ರೌಡಿಸಂ, ಭಯೋತ್ಪಾದನೆಗೆ ಕಾಂಗ್ರೆಸ್ ಕಾರಣ

Ravikumar 12 Feb 20
Published on

ಚಿತ್ರದುರ್ಗ: ಕಾಂಗ್ರೆಸ್‌ನ ಬ್ರದರ್ ಸಂಸ್ಕೃತಿಯೇ ರೌಡಿಸಂ, ಭಯೋತ್ಪಾದನೆಗೆ ಕಾರಣ ಎಂದು ಮಂಗಳೂರಿನ ಕುಕ್ಕರ್ ಬಾಂಬ್ ಹಾಗೂ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣ ಉಲ್ಲೇಖಿಸಿ ಎಂಎಲ್ಸಿ ಎನ್.ರವಿಕುಮಾರ್ ವಾಗ್ದಾಳಿ ನಡೆಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೌಡಿಸಂ, ಹೆದರಿಸುವ ಸಂಸ್ಕೃತಿಯೊಂದಿಗೆ ಚುನಾವಣಾ ಬಾಂಡ್‌ಗಳ ಮೂಲಕ ಪ್ರಧಾನಿ ನರೇಂದ್ರ ಮೋದಿ ಪಕ್ಷದ ಹಣ ಸಂಗ್ರಹಣೆಯಲ್ಲಿ ತೊಡಗಿದ್ದಾರೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿದರು.

4.5 ಸಾವಿರ ಕೋಟಿ ರೂ. ಚುನಾವಣೆ ಬಾಂಡ್ ಮೂಲಕ ಹಣ ಬಂದಿದೆ. ಆದರೆ, ಶೇ 63ರಷ್ಟು ಹಣ ಅನ್ಯ ಪಕ್ಷಗಳಿಗೆ ಬಂದಿದೆ ಎಂಬುದು ಮೋದಿ ಆಡಳಿತದ ಅವಧಿಯಲ್ಲಿ ವಿಶ್ವಕ್ಕೆ ಗೊತ್ತಾಗುತ್ತಿದೆ. ಬಿಜೆಪಿ ಪಾರದರ್ಶಕತೆ ಕಾಯ್ದುಕೊಂಡಿದೆ. ಆದರೆ, ಕಾಂಗ್ರೆಸ್ ಎಂದು ಬಹಿರಂಗ ಪಡಿಸಿತ್ತು ಎಂಬುದನ್ನು ರಾಹುಲ್ ಅವರೇ ತಿಳಿಸಬೇಕು ಎಂದರು.

ಮನಮೋಹನ್ ಸಿಂಗ್ ದೇಶದ ಪ್ರಧಾನಿಯಾಗಿದ್ದ ಅವಧಿಯಲ್ಲಿ ಕಲ್ಲಿದ್ದಲು, 2ಜಿ ಸ್ಪೆಕ್ಟ್ರಮ್, ಆದರ್ಶ ಹೌಸಿಂಗ್, ಹೆಲಿಕಾಪ್ಟರ್ ಸೇರಿ 13ಲಕ್ಷ ಕೋಟಿ ರೂ. ಭ್ರಷ್ಟಾಚಾರ ನಡೆದಿತ್ತು. ಇದಕ್ಕೆ ಮೊದಲು ಉತ್ತರಿಸಲಿ ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ವಿಪರೀತ ಭ್ರಷ್ಟಾಚಾರ ನಡೆಯುತ್ತಿದೆ. ಅದಕ್ಕೆ ಗುತ್ತಿಗೆದಾರರ ಸಂಘದ ಮುಖ್ಯಸ್ಥ ಕೆಂಪಣ್ಣ ಶೇ 60ರಷ್ಟು ಪರ್ಸೆಂಟೇಜ್ ಸರ್ಕಾರ ಕೇಳುತ್ತಿದೆ ಎಂಬ ಹೇಳಿಕೆ ನಿದರ್ಶನ. ಅಭಿವೃದ್ಧಿ ಕಾರ್ಯ ಸಂಪೂರ್ಣ ಶೂನ್ಯವಾಗಿದೆ. 692 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಕಾಂಗ್ರೆಸ್ ದುರಾಡಳಿತವೇ ಕಾರಣ. ಕಾನೂನು ಸುವ್ಯವಸ್ಥೆ ಹಳಿ ತಪ್ಪಿದೆ. ತಮ್ಮದೇ ಜನವಿರೋಧಿ ಸರ್ಕಾರಕ್ಕೆ ಏಕೆ ರಾಹುಲ್ ಚಾಟಿ ಬೀಸಿ ಸರಿದಾರಿಗೆ ತರುತ್ತಿಲ್ಲ ಎಂದು ಕಿಡಿಕಾರಿದರು.

ಜಿಲ್ಲಾಧ್ಯಕ್ಷ ಎ.ಮುರಳಿ, ಮುಖಂಡರಾದ ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್, ಛಲವಾದಿ ತಿಪ್ಪೇಸ್ವಾಮಿ, ಯಶವಂತ್, ಶಂಭು, ರವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net