

ರಾಯಚೂರು: ಕರ್ನಾಟಕ ಸರ್ಕಾರ ಉನ್ನತ ಶಿಕ್ಷಣ ಪರಿಷತ್ತು ಹಾಗೂ ಬ್ರಿಟಿಷ್ ಕೌನ್ಸಿಲ್‌ನಿಂದ ಅತ್ಯುತ್ತಮ ಸ್ನಾತಕ ಪದವಿ ವಿದ್ಯಾರ್ಥಿಗಳಿಗೆ ತರಬೇತಿ(ಸ್ಕೌಟ್)ಕಾರ್ಯಕ್ರಮಕ್ಕಾಗಿ ರಾಯಚೂರು ವಿಶ್ವವಿದ್ಯಾಲಯದಿಂದ ಐದು ವಿದ್ಯಾರ್ಥಿಗಳು ಎರಡು ವಾರಗಳ ಕಾಲ ಈಸ್ಟ್ ಲಂಡನ್ ವಿಶ್ವವಿದ್ಯಾಲಯದಲ್ಲಿ ನಡೆದ ಅಧಿವೇಶನದಲ್ಲಿ ಭಾಗವಹಿಸಿ ಯಶಸ್ವಿಯಾಗಿ ವಾಪಸ್ ಮರಳಿದ್ದಾರೆ.
ನ.9ರಂದು ರಾಯಚೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ವಿದ್ಯಾರ್ಥಿಗಳನ್ನು ಲಂಡನ್‌ಗೆ ಕಳುಹಿಸಲಾಗಿತ್ತು. ಅಲ್ಲಿ ಎರಡು ವಾರಗಳ ಕಾಲ ಹಲವು ವಿಷಯಗಳ ಕುರಿತು ಅಧಿವೇಶನಗಳು ನಡೆದಿವೆ. ಶಕ್ತಿ ಸ್ಥಿರತೆ, ವ್ಯವಹಾರ ಅಭಿವೃದ್ಧಿ ಹಾಗೂ ಉದ್ಯಮಶೀಲತೆ ಕುರಿತು ಮಾಹಿತಿಯನ್ನು ತಿಳಿದುಕೊಂಡ ವಿದ್ಯಾರ್ಥಿಗಳು ಈ ವಿಷಯಗಳ ಮೇಲೆ ಹಲವು ಹೊಸ ಆಲೋಚನೆಗಳ ಕುರಿತು ಪ್ರಸ್ತುತೀಕರಣ(ಪ್ರಸೆಂಟೇಷನ್) ತಯಾರಿಸಿ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಪ್ರಾಜೆಕ್ಟ್‌ಗಳನ್ನು ಕಾರ್ಯರೂಪಕ್ಕೆ ತರುವ ಚಿಂತನೆ ಇದೆ ಎಂದು ವಿವಿ ತಿಳಿಸಿದೆ.
ರಾಜ್ಯದ ಆರು ವಿಶ್ವವಿದ್ಯಾಲಯದಿಂದ 30 ವಿದ್ಯಾರ್ಥಿಗಳು ಆರು ನೊಡೆಲ್ ಅಧಿಕಾರಿಗಳು, ಇಬ್ಬರು ಉನ್ನತ ಶಿಕ್ಷಣ ಪರಿಷತ್ತಿನ ಅಧಿಕಾರಿಗಳು ಹಾಗೂ ಇಬ್ಬರು ಬ್ರಿಟಿಷ್ ಕೌನ್ಸಿಲ್ ಅಧಿಕಾರಿಗಳು ಲಂಡನ್‌ನ ಅಧಿವೇಶನದಲ್ಲಿ ಭಾಗವಹಿಸಿದ್ದರು.
ರಾಯಚೂರಿನ ಪ್ರಥಮ ದರ್ಜೆ ಕಾಲೇಜಿನಿಂದ ನಾಲ್ಕು ವಿದ್ಯಾರ್ಥಿಗಳು ಮತ್ತು ಯಾದಗಿರಿ ಪ್ರಥಮ ದರ್ಜೆ ಕಾಲೇಜಿನಿಂದ ಒಬ್ಬ ವಿದ್ಯಾರ್ಥಿ ಲಂಡನ್‌ನಲ್ಲಿ ನಡೆದ ಸ್ಕೌಟ್ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದರು.
