ಲಕ್ಕರಸನ ಪಾಳ್ಯ ಗ್ರಾಮದ ಕೆರೆ ಒತ್ತುವರಿ ಜಾಗ ತೆರವು

Published on

ಕೊಳ್ಳೇಗಾಲ: ತಾಲೂಕಿನ ಲಕ್ಕರಸನ ಪಾಳ್ಯ ಗ್ರಾಮದ ಹೊರವಲಯದಲ್ಲಿ ಕೆರೆ ಒತ್ತುವರಿಯನ್ನು ಶುಕ್ರವಾರ ತಹಸೀಲ್ದಾರ್ ಐ.ಈ.ಬಸವರಾಜು ತೆರವುಗೊಳಿಸಿದರು.

ಲಕ್ಕರಸನ ಪಾಳ್ಯದಲ್ಲಿರುವ ಪ್ರದೇಶದಲ್ಲಿರುವ ಕೆರೆಯನ್ನು ಹಲವು ವರ್ಷಗಳಿಂದ ಸ್ಥಳೀಯರು ಒತ್ತುವರಿ ಮಾಡಿ ಸಾಗುವಳಿ ಮಾಡಿಕೊಂಡು ಕೆರೆ ಜಾಗ ಕಬಳಿಸಲಾಗಿತ್ತು. ಭತ್ತ, ಕಬ್ಬು ಇನ್ನಿತರ ಫಸಲನ್ನು ಬೆಳೆಯಲಾಗುತ್ತಿತ್ತು. ದಿನ ಕಳೆದಂತೆ ಕೆರೆಯ ಸ್ವರೂಪವನ್ನೇ ಕಳೆದುಕೊಂಡಿತು.

ಈ ಬಗ್ಗೆ ಆರ್‌ಟಿಐ ಕಾರ್ಯಕರ್ತ ಲಿಂಗರಾಜು ಲೋಕಾಯುಕ್ತರಿಗೆ ದೂರು ನೀಡಿದ್ದರು. ಇದೀಗ ಲೋಕಾಯುಕ್ತ ನ್ಯಾಯಾಲಯ ಕೆರೆ ಒತ್ತುವರಿಗೆ ತೆರವು ಮಾಡಲು ಸೂಚಿಸಿದ್ದು, ಅದರಂತೆ ತಹಸೀಲ್ದಾರ್ ಐ.ಈ. ಬಸವರಾಜು, ಕಂದಾಯ ನಿರೀಕ್ಷಕ ನಿರಂಜನ್, ತಾಲೂಕು ಸರ್ವೇಯರ್ ಪುಟ್ಟರಾಜು ಇತರರು ಕಾರ್ಯಾಚರಣೆ ನಡೆಸಿ ಕೆರೆ ಒತ್ತುವರಿ ತೆರವುಗೊಳಿಸಿದ್ದಾರೆ. ರಾಜಶೇಖರಮೂರ್ತಿ ಎಂಬುವರು ಸುಮಾರು 44 ಸೆಂಟ್ ಕೆರೆ ಜಾಗದಲ್ಲಿ ಕಬ್ಬು ಬೆಳೆದಿರುವುದು ಮತ್ತು ಲೋಕೇಶ್ ಎಂಬುವರು 22 ಸೆಂಟ್ ಕೆರೆ ಜಾಗದಲ್ಲಿ ಭತ್ತ ವ್ಯವಸಾಯವನ್ನು ಹಿಂದಿನಿಂದಲೂ ಮಾಡುತ್ತಿದ್ದರು.

ಸದ್ಯ ಒತ್ತುವರಿ ಭೂಮಿಯಲ್ಲಿ ಕಬ್ಬು ಬೆಳೆದಿರುವ ಹಿನ್ನೆಲೆ ಕೆರೆಯ ಗಡಿಯನ್ನು ಅಧಿಕಾರಿಗಳು ಜೆಸಿಬಿ ಮೂಲಕ ಟ್ರಂಚ್ ನಿರ್ಮಿಸಿ ಗಡಿ ಗುರುತಿಸಿದ್ದಾರೆ. ಕಬ್ಬು ಕಟಾವು ಆದ ಬಳಿಕ ಕೆರೆ ಜಾಗದಲ್ಲಿ ಮತ್ತೆ ಒತ್ತುವರಿ ಮಾಡಿಕೊಂಡು ವ್ಯವಸಾಯ ಮಾಡಬಾರದು ಎಂದು ಒತ್ತುವರಿದಾರರಿಗೆ ತಹಸೀಲ್ದಾರ್ ಬಸವರಾಜು ಸೂಚನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಿಗ ವಿಷ್ಣು, ತಿಮ್ಮರಾಜೀಪುರ ಪಿಡಿಒ ಶಿವಮೂರ್ತಿ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net