

ಎನ್.ವೆಂಕಟೇಶ್ ಚಿಕ್ಕಬಳ್ಳಾಪುರ
ಇಲ್ಲಿನ ಜಿಲ್ಲಾಸ್ಪತ್ರೆಗೂ ಖಾಸಗಿ ಆಸ್ಪತ್ರೆಗೂ ವ್ಯತ್ಯಾಸವಿಲ್ಲ! ಬೇರೆ ಕಡೆ 70 ರಿಂದ 90 ಸಾವಿರ ರೂ. ಕೊಡ್ಬೇಕು, ಇಲ್ಲಾದ್ರೆ ಹತ್ತಿಪ್ಪತ್ತು ಸಾವಿರಕ್ಕೆಲ್ಲ ಚಿಕಿತ್ಸೆ ಸಿಗುತ್ತೆ, ಆದರೆ ದುಡ್ಡು ಕೊಡಲಿಲ್ಲ ಅಂದ್ರೆ ನಮ್ಮನ್ನು ತಿರುಗಿಯೂ ನೋಡಲ್ಲ, ಹೆಸರಿಗಷ್ಟೇ ಉಚಿತ ಚಿಕಿತ್ಸೆ!.
ಇದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರ ಸ್ವಕ್ಷೇತ್ರ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ನಡೆಯುತ್ತಿರುವ ಲಂಚಾವತಾರದ ಬಗ್ಗೆ ಕಿಡ್ನಿ ಕಲ್ಲಿನ ಚಿಕಿತ್ಸೆಗೆ ಒಳಗಾಗಿರುವ ರೋಗಿಗಳು ತೋಡಿಕೊಳ್ಳುವ ಅಳಲು. ಕಿಡ್ನಿಯಲ್ಲಿ ಕಲ್ಲು, ಮೂತ್ರ ಜನಾಂಗದ ಸೋಂಕು ಸೇರಿ ಕಿಡ್ನಿ ಸಮಸ್ಯೆ ಇನ್ನಿತರ ಶಸಚಿಕಿತ್ಸೆಗಾಗಿ ಬರುವ ರೋಗಿಗಳ ಸಂಬಂಧಿಕರೊಂದಿಗೆ ಮಾತಿಗಿಳಿದಾಗ ಧನದಾಹಿ ಸಿಬ್ಬಂದಿಯ ಮುಖವಾಡ ಕಳಚಿದೆ.
ಉಚಿತ ಚಿಕಿತ್ಸೆ ನೀಡಬೇಕಾದ ಜಿಲ್ಲಾಸ್ಪತ್ರೆಯಲ್ಲಿ ‘ದುಡ್ಡು ಕೊಟ್ಟರೆ ಮಾತ್ರ ಚಿಕಿತ್ಸೆ’ ಎಂಬ ಅೋಷಿತ ನಿಯಮ ಚಾಲ್ತಿಯಲ್ಲಿರುವುದು ಬೆಳಕಿಗೆ ಬಂದಿದೆ, ಹಣ ಕೊಡದಿದ್ದರೆ ರೋಗಿಗಳನ್ನು ತಿರುಗಿಯೂ ನೋಡೋದಿಲ್ಲ, ಇಲ್ಲದ ನೆಪಹೇಳಿ ಇಡೀ ದಿನ ಕಾಯಿಸುವುದಲ್ಲದೆ ಕೊನೆಗೆ ಬೇರೆ ಆಸ್ಪತ್ರೆಗೆ ಹೋಗುವಂತೆ ಸಾಗಹಾಕುತ್ತಾರೆ ಎನ್ನುತ್ತಾರೆ ರೋಗಿಗಳ ಸಂಬಂಧಿಕರು.
ಶಸಚಿಕಿತ್ಸೆಗೆ ಲಂಚ ಪಡೆಯುವ ಇಲ್ಲಿನ ವೈದ್ಯರು, ಸಿಬ್ಬಂದಿ, ಆಸ್ಪತ್ರೆಯಲ್ಲೇ ಾರ್ಮಸಿ ಇದ್ದರೂ ಮಾತ್ರೆ, ಔಷಧಗಳನ್ನು ಹೊರಗಿನ ಖಾಸಗಿ ಮೆಡಿಕಲ್ಸ್‌ಗಳಿಂದ ತರುವಂತೆ ರೋಗಿಗಳ ಸಂಬಂಧಿಕರಿಗೆ ಚೀಟಿ ಬರೆದುಕೊಡುತ್ತಿರುವ ಆರೋಪಗಳು ಕೇಳಿಬಂದಿವೆ.
ಹಣ ಕೊಡಲಿಲ್ಲ ಅಂತ ಇಡೀ ದಿನ ಕಾಯಿಸಿದ್ರು! : ಶಿಡ್ಲಘಟ್ಟ ತಾಲೂಕಿನ ಮಳ್ಳೂರಿನ ವೆಂಕಟೇಶಪ್ಪ ಎಂಬುವವರನ್ನು ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಎಲ್ಲ ಪರೀಕ್ಷೆಗಳನ್ನು ನಡೆಸಿದ ಬಳಿಕ ಶಸ್ತ್ರಚಿಕಿತ್ಸೆಗೆ ವೈದ್ಯರು ಬರೆದುಕೊಟ್ಟಿದ್ದರು. 23 ಸಾವಿರ ರೂ. ಖರ್ಚಾಗುವುದಾಗಿ ಹೇಳಿ ಸೋಮವಾರ ಶಸ್ತ್ರಚಿಕಿತ್ಸೆ ನಿಗದಿಯಾಗಿತ್ತು. ಆದರೆ, ರೋಗಿ ಆಸ್ಪತ್ರೆಗೆ ದಾಖಲಾದರೂ ಹಣ ಕೊಡದಿರುವುದಕ್ಕೆ ಬೆಳಗ್ಗೆಯಿಂದ ಸಂಜೆಯವರೆಗೂ ಕಾಯಿಸಲಾಗಿದೆ.