ವಿದ್ಯಾರ್ಥಿಗಳ ಹಾಗೂ ನೊಡೆಲ್ ಅಧಿಕಾರಿಗಳ ಟಿಕೆಟ್ ವೆಚ್ಚವನ್ನು ರಾಯಚೂರು ವಿವಿ ನೋಡಿಕೊಂಡಿದ್ದು, ವಿಸಾ ಖರ್ಚನ್ನು ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ತಿನಿಂದ ಮಾಡಲಾಗಿತ್ತು. ಉಳಿದಂತೆ ಲಂಡನ್‌ನಲ್ಲಿ ವಿದ್ಯಾರ್ಥಿಗಳ ಹಾಗೂ ನೊಡೆಲ್ ಅಧಿಕಾರಿಗಳ ವಸತಿ, ಊಟದ ವ್ಯವಸ್ಥೆಯನ್ನು ಬ್ರಿಟಿಷ್ ಕೌನ್ಸಿಲ್‌ನಿಂದ ಮಾಡಲಾಗಿತ್ತು ಎಂದು ಪ್ರಥಮ ದರ್ಜೆ ಕಾಲೇಜಿನ ಗಣಕ ವಿಭಾಗದ ಸಹ ಪ್ರಾಧ್ಯಾಪಕ ಹಾಗೂ ಸ್ಕೌಟ್ ಕಾರ್ಯಕ್ರಮದ ನೊಡೆಲ್ ಅಧಿಕಾರಿ ಎಂ.ರವಿ ತಿಳಿಸಿದ್ದಾರೆ.
ಸ್ಕೌಟ್ ಕಾರ್ಯಕ್ರಮಕ್ಕೆ ರಾಯಚೂರು ವಿವಿಯ ಐದು ಸ್ನಾತಕ ಪದವಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಈಸ್ಟ್ ಲಂಡನ್ ವಿಶ್ವವಿದ್ಯಾಲಯದ ಅಧಿವೇಶನಕ್ಕೆ ಕಳಿಹಿಸಲಾಗಿತ್ತು. ಇದರಿಂದ ಇತರೆ ವಿದ್ಯಾರ್ಥಿಗಳಿಗೂ ಪ್ರೇರಣೆ ಸಿಗಲಿದೆ. | ಡಾ.ಸುಮೀಂದ್ರ ಕುಲಕರ್ಣಿ, ಹಂಗಾಮಿ ಕುಲಪತಿ, ರಾಯಚೂರು ವಿಶ್ವವಿದ್ಯಾಲಯ ಲಂಡನಿನ ಸ್ಕೌಟ್ ಕಾರ್ಯಕ್ರಮದಲ್ಲಿ ವ್ಯಾಪಾರ ಸ್ಥಾಪನೆ ಹಾಗೂ ಅಭಿವೃದ್ಧಿ ಕುರಿತು ಒಂದು ವಾರಗಳ ಕಾಲ ಹಲವು ವಿಚಾರಗಳನ್ನು ತಿಳಿಸಲಾಯಿತು. ನಂತರ ಅಧಿವೇಶನದಲ್ಲಿ ತಿಳಿಸಲಾದ ಪ್ರಮುಖ ಅಂಶಗಳನ್ನು ಸಾರ್ವಜನಿಕ ವಲಯದಲ್ಲಿ ಹೇಗೆ ಬಳಸಬೇಕು ಎಂಬುವುದರ ಬಗ್ಗೆ ತರಬೇತಿ ನಿಡಲಾಯಿತು. ಸ್ಕೌಟ್ ತರಬೇತಿಯಿಂದ ತುಂಬಾ ಅನುಕೂಲವಾಗಿದೆ. | ಡಿ.ಸುದೀಪ್ ಪಾಟೀಲ್, ಸ್ಕೌಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿ.ಎ ವಿದ್ಯಾರ್ಥಿ, ಪ್ರಥಮ ದರ್ಜೆ ಕಾಲೇಜು ರಾಯಚೂರು.