

ಚಿತ್ರದುರ್ಗ: ಲಂಕೇಶ್ ಒಂದು ಹೆಸರಲ್ಲ. ಕರ್ನಾಟಕದಲ್ಲಿ ಜರುಗಿದ ವಿದ್ಯಮಾನವೆಂದು ಶಿವಮೊಗ್ಗದ ಪ್ರಾಧ್ಯಾಪಕ ಬಿ.ಎಲ್.ರಾಜು ಹೇಳಿದರು.
ಚಿತ್ರದುರ್ಗ ಗೆಳೆಯರ ಬಳಗದಿಂದ ಪತ್ರಿಕಾ ಭವನದಲ್ಲಿ ಭಾನುವಾರ ಆಯೋಜಿಸಿದ್ದ ‘ಪಿ.ಲಂಕೇಶ್ ಹಾಗೂ ಪ್ರಸ್ತುತ ಸಾಂಸ್ಕೃತಿಕ ವಿದ್ಯಮಾನ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
20ನೇ ಶತಮಾನದ ಕೊನೆಯ 2 ದಶಕದಲ್ಲಿ ಲಂಕೇಶ್, ರಾಜ್ಯದ ಅನೇಕ ವಿದ್ಯಮಾನಗಳನ್ನು ಅತ್ಯಂತ ಗಾಢವಾಗಿ ಪ್ರಭಾವಿಸಿದ್ದಾರೆ. ಕವಿ, ನಾಟಕಕಾರ, ಸಿನಿಮಾ ನಿರ್ದೇಶಕ, ಕಥೆ, ಕಾದಂಬರಿಕಾರ ಹಾಗೂ ಪತ್ರಕರ್ತರಾಗಿ ಸಲ್ಲಿಸಿದ ಸೇವೆ ಅವಿಸ್ಮರಣೀಯ ಎಂದರು.
ಪತ್ರಿಕೆ ಮೂಲಕ ಅನೇಕ ಪ್ರಜ್ಞಾವಂತರು, ಸಾಹಿತಿಗಳನ್ನು ಒಗ್ಗೂಡಿಸುವ ಕೆಲಸ ಲಂಕೇಶ್ ಮಾಡಿದರು. 1980 ರಿಂದ 2000ನೇ ಇಸವಿವರೆಗೂ ಜಾಹೀರಾತಿಲ್ಲದೆ ನಿರ್ಭೀತ, ನಿಷ್ಠುರವಾಗಿ ಪತ್ರಿಕೆ ರೂಪಿಸಿಕೊಂಡು ಬಂದರು. ಕರ್ನಾಟಕದ ರಾಜಕಾರಣವನ್ನು ನೇರ-ನಿಷ್ಠುರವಾಗಿ ಟೀಕಿಸುವ, ವಿಮರ್ಶಿಸುವ ಕಾರ್ಯದಲ್ಲಿ ತೊಡಗಿದ್ದ ದಿಟ್ಟ ಪತ್ರಕರ್ತ ಎಂದು ಬಣ್ಣಿಸಿದರು.
ಆಳುವ ಸರ್ಕಾರಗಳ ಅನೇಕ ಕರ್ಮಕಾಂಡಗಳನ್ನು ಬಯಲಿಗೆಳೆದರು. ಅಧಿಕಾರಸ್ಥರು, ಪಟ್ಟಭದ್ರರ ವಿರುದ್ಧ ಮುಖಾಮುಖಿಯಾಗಿ ನಿಲ್ಲುತ್ತಿದ್ದ ಲಂಕೇಶ್ ವಿರೋಧ ಪಕ್ಷವಾಗಿದ್ದವರು. ರಾಜಕಾರಣ ನಿಂತ ನೀರಾಗಬಾರದೆಂಬ ನಿಲುವು ಅವರದ್ದಾಗಿತ್ತು ಎಂದರು.
ಅವರು ಜಾಹ್ನವಿ, ಬಿ.ಟಿ.ಲಲಿತಾನಾಯ್ಕ, ಸಾರಾ ಅಬೂಬಕರ್ ಸೇರಿ ಅನೇಕ ಲೇಖಕರನ್ನು ಸೃಷ್ಟಿ ಮಾಡಿದರು. ಮೊಗಳ್ಳಿಗಣೇಶ್, ಸಿದ್ದಲಿಂಗಯ್ಯ, ದೇವನೂರು ಮಹಾದೇವ ಮತ್ತಿತರರು ಪತ್ರಿಕೆಗೆ ಬರೆದರು. ಆದರೆ, ಲಂಕೇಶ್ ಅವರ ಪ್ರಜ್ಞಾವಂತಿಕೆ, ನಿಷ್ಠುರತೆ ನಮ್ಮ ತಲೆಮಾರುಗಳಿಗೆ ಮುಂದುವರಿಯಲಿಲ್ಲ ಎಂದು ಬೇಸರಿಸಿದರು.
ಕಥೆಗಾರ ಡಾ.ಗಂಗಾಧರಯ್ಯ ಮಾತನಾಡಿ, ಲಂಕೇಶ್ ಓದಿನ ಹುಚ್ಚು ಹಿಡಿಸಿದ ಪತ್ರಿಕೆ. ಸಿನಿಮಾ, ಕ್ರೀಡೆ, ರಾಜಕಾರಣ, ಟೀಕೆ-ಟಿಪ್ಪಣಿ ಸೇರಿದಂತೆ ಅನೇಕ ವಿಷಯಗಳನ್ನೂ ಹೇಳುತ್ತಿತ್ತು. ರಾಮ್‌ಮನೋಹರ ಲೋಹಿಯಾರ ಆಲೋಚನೆಗಳನ್ನು, ತನ್ನ ಬದುಕು ಮತ್ತು ಬರಹದಲ್ಲಿ ರೂಢಿಸಿಕೊಂಡ ಬಹಳ ದೊಡ್ಡ ಲೇಖಕ ಲಂಕೇಶ್, ಬರೆದಂತೆ ಬದುಕಿ ತೋರಿಸಿದರು. ಅತ್ಯಂತ ಸರಳವಾಗಿ, ಸಂಕೀರ್ಣವಾದುದನ್ನು ಹೇಳಲಿಕ್ಕೆ ಸಾಧ್ಯವಾ ದುದು ಲಂಕೇಶ್‌ಗೆ ಮಾತ್ರ. ಅವರಿಗೆ ಜ್ಞ್ಞಾನಪೀಠ ಪ್ರಶಸ್ತಿ ಬರಬೇಕಿತ್ತು. ಅವರ ಸಾಹಿತ್ಯವನ್ನು ವಿಶ್ವವಿದ್ಯಾಲಯಗಳು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲಿ ಹೆಚ್ಚಾಗಿ ಬಳಸಿಕೊಳ್ಳಬೇಕಿದೆ ಎಂದರು.
ಸರ್ಕಾರಿ ಕಲಾ ಕಾಲೇಜು ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಜೆ.ಕರಿಯಪ್ಪ ಮಾಳಿಗೆ, ಗೆಳೆಯರ ಬಳಗದ ಗೌನಹಳ್ಳಿ ಗೋವಿಂದಪ್ಪ, ಸಾಹಿತಿ ಪರಮೇಶ್ವರಪ್ಪ ಕುದುರಿ, ಸಂಶೋಧನಾ ವಿದ್ಯಾರ್ಥಿ ಬಿ.ಪಿ.ಸಂತೋಷ್ ಕುಮಾರ್ ಬೆಳಗಟ್ಟ ಇತರರಿದ್ದರು.