ಲಕ್ಕರಸನಪಾಳ್ಯದಲ್ಲಿ ಅದ್ದೂರಿ ಕಂಡಾಯಗಳ ಕೊಂಡೋತ್ಸವ

10-kGL-1,,
Published on

ಕೊಳ್ಳೇಗಾಲ: ತಾಲೂಕಿನ ಲಕ್ಕರಸನಪಾಳ್ಯ ಗ್ರಾಮದಲ್ಲಿ ಬೇವನಕಟ್ಟೆ ಮಾರಮ್ಮ ಹಾಗೂ ಕುರುಬನಕಟ್ಟೆ ಕಂಡಾಯಗಳ ಕೊಂಡೋತ್ಸವ ಗುರುವಾರ ಬೆಳಗ್ಗೆ ಸಾವಿರಾರು ಜನರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಬುಧವಾರ ರಾತ್ರಿ ಶ್ರೀಗುರುಮಲ್ಲೇಶ್ವರ ಮಠದ ಮುಂಭಾಗ ಕೊಂಡದ ಮಾಳದಲ್ಲಿ ಕೊಂಡಕ್ಕೆ ಶ್ರೀಸಿದ್ದಪ್ಪಾಜಿ ದೇವರ ಗುಡ್ಡ ರವಿಕುಮಾರ್ ಅಗ್ನಿಸ್ಪರ್ಶ ಮಾಡಿದರು. ಗುರುವಾರ ಬೆಳಗ್ಗೆ 7 ಗಂಟೆಯಲ್ಲಿ ದೇವರ ಗುಡ್ಡರು ಶ್ರೀಕುರುಬನಕಟ್ಟೆ ಕಂಡಾಯಗಳು ಹಾಗೂ ಬೇವನಕಟ್ಟೆ ಮಾರಮ್ಮ ಸತ್ತಿಗೆಯನ್ನು ಹೊತ್ತು ಸಿದ್ಧವಿದ್ದ ಕೊಂಡವನ್ನು ಮೂರು ಪ್ರದಕ್ಷಿಣೆ ಮಾಡಿ ಕೊಂಡಹಾಯ್ದರು. ಸುತ್ತಮುತ್ತಲ ವಿವಿಧ ಗ್ರಾಮಸ್ಥರು ಕೊಂಡೋತ್ಸವವನ್ನು ಕಣ್ತುಂಬಿಕೊಂಡರು. ನಂತರ, ಗ್ರಾಮದ ಎಲ್ಲ ಬಡಾವಣೆಯಲ್ಲೂ ಕಂಡಾಯಗಳು ಹಾಗೂ ಬೇವಿನಕಟ್ಟೆ ಮಾರಮ್ಮನ ಸತ್ತಿಗೆಯ ಉತ್ಸವ ನೆರವೇರಿತು. ಮನೆ ಮುಂದೆ ಬಂದ ಕಂಡಾಯಗಳಿಗೆ ಶ್ರದ್ಧಾಭಕ್ತಿಯಿಂದ ಗ್ರಾಮಸ್ಥರು ಪೂಜೆ ಸಲ್ಲಿಸಿದರು. ಲಕ್ಕರಸನಪಾಳ್ಯ ಸೇರಿದಂತೆ ವಿವಿಧ ಗ್ರಾಮಗಳ ಗೌಡರು, ಯಜಮಾನರು ಹಾಗೂ ಮುಖಂಡರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net