ಲಂಚದ ಹಣದಲ್ಲಿ ಬಿಜೆಪಿ ಜನಸ್ಪಂದನ : ಸಿದ್ದರಾಮಯ್ಯ ಆರೋಪ

siddaramaiah-1575368166
Published on

ಹುಬ್ಬಳ್ಳಿ : ದಾವಣಗೆರೆಯಲ್ಲಿ ನಡೆದ ನನ್ನ ಜನ್ಮದಿನಾಚರಣೆ ಪ್ರತ್ಯುತ್ತರವಾಗಿ ಬಿಜೆಪಿಯವರು ಜನಸ್ಪಂದನ ಕಾರ್ಯಕ್ರಮ ಮಾಡುತ್ತಿದ್ದಾರೆ. ನನ್ನ ಜನ್ಮದಿನಾಚರಣೆಗೆ ಜನ ತಾವಾಗಿಯೆ ಬಂದಿದ್ದರು. ಆದರೆ, ಬಿಜೆಪಿಯವರು ಈ ಕಾರ್ಯಕ್ರಮಕ್ಕೆ ಜನರಿಗೆ ದುಡ್ಡು ಕೊಟ್ಟು ಕರೆಸುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ನಗರದ ವಿಮಾನ ನಿಲ್ದಾಣದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪುಕ್ಕಟೆ ಸಿಕ್ಕ ಹಾಗೂ ಲಂಚದ ಹಣದಲ್ಲಿ ಬಿಜೆಪಿಯವರು ಜನಸ್ಪಂದನ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರವಾಹದಿಂದ ಹಾನಿಯುಂಟಾದ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದೇನೆ. ಜನರಿಗೆ ಸಕಾಲದಲ್ಲಿ ಪರಿಹಾರ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದರು.
ರಾಜ್ಯದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಮಳೆ ಸುರಿದು ಸಾಕಷ್ಟು ಸಮಸ್ಯೆ ಆಗಿದೆ. ಸುಮಾರು 7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಬೆಂಗಳೂರಿನಲ್ಲೂ ಸಹ ಮಳೆಯಿಂದಾಗಿ ಸಮಸ್ಯೆಯಾಗಿದೆ. ಆದರೆ, ಬಿಜೆಪಿಯವರು ಜನರ ಸಮಸ್ಯೆಗಳಿಗೆ ಸ್ಪಂದಿಸುವುದನ್ನು ಬಿಟ್ಟು ಡಾನ್ಸ್ ಮಾಡುತ್ತಿದ್ದಾರೆ. ಈ ಸರ್ಕಾರಕ್ಕೆ ಜನಸಾಮಾನ್ಯರ ಬಗ್ಗೆ ಕಳಕಳಿ ಇಲ್ಲ ಎಂದು ದೂರಿದರು.
ಉತ್ತರ ಕರ್ನಾಟಕದ ಪ್ರಭಾವಿ ರಾಜಕಾರಣಿ ಉಮೇಶ ಕತ್ತಿ ನಿಧನದ ಹಿನ್ನೆಲೆಯಲ್ಲಿ ಶೋಕಾಚರಣೆ ಮಾಡುವುದಾಗಿ ಹೇಳುವ ಬಿಜೆಪಿ ಮುಖಂಡರು, ಮತ್ತೊಂದೆಡೆ ಡಾನ್ಸ್ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಪಿಎಸ್‌ಐ ಹಗರಣದಲ್ಲಿ ಶಾಸಕ ಬಸವರಾಜ ದಡೇಸಗೂರು ಹಣ ಪಡೆದಿದ್ದಾಗಿ ತಾವೇ ಒಪ್ಪಿಕೊಂಡಿದ್ದಾರೆ. ತಕ್ಷಣ ಆ ಶಾಸಕರ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ನಡೆಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿದರೆ ಅವರಿಗೆ ನೋಟಿಸ್ ಕೊಡುತ್ತಾರೆ. ಮತ್ತೊಂದೆಡೆ ಅವರದ್ದೇ ಪಕ್ಷದ ಶಾಸಕ ತಪ್ಪು ಮಾಡಿದ್ದಾಗಿ ಒಪ್ಪಿಕೊಂಡರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಬಿಜೆಪಿಯವರು ಪ್ರತಿ ವಿಷಯದಲ್ಲಿ ಸೇಡಿನ ರಾಜಕೀಯ ಮಾಡುತ್ತಿದ್ದಾರೆ ಎಂದರು.
ಎಸಿಬಿ ರದ್ದು ಪಡಿಸಿ ಲೋಕಾಯುಕ್ತ ಮರು ರಚನೆ ಮಾಡಿರುವುದನ್ನು ನಾವು ಸ್ವಾಗತಿಸಿದ್ದೇವೆ. ಈ ಬಗ್ಗೆ ನ್ಯಾಯಾಲಯದಿಂದಲೇ ಆದೇಶವಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net