

ಹಾಸನ: ಇ -ಸ್ವತ್ತು ಮಾಡಿಕೊಡುವ ವಿಚಾರವಾಗಿ ತಾಲ್ಲೂಕಿನ ತಟ್ಟೆಕೆರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೋಹನ್ ಅವರು 10 ಸಾವಿರ ರೂ. ಲಂಚ ಕೇಳಿದ್ದು, ಗುರುವಾರ ರಾತ್ರಿ 10 ಗಂಟೆ ಸಮಯದಲ್ಲಿ ಹೊಸ ಬಸ್ ನಿಲ್ದಾಣದ ಬಳಿ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತರು ದಿಢೀರ್ ದಾಳಿ ನಡೆಸಿ ಸಾಕ್ಷಿ ಸಮೇತ ಪಿಡಿಒ ಬಂಧಿಸಿದ್ದಾರೆ.
ತಾಲೂಕಿನ ದೊಡ್ಡಪುರ ಗ್ರಾಮದ ರಂಗೇಗೌಡ ಎಂಬುವರು ತಟ್ಟೆಕೆರೆ ಗ್ರಾಮದಲ್ಲಿ ಹಲವಾರು ನಿವೇಶನ ಹೊಂದಿದ್ದು, ಒಂದು ನಿವೇಶನದ ಇ-ಸ್ವತ್ತು ಪಡೆಯಲು ಅರ್ಜಿ ಸಲ್ಲಿಸಿದ್ದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೋಹನ್ ಅವರು ಇ -ಸ್ವತ್ತು ಮಾಡಿಕೊಡಲು ಅರ್ಜಿದಾರರಿಂದ 10 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ರಂಗೇಗೌಡ ಅವರು ಹಾಸನ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ನಗರದ ಹೊಸ ಬಸ್ ನಿಲ್ದಾಣ ಕೋರ್ಟ್ ಆವರಣದ ಎದುರು ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪಿಐ ಶಿಲ್ಪಾ ನೇತೃತ್ವದಲ್ಲಿ ದಾಳಿ ದಾಳಿ ನಡೆಸಿ ಲಂಚದ ರೂಪದಲ್ಲಿ ಪಡೆದ ಹಣವನ್ನು ಜಪ್ತಿ ಮಾಡಿದರು. ಆರೋಪಿ ಪಿಡಿಒ ಮೊಹನ್ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಪಿಡಿಒ ಮೋಹನ್ ಕಳೆದ 6 ವರ್ಷಗಳಿಂದ ತಟ್ಟೆಕೆರೆ ಗ್ರಾಮ ಪಂಚಾಯತಿಯಲ್ಲಿ ಪಿಡಿಒ ಕೆಲಸ ಮಾಡುತ್ತಿದ್ದರು.