ಲಂಚಮುಕ್ತ ಮದ್ದೂರು ಮಾಡುವ ಗುರಿ

18KMD-1
Published on

ಕೆ.ಎಂ.ದೊಡ್ಡಿ: ಅಧಿಕಾರಿಗಳು ಹಾಗೂ ಮಧ್ಯವರ್ತಿಗಳಿಗೆ ಲಂಚ ನೀಡಬೇಡಿ. ಆ ರೀತಿ ಯಾರಾದರೂ ಕೇಳಿದರೆ ನನ್ನ ಗಮನಕ್ಕೆ ತನ್ನಿ. ಅಂತಹವರ ವಿರುದ್ಧ ಕ್ರಮ ಜರುಗಿಸುತ್ತೇನೆ ಎಂದು ಶಾಸಕ ಕದಲೂರು ಉದಯ್ ತಿಳಿಸಿದರು.


ಚಿಕ್ಕರಸಿನಕೆರೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ದೇವರಹಳ್ಳಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಲಂಚ ಮುಕ್ತ ಮದ್ದೂರು ಮಾಡುವ ಗುರಿ ಹೊಂದಿದ್ದು, ನಿಮ್ಮೆಲ್ಲರ ಸಹಕಾರ ಅಗತ್ಯ. ಈ ಹಿಂದೆ ಅಧಿಕಾರಿಗಳು ನಿಮ್ಮ ಹತ್ತಿರ ಯಾವ ರೀತಿ ವರ್ತಿಸಿದಾರೋ ಅದರ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಅವಧಿಯಲ್ಲಿ ನನ್ನ ಮತದಾರರ ಕೆಲಸವನ್ನು ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಹೇಳಿದರು.
ಕ್ಷೇತ್ರದ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವ ಉದ್ದೇಶದಿಂದ ತಾಲೂಕು ಮಟ್ಟದ ಅಧಿಕಾರಿಗಳನ್ನೇ ನೀವಿರುವಲ್ಲಿಗೆ ಕರೆದುಕೊಂಡು ಬಂದಿದ್ದೇನೆ. ನಿಮ್ಮ ಎಲ್ಲ ಸಮಸ್ಯೆಗಳನ್ನು ಹಂತ-ಹಂತವಾಗಿ ಬಗೆಹರಿಸುತ್ತೇನೆ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.


ತಾಲೂಕು ಮಟ್ಟ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದ್ದವು. ಈಗ ಅವರು ಕೇಂದ್ರ ಸ್ಥಾನದಲ್ಲೇ ಇದ್ದುಕೊಂಡು ಕಾರ್ಯನಿರ್ವಹಿಸಬೇಕೆಂದು ಸೂಚಿಸಿದ್ದೇನೆ ಎಂದರು.
ಕ್ಷೇತ್ರದ ಜನರು ನನ್ನ ಬಳಿ ಬಂದು ಸಮಸ್ಯೆ ಹೇಳಬೇಕಿಲ್ಲ. ನಿಮ್ಮ ಅನುಕೂಲಕ್ಕಾಗಿಯೇ ಚಿಕ್ಕರಸಿನಕೆರೆ ಹೋಬಳಿಯ ಕೆ.ಎಂ.ದೊಡ್ಡಿಯಲ್ಲಿ ಕಚೇರಿ ತೆರೆದಿದ್ದು, ಅಲ್ಲಿ ನಿಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಬೇಕು. ಒಂದು ವೇಳೆ ಸಮಸ್ಯೆಗಳು ಬಗೆಹರಿಯದಿದ್ದರೆ ನನ್ನ ಗಮನಕ್ಕೆ ತರುತ್ತಾರೆ. ನಾನು ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದು ಭರವಸೆ ನೀಡಿದರು.


ನಾನು ಕೆ.ಎಂ.ದೊಡ್ಡಿಯ ಕಚೇರಿಯಲ್ಲಿ ತಿಂಗಳಿಗೆ 3-4 ಬಾರಿಯಾದರೂ ಸಿಗುತ್ತೇನೆ. ತಾಲೂಕು ಕಚೇರಿಯಲ್ಲೂ ಕಚೇರಿ ಆರಂಭಿಸುತ್ತಿದ್ದು, ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಲು ಕ್ರಮವಹಿಸಿದ್ದೇನೆ ಎಂದರು.


ಜಿಪಂ ಮಾಜಿ ಅಧ್ಯಕ್ಷ ಬಿ.ಬಸವರಾಜು, ಮಾಜಿ ಸದಸ್ಯ ಎ.ಎಸ್.ರಾಜೀವ್, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ದೇವರಹಳ್ಳಿ ದೊಡ್ಡೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಟ್ಟನಹಳ್ಳಿ ಶಿವಲಿಂಗೇಗೌಡ, ಗ್ರಾಪಂ ಅಧ್ಯಕ್ಷ ಕದಲೂರು ತಿಮ್ಮೇಗೌಡ, ಮುಖಂಡರಾದ ದೇವರಹಳ್ಳಿ ಬೋರಯ್ಯ, ಕೆರೆ ರಘು, ಮುಟ್ಟನಹಳ್ಳಿ ಮಹೇಂದ್ರ, ದೇವರಹಳ್ಳಿ ರಘು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net