ಲಂಚಕ್ಕೆ ಬೇಡಿಕೆ ಇಡುವುದು ಕಾನೂನು ಬಾಹಿರ

4spt2
Published on

ಮಡಿಕೇರಿ : ಸರ್ಕಾರದ ಸೌಲಭ್ಯಗಳು, ಸಂಬಳಗಳನ್ನು ಪಡೆಯುವ ಸರ್ಕಾರಿ ನೌಕರರು ಲಂಚಕ್ಕಾಗಿ ಬೇಡಿಕೆ ಇಡುವುದು ಕಾನೂನು ಬಾಹಿರ ಎಂದು ಸೋಮವಾರಪೇಟೆ ಜೆಎಂಎಫ್‌ಸಿ ಪ್ರಧಾನ ಸಿವಿಲ್ ನ್ಯಾಯಾಧೀಶ ಕೆ.ಗೋಪಾಲಕೃಷ್ಣ ಎಚ್ಚರಿಸಿದರು.


ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಆಡಳಿತದ ವತಿಯಿಂದ ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಸಾರ್ವಜನಿಕರ ಕೆಲಸ ಕಾರ್ಯಗಳನ್ನು ವಿಳಂಬವಿಲ್ಲದಂತೆ ಮಾಡಿಕೊಡಬೇಕು. ಇತ್ತೀಚಿನ ದಿನಗಳಲ್ಲಿ ಅಕ್ರಮ ಗಾಂಜಾ ಮಾರಾಟ ಹೆಚ್ಚುತ್ತಿವೆ. ಇದಕ್ಕೆ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕು. ಕಳ್ಳಬಟ್ಟಿ ಪ್ರಕರಣಗಳನ್ನು ಅಬಕಾರಿ ಇಲಾಖೆ ಪತ್ತೆಹಚ್ಚಿ ಕ್ರಮಕೈಗೊಳ್ಳಬೇಕು ಎಂದ ಅವರು, ಪುಂಡ ಪೋಕರಿಗಳು ಬೈಕ್‌ಗಳಲ್ಲಿ ಕರ್ಕಶ ಶಬ್ದ ಮಾಡುತ್ತ ತೆರಳುತ್ತಿರುವುದು ಕಂಡುಬರುತ್ತಿದೆ. ಇದಕ್ಕೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.


ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಿವಿಲ್ ನ್ಯಾಯಾಧೀಶ ಕೆ. ಗೋಕುಲ್ ಮಾತನಾಡಿ, ಸರ್ಕಾರಿ ನೌಕರರು ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಕೆಲಸ ಮಾಡಬೇಕು. ಅಕ್ರಮವಾಗಿ ಹಣ ಸಂಪಾದನೆ ಮಾಡಬಾರದು. ಸರ್ಕಾರವು ಎಲ್ಲ ಸೌಲಭ್ಯಗಳನ್ನು ನೀಡಿದ್ದರೂ ಭ್ರಷ್ಟಾಚಾರದಲ್ಲಿ ಭಾಗಿಯಾಗುವುದು ನ್ಯಾಯ ಮಾರ್ಗವಲ್ಲ ಎಂದು ಕಿವಿಮಾತು ನುಡಿದರು.


ವಕೀಲರ ಸಂಘದ ಅಧ್ಯಕ್ಷ ಕಾಟ್ನಮನೆ ವಿಠಲ್ ಗೌಡ ಮಾತನಾಡಿ, ಲಂಚ ತೆಗೆದುಕೊಳ್ಳುವುದು ಹಾಗೂ ಕೊಡುವುದು ಅಪರಾಧ. ಸರ್ಕಾರಿ ಅಧಿಕಾರಿಗಳು ಲಂಚದ ಪ್ರಕರಣದಲ್ಲಿ ಸಿಲುಕಿ ಆರೋಪ ಸಾಬೀತಾದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ. ಇಡೀ ಭವಿಷ್ಯ ಹಾಳಾಗುತ್ತದೆ. ಬಹುತೇಕ ಜನರಿಗೆ ಕಾನೂನಿನ ಅರಿವು ಇಲ್ಲವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಅಬಕಾರಿ ಇಲಾಖೆಯ ಉಪ ಅಧೀಕ್ಷಕಿ ಚೈತ್ರಾ, ನಿರೀಕ್ಷಕ ಲೋಕೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net