

ಮೈಸೂರು: ರಾಜ್ಯದಲ್ಲಿ ಮಹಿಳಾ ಅಧಿಕಾರಿಗಳಿಂದ ಉಚಿತ ಮನರಂಜನೆ ಸಿಗುತ್ತಿದೆ. ದೇಶದಲ್ಲಿ ರಾಜ್ಯದ ಮಾನ ಮರ್ಯಾದೆಯನ್ನು ಈ ಅಧಿಕಾರಿಗಳು ಹರಾಜು ಹಾಕುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಸರ್ಕಾರ ಇಲ್ಲ ಎಂಬುದು ಸಾಬೀತಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ವಾಗ್ದಾಳಿ ನಡೆಸಿದರು.
‘ನಾನು ನರೇಂದ್ರ ಮೋದಿ, ಅಮಿತ್ ಶಾ ಅವರಲ್ಲಿ ಕೇಳಿಕೊಳ್ಳುತ್ತೇನೆ. ಈ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ರಾಜ್ಯಸಭಾ ಸದಸ್ಯ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ . ಇದರ ಅರ್ಥ ರಾಜ್ಯದಲ್ಲಿ ನಾಲಾಯಕ್ ಸರ್ಕಾರ ಹಾಗೂ ನಾಲಾಯಕ್ ಮುಖ್ಯಮಂತ್ರಿ ಇದ್ದಾರೆ ಎಂಬುದು ಗೊತ್ತಾಗುತ್ತಿದೆ. ದೇಶದಲ್ಲಿ ರಾಜ್ಯದ ಮಾನ ಮರ್ಯಾದೆಯನ್ನು ಈ ಅಧಿಕಾರಿಗಳು ಹರಾಜು ಹಾಕುತ್ತಿದ್ದಾರೆ. ಅಧಿಕಾರಿಗಳಿಗೆ ಮುಖ್ಯಮಂತ್ರಿ ಬೊಮ್ಮಾಯಿ ಒಂದು ನೋಟಿಸ್ ಕೂಡ ಜಾರಿ ಮಾಡಿಲ್ಲ. ಈ ವಿಚಾರದಲ್ಲಿ ರಾಜ್ಯದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಭ್ರಷ್ಟಾಚಾರ ಮೂಲಕ ಲಂಚ ಪಡೆದು ಅವರನ್ನು ನೇಮಕ ಮಾಡಿದ್ದಾರೆ. ಆದ್ದರಿಂದ ಅವರನ್ನು ಕಂಟ್ರೋಲ್ ಮಾಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಸರ್ಕಾರ ಹಲವಾರು ಜನರನ್ನು ರೌಡಿ ಪಟ್ಟಿಯಿಂದ ಕೈಬಿಟ್ಟಿದೆ. 10 ರೌಡಿಗಳಿಗೆ ಎಂಎಲ್ಎ ಟಿಕೆಟ್ ಮತ್ತು 60 ಜನರಿಗೆ ಬಿಬಿಎಂಪಿ ಟಿಕೆಟ್ ನೀಡಲು ನಿರ್ಧಾರ ಮಾಡಿದ್ದಾರೆ. ಸೈಲೆಂಟ್‌ಸುನೀಲ, ಬೆತ್ತನಗೆರೆ ಶಂಕರ, ಸ್ಯಾಂಟ್ರೊ ರವಿ, ಸೈಕಲ್ ರವಿ ಸೇರಿದಂತೆ ಹಲವರು ಬಿಜೆಪಿಗೆ ಸೇರಿದ್ದಾರೆ. ಕಾಂಗ್ರೆಸ್‌ಅನ್ನು ಹೆದರಿಸಲು ಬಿಜೆಪಿಯ ರೌಡಿ ಮೋರ್ಚಾ, ಗೂಂಡಾ ಮೋರ್ಚಾ ತಯಾರಾಗುತ್ತಿದೆ ಎಂದು ಆರೋಪಿಸಿದರು.
ಮಾಂಸ ತಿಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ದೇವಸ್ಥಾನಕ್ಕೆ ಹೋಗಿದ್ದಾರೆ. ಈ ಹಿಂದೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮೀನು ತಿಂದು ದೇವಸ್ಥಾನಕ್ಕೆ ಹೋಗಿದ್ದನ್ನು ಬಿಜೆಪಿಯವರು ಪ್ರಚಾರ ಮಾಡಿದರು. ಅದೇ ಸಿ.ಟಿ.ರವಿ ನಿನ್ನೆ ಭಟ್ಕಳದಲ್ಲಿ ಶಾಸಕ ಸುನಿಲ್ ನಾಯ್ಕ ಮನೆಯಲ್ಲಿ ಮಾಂಸ ತಿಂದಿದ್ದಾರೆ. ಚಿಕನ್, ಮಟನ್, ಶಿಗಡಿ ತಿಂದಿದ್ದಾರೆ. ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿರುವ ಸಿ.ಟಿ. ರವಿಗೆ ನಾಚಿಕೆಯಾಗಬೇಕು ಎಂದರು.