ರೌಡಿಶೀಟರ್‌ಗೆ ನೀಡಿದ್ದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಾಪಾಸ್

Kannada rajyotsava award withdrawn mysore district administration
Published on

ಮೈಸೂರು: ಕನ್ನಡ ರಾಜ್ಯೋತ್ಸವ ಸಂದರ್ಭ ರೌಡಿಶೀಟರ್‌ವೊಬ್ಬರಿಗೆ ನೀಡಿದ್ದ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಜಿಲ್ಲಾಡಳಿತ ಬುಧವಾರ ಹಿಂಪಡೆದಿದೆ.

ನಗರದ ಲಷ್ಕರ್ ಠಾಣೆಯಲ್ಲಿ ರೌಡಿ ಶೀಟರ್ ಆಗಿರುವ ಕಾಂಗ್ರೆಸ್ ಮುಖಂಡ ಎಂ.ಕೆ. ಅಶೋಕ ಅವರಿಗೆ ನಗರದ ಓವಲ್ ಮೈದಾನ ದಲ್ಲಿ ನ.1 ರಂದು ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದ್ದರು. ಈ ಕುರಿತು ಸಾರ್ವಜನಿಕ ವಲಯದಲ್ಲಿ ಟೀಕೆ ವ್ಯಕ್ತವಾದ ನಂತರ ಜಿಲ್ಲಾಡಳಿತ ಎಂ.ಕೆ. ಅಶೋಕ ಅವರ ಪೂರ್ವಪರ ಅವಲೋಕಿಸಿ ಪ್ರಶಸ್ತಿಯನ್ನು ಹಿಂಪಡೆಯುವ ನಿರ್ಧಾರವನ್ನು ಬುಧವಾರ ಪ್ರಕಟಿಸಿದೆ.

ರೌಡಿಶೀಟರ್ ಎಂ.ಕೆ. ಅಶೋಕ ಜಿಲ್ಲಾಡಳಿತದ ಮೇಲೆ ಒತ್ತಡ ತಂದು ‘ಸಮಾಜ ಸೇವೆ’ ಹೆಸರಿನಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅವರು ಕಾಂಗ್ರೆಸ್ ನಾಯಕರು ಎಂಬ ಏಕೈಕ ಕಾರಣಕ್ಕೆ ಅವರಿಗೆ ಪ್ರಶಸ್ತಿ ನೀಡಲಾಗಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ನಗರದ ಸೀತಾವಿಲಾಸ ರಸ್ತೆಯ ನಿವಾಸಿ ಎಂ.ಕೆ. ಅಶೋಕ ಜನನಿ ಸೇವಾ ಟ್ರಸ್ಟ್ ನಡೆಸುತ್ತಿದ್ದು, ಈ ಆಧಾರದ ಮೇಲೆ ‘ಸಮಾಜ ಸೇವೆ’ ಹೆಸರಿನಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದರು. ಅಶೋಕ್ ವಿರುದ್ಧ ಲಷ್ಕರ್ ಮತ್ತು ದೇವರಾಜ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ಪ್ರಕರಣಗಳು ದಾಖಲಾಗಿವೆ.

ಮಗನ ಪುಂಡಾಟ:

ಅಶೋಕ್ ಪುತ್ರ, ಯುವ ಕಾಂಗ್ರೆಸ್ ನಗರ ಪ್ರಧಾನ ಕಾರ್ಯದರ್ಶಿ ನೇವಲ್ ಅಶೋಕ್ ಭಾನುವಾರ ನಗರದ ಜಗನ್ಮೋಹನ ಅರಮನೆಯ ಅಂಗಡಿಯೊಂದಕ್ಕೆ ನುಗ್ಗಿ ದಾಂಧಲೆ ನಡೆಸಿದ್ದ. ನೇವಲ್ ಅಶೋಕ್ ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿ ಬೆದರಿಕೆ ಯೊಡ್ಡಿದ್ದ. ಈ ಕುರಿತು ದೇವರಾಜ ಪೊಲೀಸ್ ಠಾಣೆಗೆ ಅಂಗಡಿ ಮಾಲೀಕ ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿ ಸ್ಟೇಷನ್ ಬೇಲ್ ಮೇಲೆ ಬಿಡುಗಡೆಗೊಳಿಸಿದರು. ಈ ಪ್ರಕರಣವಾದ ನಂತರ ತಂದೆಯ ರೌಡಿ ಹಿನ್ನಲೆಯೂ ಬೆಳಕಿಗೆ ಬಂದಿದೆ.

ಈ ಕುರಿತು ಟ್ವೀಟ್ ಮಾಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ‘ಕೊತ್ವಾಲನ (ಕು)ಖ್ಯಾತ ಶಿಷ್ಯರು ಅಧಿಕಾರದಲ್ಲಿದ್ದರೆ ಏನಾಗುತ್ತದೆ ಎಂಬುದಕ್ಕೆ ಈ ಘಟನೆಯೇ ನಿದರ್ಶನ. ಈತ ರೌಡಿ ಶೀಟರ್ ಎಂಬುದು ಗೊತ್ತಿದ್ದೂ ಸಹ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟಿದ್ದು ಯಾರ ಒತ್ತಡದ ಮೇರೆಗೆ ಎಂದು ಜಿಲ್ಲಾಡಳಿತ ಬಹಿರಂಗಪಡಿಸಲಿ. ಪ್ರಶಸ್ತಿಯ ಪಾವಿತ್ರೃತೆ ಹಾಳು ಮಾಡಿದ ಜಿಲ್ಲಾಡಳಿತ ಹಾಗೂ ಕೆಲ ಪಟ್ಟಭದ್ರಹಿತಾಸಕ್ತಿಗಳು ‘ಸಾಂಸ್ಕೃತಿಕ ನಗರಿಯನ್ನು’ ಅಸಂಸ್ಕೃತರ ತವರೂರಾಗಿ ಮಾಡ ಹೊರಟಿರುವುದು ರಾಜ್ಯದ ದುರಂತ’ ಎಂದು ಟೀಕಿಸಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಅಪರಾಧ ಹಿನ್ನೆಲೆ ಕುರಿತು ಮಾಹಿತಿ ಕಲೆಹಾಕಲು ಜಿಲ್ಲಾಡಳಿತ ಕ್ರಮ ವಹಿಸಿತ್ತು. ಆದರೆ, ಕಾಲಾವಕಾ ಶದ ಕೊರತೆಯಿಂದ ಪರಿಶೀಲಿಸಲು ಸಾಧ್ಯವಾಗದೆ ಆಯ್ಕೆ ಪಟ್ಟಿ ಪ್ರಕಟಿಸಲಾಯಿತು. ಎಂ.ಕೆ. ಅಶೋಕ ಪ್ರಶಸ್ತಿ ಸ್ವೀಕರಿಸಲು ಅರ್ಹರಲ್ಲ ಎಂಬುದು ಮನವರಿಕೆಯಾದ ನಂತರ ಅವರಿಗೆ ನೀಡಿರುವ ಪ್ರಶಸ್ತಿಯನ್ನು ಹಿಂಪಡೆಯಲು ತೀರ್ಮಾನಿಸಲಾಗಿದೆ.
ಡಾ.ಎಂ.ಡಿ. ಸುದರ್ಶನ್, ಸಹಾಯಕ ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net