ಲಕುಂಡಿಯಲ್ಲಿ ನವರಾತ್ರಿ ಅಂಗವಾಗಿ ಸಾಮೂಹಿಕ ಅರ್ಥಪೂರ್ಣ ಭಾವೈಕ್ಯತೆಯ ಸೀಮಂತ ಕಾರ್ಯಕ್ರಮ

21LKD1
Published on

ಲಕ್ಕುಂಡಿ: ಸಾಮೂಹಿಕ ಮದುವೆ, ಸಾಮೂಹಿಕ ಲಿಂಗಧಾರಣಿ, ಸಾಮೂಹಿಕ ಅಯ್ಯಾಚಾರ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಕೇಳಿದ್ದೇವೆ. ಆದರೆ ಇಲ್ಲಿಯ ದಂಡಿನ ದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ೨೩ ನೇ ವರ್ಷದ ದೇವಿ ಪುರಾಣೋತ್ಸವದಲ್ಲಿ ಸಾಮೂಹಿಕ ಸೀಮಂತ ಕಾರ್ಯಕ್ರಮ ಮಾಡಿದ್ದು ವಿಶೇಷವಾಗಿತ್ತು.
ಇಲ್ಲಿಯ ದಂಡಿನ ದುರ್ಗಾದೇವಿ ಸೇವಾ ಸಮಿತಿಯು ಕಳೆದ ನಾಲ್ಕು ವರ್ಷಗಳಿಂದ ಸಾಮೂಹಿಕ ಸೀಮಂತ ಕಾರ್ಯಕ್ರಮ ನೆರವೇರಿಸುತ್ತಾ ಬಂದಿದ್ದು ಪ್ರತಿ ವರ್ಷ ಕೇವಲ ೧೧ ಗರ್ಭೀಣಿಯರಿಗೆ ಮಾತ್ರ ಸೀಮಂತ ಮಾಡುತ್ತಿತ್ತು. ಈ ವರ್ಷ ಬರ ಆವರಿಸಿರುವುದರಿಂದ ಆರ್ಥಿಕ ಸಂಕಷ್ಟದಲ್ಲಿರುವ ಬಡವರಿಗೆ ಅನುಕೂಲವಾಗಲೆಂದು ೨೫ ಗರ್ಭಿಣಿಯರಿಗೆ ಶುಕ್ರವಾರ ಸಂಜೆ ಸಂಪ್ರದಾಯಬದ್ಧವಾಗಿ ಸಾಮೂಹಿಕ ಸೀಮಂತ ಕಾರ್ಯವನ್ನು ನೆರವೇರಿಸಿದ್ದು ಅರ್ಥಪೂರ್ಣ ಹಾಗೂ ಭಾವೈಕ್ಯತೆಯ ಕಾರ್ಯವೆಂದು ಗ್ರಾಮಸ್ಥರು ಶ್ಲಾಘಿಸಿದ್ದಾರೆ.
ತಮ್ಮ ಕುಟುಂಬದಲ್ಲಿ ನೆರವೇರಿಸುವಂತೆಯೇ ಉತ್ತಮ ಹಸಿರು ಸೀರೆ ಉಡಿಸುವದರೊಂದಿಗೆ ಹೂವು, ಹಸಿರು ಬಳೆ, ಅರಿಷಣ ಕುಂಕಮ, ಕೊಬ್ಬರಿ, ಅಡಿಕೆ, ಎಲೆ, ಕುಪ್ಪಸವನ್ನು ಉಡಿ ತುಂಬಿ ಮುತೈದೆಯರು ಆರತಿ ಮಾಡಿದರು. ಇನ್ನೂ ವಿಶೇಷವಾಗಿ ಮುಸ್ಲಿಂ ಗರ್ಭೀಣಿಗೂ ಸಹ ಹಿಂದೂ ಸಂಪ್ರದಾಯದ ಪ್ರಕಾರ ಸೀಮಂತ ನೆರವೇರಿಸಿದ್ದು ಭಾವೈಕ್ಯೆತೆಯ ಸಂಕೇತವಾಯಿತು. ಈ ಸಂದರ್ಭದಲ್ಲಿ ಶೋಭಾನ ಪದವನ್ನು ಹಾಡಿದ್ದು ಸೇರಿದ ಭಕ್ತರಲ್ಲಿ ಸಂಭ್ರಮ ತಂದರೆ, ಕೀರ್ತಿ ಮುಸ್ಕಿನಭಾವಿ ಬಾಲಕಿಯ ದೇವಿ ಕುರಿತಾದ ಭರತ ನಾಟ್ಯ ಗಮನ ಸೆಳೆಯಿತು.
