

ಬೀದರ್: ಗುತ್ತಿಗೆದಾರರೊಬ್ಬರಿಂದ ಲಂಚ ಪಡೆಯುತ್ತಿದ್ದ ವೇಳೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ (ಆರ್ಡಬ್ಲ್ಯೂಎಸ್) ಸಹಾಯಕ ಅಭಿಯಂತರ ನಾಗನಾಥ ಲಕ್ಷ್ಮಣರಾವ ಬಿರಾದಾರ ಗುರುವಾರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಬಿದ್ದಿದ್ದಾರೆ.
ನಗರದ ದೇವಿ ಕಾಲನಿ ನಿವಾಸಿ ಮಚ್ಛೇಂದ್ರರಡ್ಡಿ ರಾಮರಡ್ಡಿ ಅವರಿಗೆ ಜಲಜೀವನ ಮಿಷನ್ ಯೋಜನೆಯಡಿ ಟೆಂಡರ್ ಹಂಚಿಕೆಯಾಗಿದ್ದು, ಕರಾರು ಒಪ್ಪಂದ ಮತ್ತು ವರ್ಕ್ ಆರ್ಡರ್ ಸಿದ್ಧಪಡಿಸಿ ಕಾಮಗಾರಿಯ ಆದೇಶ ಪ್ರತಿಯನ್ನು ನೀಡಿದ ನಂತರ 30 ಸಾವಿರ ರೂ. ಲಂಚಕ್ಕಾಗಿ ನಾಗನಾಥ ಬೇಡಿಕೆ ಇಟ್ಟಿದ್ದರು. ಈ ಕುರಿತು ಮಚ್ಛೇಂದ್ರ ಎಸಿಬಿಗೆ ದೂರು ನೀಡಿದ್ದರು.
ನಾಗನಾಥ ಅವರು ಮಚ್ಛೇಂದ್ರ ಅವರಿಂದ 30 ಸಾವಿರ ರೂ. ಲಂಚದ ಹಣ ತೆಗೆದುಕೊಳ್ಳುವಾಗ ಎಸಿಬಿ ಡಿವೈಎಸ್ಪಿ ಹಣಮಂತರಾಯ ನೇತೃತ್ವದಲ್ಲಿ ದಾಳಿ ನಡೆಸಿ ಬಂಧಿಸಲಾಗಿದೆ. ಪಿಐಗಳಾದ ವೆಂಕಟೇಶ ಯಡಹಳ್ಳಿ, ಶರಣಬಸಪ್ಪ ಮತ್ತು ಸಿಬ್ಬಂದಿ ದಾಳಿಯಲ್ಲಿದ್ದರು