ಲಕ್ಕೇನಹಳ್ಳಿಯಲ್ಲಿ ಬಂಡಿದಾರಿ ತೆರವಿಗೆ ಪಟ್ಟು, ಗ್ರಾಮಸ್ಥರಿಂದ ತಾಲೂಕು ಕಚೇರಿ ಎದುರು ಪ್ರತಿಭಟನೆ, ಅಧಿಕಾರಿಗಳ ವಿರುದ್ಧ ಅಸಮಾಧಾನ

06 Nela Ph 02 Protest
Published on

ನೆಲಮಂಗಲ: ತಾಲೂಕಿನ ಕುಲುವನಹಳ್ಳಿ ಗ್ರಾಪಂ ವ್ಯಾಪ್ತಿಯ ಲಕ್ಕೇನಹಳ್ಳಿಯಲ್ಲಿ ಒತ್ತುವರಿಯಾಗಿರುವ ಬಂಡಿದಾರಿಯನ್ನು ತೆರವುಗೊಳಿಸದ ತಾಲೂಕು ಆಡಳಿತ ವಿರುದ್ಧ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು.

ಗ್ರಾಮದಲ್ಲಿ ಜಮೀನು ಖರೀದಿ ಮಾಡಿರುವ ಕೆಲ ಬಂಡವಾಳ ಶಾಹಿಗಳು, ಹಲವು ವರ್ಷಗಳಿಂದಲೂ 16ಕ್ಕೂ ಹೆಚ್ಚು ಸರ್ವೇ ನಂಬರ್‌ಗಳ ಜಮೀನಿಗೆ ತೆರಳಲು ಬಳಕೆಯಾಗುತ್ತಿದ್ದ ಬಂಡಿದಾರಿಯನ್ನು ಒತ್ತುವರಿ ಮಾಡಿಕೊಂಡು ತಡೆಗೋಡೆ ನಿರ್ಮಿಸಿಕೊಂಡಿದ್ದಾರೆ. ಇದರಿಂದ ಕೆರೆ ಹಾಗೂ ಜಮೀನಿಗೆ ತೆರಳಲು ತೊಂದರೆಯಾಗುತ್ತಿದೆ ಎಂದು ಹೋರಾಟಗಾರರು ದೂರಿದರು.

ರಸ್ತೆ ಇಲ್ಲದ ಪರಿಣಾಮ ರಾಗಿ ಕಟಾವು ಮಾಡಲು ಸಾಧ್ಯವಾಗದೆ ರೈತರು ಕಂಗಲಾಗಿದ್ದಾರೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಬಂಡಿದಾರಿಯನ್ನು ಬಿಡಿಸಿಕೊಡುವಂತೆ ತಹಸೀಲ್ದಾರ್‌ಗೆ 2 ತಿಂಗಳ ಹಿಂದೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ದಲಿತ ಕೂಲಿ ಕಾರ್ಮಿಕ ಸಂಘಟನೆ ಅಧ್ಯಕ್ಷ ಬಿ.ಗಂಗಬೈಲಪ್ಪ ಮಾತನಾಡಿ, 100ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ 40 ಕುಟುಂಬದವರು ರಾಗಿ ಬೆಳೆದಿದ್ದಾರೆ. ಕೆಲವರು ಹೊಲದಲ್ಲೇ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ಆದರೆ ಪ್ರಭಾವಿ ವ್ಯಕ್ತಿಯೊಬ್ಬ ಅಕ್ಕಪಕ್ಕ ಜಮೀನು ಖರೀದಿಸಿ ಕಾಂಪೌಡ್ ನಿರ್ಮಾಣ ಮಾಡಿದ್ದು, ಓಡಾಟಕ್ಕೆ ತೊಂದರೆಯಾಗಿದೆ. ಈ ಬಗ್ಗೆ ಪ್ರಶ್ನೆ ಮಾಡಿದ್ದ ಕೆಲವರಿಗೆ ಬೆಂಬಲಿಗರು ಹಲ್ಲೆ ಮಾಡಿದ್ದಾರೆ. ಆದ್ದರಿಂದ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು. ರಸ್ತೆ ತೆರವು ಮಾಡಬೇಕು ಎಂದರು.

ಬಡವರಿಗೆ ನ್ಯಾಯ ದೊರಕಿಸಿ ಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಗ್ರಾಮಸ್ಥರು ಹಾಗೂ ಸಂಘಟನೆಗಳೊಂದಿಗೆ ಅರೆಬೆತ್ತಲೆಯಾಗಿ ವಿಧಾನಸೌಧ ಚಲೋ ನಡೆಸಲಾಗುವುದು ಎಂದು ಗಂಗಬೈಲಪ್ಪ ಎಚ್ಚರಿಕೆ ನೀಡಿದರು.

ಈಗಾಗಲೇ ಸ್ಥಳಪರಿಶೀಲನೆ ನಡೆಸಿ, ಎಲ್ಲ ರೈತರು ಪರಸ್ಪರ ಒಪ್ಪಿಗೆ ಮೇರೆಗೆ ರಸ್ತೆ ಬಿಟ್ಟುಕೊಂಡು ಓಡಾಡಲು ತಿಳಿಸಿಲಾಗಿತ್ತು. ಅದಾಗ್ಯೂ ಮತ್ತೆ ರೈತರು ದೂರು ನೀಡಿದ್ದಾರೆ. ಜತೆಗೆ ಡಿ.7ರಂದು ಗ್ರಾಮಾಂತರ ಜಿಲ್ಲಾ ವಿಭಾಗಾಧಿಕಾರಿ ಅವರು ಸ್ಥಳ ಪರಿಶೀಲಿಸುವರು. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮಕೈಗೊಳ್ಳುಲಾಗುವುದು. ಕೆ.ಮಂಜುನಾಥ್, ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net