ಸೀಮಂತ ಕಾರ್ಯಕ್ರಮದಲ್ಲಿ ವಿಶೇಷವಾಗಿ ಹೋಳಿಗೆ ಊಟವನ್ನು ಬಡಿಸುವುದು ಸಂಪ್ರದಾಯ. ಅದರಂತೆಯೇ ಈ ಸಾಮೂಹಿಕ ಸೀಮಂತ ಕಾರ್ಯಕ್ರಮದಲ್ಲಿ ೧೦೦೦ ಕ್ಕೂ ಹೆಚ್ಚು ಜನಕ್ಕೆ ಹೋಳಿಗೆಯನ್ನು ಗ್ರಾಮದ ಸ್ತಿçà ಶಕ್ತಿ ಸಂಘ ಮತ್ತು ಸ್ವ ಸಹಾಯ ಸಂಘಗಳು ತಮ್ಮ ಮನೆಯಲ್ಲಿಯೇ ತಯಾರಿಸಿ ದೇವಸ್ಥಾನಕ್ಕೆ ಅರ್ಪಿಸಿದ್ದರು. ಇದರೊಂದಿಗೆ ಪಾಯಿಸ್, ಸಂಡಿಗೆ, ಬದ್ನಿಕಾಯಿ, ರೊಟ್ಟಿ, ಅನ್ನ ಸಾರು ಆಹಾರವನ್ನು ಬಂದ ಭಕ್ತಾಧಿಗಳಿಗೆ ಬಡಿಸಲಾಯಿತು. ಇನ್ನೂ ವಿಶೇಷವಾಗಿ ೨೫ ಗರ್ಭಿಣಿಯರಿಗೆ ಒಂದೇ ಕಡೆ ಎಲ್ಲ ಆಹಾರವನ್ನು ಬಡಿಸಲಾಯಿತು.
ಇನ್ನೂ ದುರ್ಗಾ ಮಾತೆಯ ಸನ್ನಿದಿಯಲ್ಲಿ ನಡೆಯುವಂತಹ ಈ ವಿಶೇಷ ಸೀಮಂತ ಕಾರ್ಯಕ್ರಮಕ್ಕೆ ಅಂಗನವಾಡಿ ಕಾರ್ಯಕರ್ತರು, ಸ್ತಿç ಶಕ್ತಿ ಸಂಘ ಹಾಗೂ ಸ್ವ ಸಹಾಯ ಗುಂಪುಗಳ ಸಹಾಯದಿಂದ ಆಗಮಿಸಿದ ೫೦೦ ಕ್ಕೂ ಹೆಚ್ಚು ಮಹಿಳೆಯರಿಗೆ ಉಡಿ ತುಂಬಲಾಯಿತು. ಗರ್ಭಿಣಿಯರಿಗೆ ಸಂಪ್ರದಾಯವಾದ ವಸ್ತುಗಳೊಂದಿಗೆ ಸಂಘದ ಸದಸ್ಯರು ಸೀಮಂತ ನೆರವೇರಿಸಿ ಸಂಭ್ರಮಿಸಿದರು.
ನಾವು ಮನೆಯಲ್ಲಿ ಕುಟುಂಬಸ್ಥರು , ನೆಂಟರು, ಸ್ನೇಹಿತರಿಂದ ಮಾತ್ರ ಸೀಮಂತ ಕಾರ್ಯ ನಡೆಯುತ್ತಿತ್ತು. ಆದರೆ ದುರ್ಗಾದೇವಿ ಸನ್ನಿದಿಯಲ್ಲಿ ಇಡೀ ಗ್ರಾಮದವರೇ ಸೇರಿ ಅರ್ಥಪೂರ್ಣವಾಗಿ ಸೀಮಂತ ನೆರವೇರಿಸಿದ್ದು ಸಂತಸ ತಂದಿದೆ ಎಂದು ಸೀಮಂತ ನೆರವೆರಿಸಿಕೊಂಡ ಪೂಜಾ ಗೌಡರ, ಅಮ್ರೀನ್‌ಸಲ್ಮಾನ್ ಯರಗುಡಿ, ರೇಣುಕಾ ಹಿರೇಹಾಳ ಹೇಳಿದರು. ಇದೇ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ದುರ್ಗಾದೇವಿ ಸೇವಾ ಸಮಿತಿಯ ಅಧ್ಯಕ್ಷ ರುದ್ರಪ್ಪ ಮುಸ್ಕಿನಭಾವಿ, ಸಂಚಾಲಕ ನಜೀರಅಹ್ಮದ ಕಿರೀಟಗೇರಿ ಅವರು ಜಾತಿ, ಭೇದ ಮರೆತು ಗ್ರಾಮದ ಎಲ್ಲ ಸಮುದಾಯದ ಗರ್ಭಿಣಿಯರಿಗೆ ನವರಾತ್ರಿ ಹಬ್ಬದಲ್ಲಿ ಪ್ರತಿ ವರ್ಷ ಸೀಮಂತ ಕಾರ್ಯಕ್ರಮ ಮಾಡುತ್ತಿದ್ದೇವೆ. ಇಂದಿನ ಜಾತಿ ವ್ಯವಸ್ಥೆಯಲ್ಲಿ ಇದೊಂದು ಭಾವೈಕ್ಯತೆಯ ನವರಾತ್ರಿ ಉತ್ಸವವಾಗಿದ್ದು ಎಲ್ಲರ ಸಹಕಾರ ಪ್ರಶಂಸನೀಯವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net