ಬಸವರಾಜ ನಾಟಿ ಔಷಧ ನೀಡುವಲ್ಲಿ ಪರಿಣತಿ ಹೊಂದಿದ್ದಾರೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಲಕ್ವಾ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳ ನಿರಂತರ ಸೇವೆಯಲ್ಲಿ ತೊಡಗಿದ್ದಾರೆ.
ಪ್ರತಿ ಭಾನುವಾರ ಘೂಳೆ ಮನೆಯಲ್ಲಿ ನಾಟಿ ಔಷಧ ನೀಡಲಾಗುತ್ತದೆ. ಆಡಿನ ಹಾಲಿನೊಂದಿಗೆ ಈ ಔಷಧವು ಮರದ ಎಲೆ ಹಾಗೂ ತೊಗಟೆ ಉತ್ತಮ ರೀತಿಯಿಂದ ಕುಟ್ಟಿ, ರೋಗಿಗಳಿಗೆ ದ್ರವ ರೂಪದಲ್ಲಿ ಕೊಡಲಾಗುತ್ತದೆ. ಕರ್ನಾಟಕ ಸೇರಿ ತೆಲಂಗಾಣ, ಆಂಧ್ರ, ಮಹಾರಾಷ್ಟ್ರ ಮೊದಲಾದ ಕಡೆಗಳಿಂದ ಜನ ಇಲ್ಲಿಗೆ ಆಗಮಿಸಿ ಔಷಧ ಪಡೆಯುತ್ತಿದ್ದಾರೆ. ಬಸವರಾಜ ಘೂಳೆ ಮೊ.96867 27240 ಇದೆ.
ಪ್ರತಿ ಭಾನುವಾರ ದೂರದ ಊರುಗಳಿಂದ ಲಕ್ವಾ ಕಾಯಿಲೆ ಹೊತ್ತು ಬರುವ ರೋಗಿಗಳಿಗೆ ನಾಟಿ ಔಷಧ ನೀಡುವ ಅಪರೂಪದ ಸೇವೆ ಸಲ್ಲಿಸುತ್ತಿರುವ ಘೂಳೆ ಕುಟುಂಬದ ಕಾರ್ಯ ಶ್ಲಾಘನೀಯ. ಗ್ರಾಮದ ಸಮಾಜ ಸೇವಕನ ಬಗ್ಗೆ ಹೆಮ್ಮೆ ಅನಿಸುತ್ತದೆ. ಎಲೆಮರೆ ಕಾಯಿಯಂತಿರುವ ಇವರನ್ನು ಗುರುತಿಸಿ ಪ್ರೋತ್ಸಾಹಿಸಬೇಕಾಗಿದೆ.| ಶಿವಾನಂದ ಹಂಗರಗೆಸ್ಥಳೀಯ ಮುಖಂಡ
ನಮ್ಮ ತಂದೆ 30 ವರ್ಷಗಳಿಂದ ಲಕ್ವಾ ರೋಗಿಗಳಿಗೆ ನಾಟಿ ಔಷಧ ನೀಡುತ್ತಿದ್ದಾರೆ. ನನಗೂ ಕಲಿಸಿದ್ದರಿಂದ ದಶಕದಿಂದ ನಾನು ಸಹ ಅವರ ಮಾರ್ಗದರ್ಶನದಲ್ಲಿ ರೋಗಿಗಳ ಸೇವೆ ಮಾಡುತ್ತಿರುವೆ. ನನ್ನ ಹತ್ತಿರ ಅಳುತ್ತ ಬಂದವರು ನಗುತ್ತ ಹೋಗುವಾಗ ಅತ್ಯಂತ ಖುಷಿಯಾಗುತ್ತದೆ.| ಬಸವರಾಜ ಘೂಳೆ, ನಾಟಿ ವೈದ್ಯ