ಬಳಿಕ ರೋಗಿಗಳು ಸಂಬಂಧಿಕರು ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಮಂಗಳವಾರ ತಪಾಸಣೆ ಮಾಡುವುದಾಗಿ ಆಸ್ಪತ್ರೆಯಲ್ಲಿರಿಸಿಕೊಂಡಿದ್ದು ಕೊನೆಗೆ ಮಧ್ಯಾಹ್ನ ಬೆಂಗಳೂರು ಇಲ್ಲವೇ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸೂಚಿಸಲಾಗಿದೆ.
ಇದರಿಂದ ರೊಚ್ಚಿಗೆದ್ದ ಸಂಬಂಧಿಕರು ಜಿಲ್ಲಾ ಶಸ್ತ್ರಚಿಕಿತ್ಸಕರ ಕೊಠಡಿಯಲ್ಲಿ ಅವ್ಯವಸ್ಥೆಯ ಬಗ್ಗೆ ಪ್ರಶ್ನಿಸಿ, ರೋಗಿಯನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಮೂತ್ರ ಜನಾಂಗದಿಂದ ರಕ್ತ ಸೋರಿಕೆಯಾಗಿ, ನಿತ್ರಾಣಗೊಂಡ ರೋಗಿ ಪರಿಸ್ಥಿತಿ ಹೇಳ ತೀರದಾಗಿದೆ.
ರೋಗಿಯತ್ತ ತಿರುಗಿಯೂ ನೋಡಲ್ಲ! : ಕಿಡ್ನಿ ಶಸ್ತ್ರಚಿಕಿತ್ಸೆಗೊಳಾಗಿರುವ ಬಹುತೇಕ ರೋಗಿಗಳು 10 ರಿಂದ 20 ಸಾವಿರ ರೂ. ಹಣ ಪಾವತಿಸಿ, ಚಿಕಿತ್ಸೆ ಪಡೆದುಕೊಂಡಿರುವುದಾಗಿ ಹೇಳುತ್ತಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಕಣಜೇನಹಳ್ಳಿಯ ಯುವಕನ ಕಿಡ್ನಿಯಲ್ಲಿ 12 ಎಂಎಂ ಗಾತ್ರದ ಕಲ್ಲು ತೆಗೆಸಲು 10 ಸಾವಿರ ರೂ. ಪಾವತಿಸಿದ ನಂತರ ಚಿಕಿತ್ಸೆ ಲಭಿಸಿರುವುದರ ಬಗ್ಗೆ ಹೇಳಿದರೆ, ಹಾರೋಬಂಡೆಯ ವ್ಯಕ್ತಿಯೊಬ್ಬರು, ಜಿಲ್ಲೆಯ ಪ್ರಭಾವಿ ಜನಪ್ರತಿನಿಧಿಯ ಶಿಫಾರಸ್ಸಿನ ಮೇರೆಗೂ 25 ಸಾವಿರ ರೂ. ನೀಡಿ ಚಿಕಿತ್ಸೆ ಪಡೆದಿರುವುದಾಗಿ ಹೇಳಿದ್ದಾರೆ. ಈ ಎಲ್ಲ ಆಡಿಯೋ ರೆಡಾರ್ಡ್‌ಗಳು ವಿಜಯವಾಣಿಗೆ ಲಭ್ಯವಾಗಿವೆ.
ಸಮಗ್ರ ತನಿಖೆಗೆ ಆಗ್ರಹ : ಜಿಲ್ಲಾಸ್ಪತ್ರೆಯಲ್ಲಿ ಕಿಡ್ನಿ ಸಮಸ್ಯೆ ಮತ್ತು ಮೂತ್ರ ಜನಾಂಗ ಸೋಂಕಿಗೆ ಸಂಬಂಧಿಸಿದಂತೆ ನಾನಾ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ ಸೇವೆಯ ಲಭ್ಯವಿದೆ ಎಂಬ ನಾಮಫಲಕಗಳು ರಾರಾಜಿಸುತ್ತವೆ. ಆದರೆ, ಇಲ್ಲಿ ಹಣ ಕೊಟ್ಟವರಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲದಿದ್ದಲ್ಲಿ ಬೆಂಗಳೂರು ಆಸ್ಪತ್ರೆಗೆ ಶಿಫಾರಸು ಮಾಡಲಾಗುತ್ತದೆ. ಇದರ ಬಗ್ಗೆ ತನಿಖೆ ನಡೆಸಬೇಕು ಎನ್ನುವುದು ರೋಗಿಗಳ ಆಗ್ರಹವಾಗಿದೆ.