ಲಂಚ ಪಡೆದಲ್ಲಿ ಅಮಾನತು ಖಚಿತ

Visit
Published on

ಚಿತ್ರದುರ್ಗ: ಜಿಲ್ಲಾಸ್ಪತ್ರೆ ಸೇರಿ ಜಿಲ್ಲೆಯ ಯಾವುದೇ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಾಧಿಕಾರಿ, ವೈದ್ಯರು, ಶುಶ್ರೂಷಕರು, ಸಿಬ್ಬಂದಿ ಲಂಚ ಸ್ವೀಕರಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದರೆ, ತನಿಖೆ ನಡೆಸಿ ತಪ್ಪು ಕಂಡು ಬಂದಲ್ಲಿ ಅಮಾನತುಗೊಳಿಸಲಾಗುವುದು ಎಂದು ಆರೋಗ್ಯ ಇಲಾಖೆಯ ರಾಜ್ಯ ಮುಖ್ಯ ಜಾಗೃತ ದಳದ ಅಧಿಕಾರಿ ಕೆ.ಆರ್.ಶ್ರೀನಿವಾಸ್ ಖಡಕ್ ಎಚ್ಚರಿಕೆ ನೀಡಿದರು.

ಜಿಲ್ಲಾಸ್ಪತ್ರೆಗೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ, ಹೆರಿಗೆ ವಿಭಾಗ ಮತ್ತು ತಾಯಿ ವಾರ್ಡ್‌ಗಳಲ್ಲಿ ಲಂಚ ಕೇಳುತ್ತಿರುವ ಕುರಿತು ವ್ಯಾಪಕ ದೂರು ಕೇಳಿಬಂದಿತು. ಮೂವರ ವಿರುದ್ಧ ತನಿಖೆಗೆ ಆದೇಶಿಸಿದ ಅವರು, ಮುಂದಿನ 15 ದಿನದೊಳಗೆ ಈ ವ್ಯವಸ್ಥೆ ಸರಿ ಹೋಗಬೇಕು. ಇಲ್ಲದಿದ್ದಲ್ಲಿ ಮುಲಾಜಿಲ್ಲದೆ, ಅಮಾನತು ಮಾಡುವುದು ಖಚಿತ ಎಂದರು.

ನವಜಾತ ಶಿಶು ವಿಭಾಗ ಪರಿಶೀಲಿಸಿ, ಕಡಿಮೆ ತೂಕದ ಮಕ್ಕಳಿಗೆ ಉತ್ತಮ ಚಿಕಿತ್ಸೆ ದೊರೆಯುತ್ತಿರುವುದನ್ನು ಖಾತ್ರಿ ಪಡಿಸಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾಸ್ಪತ್ರೆಯ ಬಹುತೇಕ ವಾರ್ಡ್‌ಗಳಲ್ಲಿ ಮತ್ತು ಶೌಚಗೃಹಗಳಲ್ಲಿ ಸ್ವಚ್ಛತೆ ಕಾಪಾಡದಿರುವ ಕುರಿತು ಅಸಮಾಧಾನ ಹೊರಹಾಕಿ, ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಶ್ರೀನಿವಾಸ್, ಈ ರೀತಿ ಅಶುಚಿತ್ವದಿಂದಲೂ ಕಾಯಿಲೆಗಳು ಹರಡುವ ಸಾಧ್ಯತೆ ಇದೆ. ಸ್ವಚ್ಛತೆಗೂ ಮೊದಲ ಆದ್ಯತೆ ನೀಡಬೇಕು ಎಂದು ಡಿಎಸ್‌ಗೆ ಸೂಚಿಸಿದರು.

ಕೆಲ ವಾರ್ಡ್‌ಗಳಲ್ಲಿ ಹಾಸಿಗೆ, ದಿಂಬು, ಬೆಡ್ ಶೀಟ್ಸ್‌ಗಳು ಕೂಡ ತುಂಬಾ ಹಳೆಯದಾಗಿವೆ. ಅಲ್ಲದೆ, ಬಳಕೆಗೂ ಯೋಗ್ಯವಾಗಿಲ್ಲ. ಅದರ ಮೇಲೆ ರೋಗಿಗಳನ್ನು ಮಲಗಿಸಿ ಚಿಕಿತ್ಸೆ ನೀಡುವುದು ಸರಿಯಲ್ಲ. ಕೂಡಲೇ ಬದಲಿಸಿ ಎಂದು ತಾಕೀತು ಮಾಡಿದರು. ಹೊಸದಾಗಿ ಖರೀದಿಸಲಾಗಿದ್ದು, ಕೂಡಲೇ ಬದಲಿಸುವುದಾಗಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಪ್ರತಿಕ್ರಿಯಿಸಿದರು.

ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಕೀಲು-ಮೂಳೆ ವಿಭಾಗ, ಫಿಜಿಷಿಯನ್, ಮಕ್ಕಳ ತಪಾಸಣಾ ಕೊಠಡಿ, ತುರ್ತು ಚಿಕಿತ್ಸಾ ವಿಭಾಗ, ರಕ್ತ ಪರೀಕ್ಷಾ ಕೇಂದ್ರ, ಮಕ್ಕಳ ವೈದ್ಯರ ಕುರಿತು ಯಾವುದೇ ದೂರುಗಳಿಲ್ಲ. ತುಂಬಾ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಪರಿಶೀಲನೆ ವೇಳೆ ಖುದ್ದು ರೋಗಿಗಳನ್ನು ಮಾತನಾಡಿಸಿ, ಸಮಸ್ಯೆ ಆಲಿಸಿದರು. ಸರಿಯಾಗಿ ಚಿಕಿತ್ಸೆ, ಊಟ ನೀಡುತ್ತಿದ್ದಾರೆಯೇ? ಏನೇ ಸಮಸ್ಯೆ ಇದ್ದರೂ ಹೇಳಿಕೊಳ್ಳಿ. ಅವುಗಳನ್ನು ಬಗೆಹರಿಸಲೆಂದು ಭೇಟಿ ನೀಡಿದ್ದೇನೆ. ವ್ಯವಸ್ಥೆ ಬದಲಾವಣೆಗೆ ನಿಮ್ಮ ಸಹಕಾರ ಕೂಡ ಮುಖ್ಯ ಎಂದರು.

200 ಹಾಸಿಗೆ ಸಾಮರ್ಥ್ಯವಿರುವ ಆಸ್ಪತ್ರೆಗಳಿಗೂ ದಾಖಲಾಗುವ ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ವೈದ್ಯರು, ನರ್ಸ್‌ಗಳು ಹಾಗೂ ಸಿಬ್ಬಂದಿ ಕೊರತೆ ಇದೆ. ಹೊರರೋಗಿಗಳ ವಿಭಾಗವೂ ಇದಕ್ಕೆ ಹೊರತಾಗಿಲ್ಲ. ಈ ನಡುವೆಯೂ ಇಲಾಖೆಯ ವೈದ್ಯರು ಶಕ್ತಿ ಮೀರಿ ಕಾರ್ಯನಿರ್ವಹಿಸುತ್ತಿದ್ದಾರೆ. ಔಷಧ ಆಮದು, ವಿತರಣೆ ಸಂಪೂರ್ಣ ಆನ್‌ಲೈನ್ ಆದ ಬಳಿಕ ವೈದ್ಯರು ಹೊರಗೆ ಬರೆದುಕೊಡುತ್ತಾರೆ ಎಂಬ ಮೊದಲಿನಂತ ದೂರು ಕೇಳಿಬರುತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ (ಎಬಿಎಆರ್‌ಕೆ) ಯೋಜನೆಯಡಿ ಈ ಬಾರಿ ಜಿಲ್ಲಾಸ್ಪತ್ರೆಗೆ 7-8 ಕೋಟಿ ರೂ. ಅನುದಾನ ಬಂದಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸೂಚಿಸಿದ್ದೇನೆ ಎಂದರು.

ಸಿಟಿ ಸ್ಕ್ಯಾನ್ ಕಾರ್ಯಾರಂಭ: ಸಿಟಿ ಸ್ಕ್ಯಾನ್ ಆಗಿಂದಾಗ್ಗೆ ಕೆಟ್ಟು ಹೋಗುತ್ತಿದೆ ಎಂಬ ದೂರು ಕೇಳಿಬರುತ್ತಿದೆ. ಇಂತಹ ಸಂದರ್ಭದಲ್ಲಿ ತ್ವರಿತವಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಿ ರೋಗಿಗಳಿಗೆ ತೊಂದರೆ ಆಗದಂತೆ ಎಚ್ಚರವಹಿಸಬೇಕು. ಪರದಾಡುವಂತೆ ಮಾಡಬೇಡಿ. ತುರ್ತು ದುರಸ್ತಿಗೂ ಆದ್ಯತೆ ನೀಡಿ ಎಂದು ತಾಕೀತು ಮಾಡಿದರು. ಹಳೆಯದಾದ ಈ ಯಂತ್ರದ ಮಾಹಿತಿ ಪಡೆದು ಕಾರ್ಯಾರಂಭ ಆಗಿರುವುದನ್ನು ಕೂಡ ಶ್ರೀನಿವಾಸ್‌ ಅವರು ಖಚಿತಪಡಿಸಿಕೊಂಡರು.

ಶುಕ್ರವಾರ ರಾತ್ರಿ ಕೂಡ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆರ್‌ಎಂಒ ಡಾ.ಆನಂದ್ ಪ್ರಕಾಶ್, ಮಕ್ಕಳ ತಜ್ಞ ಡಾ.ದೇವರಾಜ್, ಇನ್ನಿತರೆ ವೈದ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net