

ಆನೇಕಲ್: ಹಾರಗದ್ದೆ ಹಾಗೂ ಜಿಗಣಿ ರಸ್ತೆಯಲ್ಲಿ ತೆರಳುತ್ತಿದ್ದ ರೌಡಿಶೀಟರ್ ಕಾರಿನ ಮೇಲೆ ಅಪರಿಚಿತರು ದಾಳಿ ನಡೆಸಿದ್ದು, ರೌಡಿಶೀಟರ್ ಪರಾರಿಯಾಗಿದ್ದಾನೆ. ಕುಖ್ಯಾತ ರೌಡಿಶೀಟರ್ ಒಬ್ಬ ಕಾರಿನಲ್ಲಿದ್ದ ಎನ್ನುವ ಮಾಹಿತಿ ಮೇರೆಗೆ ಮೂರು ಪ್ರತ್ಯೇಕ ವಾಹನದಲ್ಲಿ ಬಂದ ಇಪ್ಪತ್ತಕ್ಕೂ ಅಧಿಕ ಮಂದಿ ಲಾಂಗು, ಮಚ್ಚುಗಳಿಂದ ಅಟ್ಯಾಕ್ ಮಾಡಿದ್ದಾರೆ. ಇನ್ನೋವಾ ಕಾರಿಗೆ ಸ್ಕಾರ್ಪಿಯೋ ಕಾರು ಡಿಕ್ಕಿ ಹೊಡೆಯುತ್ತಿದ್ದಂತೆ ಎಚ್ಚೆತ್ತ ರೌಡಿಶೀಟರ್ ಕಾರನ್ನು ಹಿಮ್ಮುಖವಾಗಿ ಸುಮಾರು ಅರ್ಧ ಕಿಲೋಮೀಟರ್ ಚಲಾಯಿಸಿಕೊಂಡು ಹೋಗಿದ್ದಾನೆ. ಮುಖ್ಯ ರಸ್ತೆಯಲ್ಲಿ ಡಿವೈಡರ್ ಮೇಲೆ ಕಾರು ಹತ್ತುತ್ತಿದ್ದಂತೆ ಚಲಾಯಿಸಲು ಸಾಧ್ಯವಾಗದೆ ಕಾರು ಬಿಟ್ಟು ಪರಾರಿ ಆಗಿದ್ದಾರೆ. ಕಾರನ್ನು ಹಿಂಬಾಲಿಸಿದ ರೌಡಿಗಳ ಗ್ಯಾಂಗ್ ಕೂಡ ಸ್ಕಾರ್ಪಿಯೋ ಕಾರು ಬಿಟ್ಟು ಕಾಲ್ಕಿತ್ತಿದ್ದಾರೆ. ಸ್ಥಳಕ್ಕೆ ಬಂದ ಜಿಗಣಿ ಪೊಲೀಸರು ರಸ್ತೆಯಲ್ಲಿ ಇದ್ದ ಇನ್ನೋವಾ ಹಾಗೂ ಸ್ಕಾರ್ಪಿಯೊ ಕಾರು ಮತ್ತು ಕಾರಿನಲ್ಲಿದ್ದ ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಆನೇಕಲ್ ಉಪವಿಭಾಗದ ಡಿವೈಎಸ್ಪಿ ಮೋಹನ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ದಾಬಸ್‌ಪೇಟೆಯಲ್ಲಿ ಲಾರಿ ಡಿಕ್ಕಿಯಾಗಿ ವೃದ್ಧ ಸಾವು
ದಾಬಸ್‌ಪೇಟೆ: ಪಟ್ಟಣದ ಉದ್ದಾನೇಶ್ವರ ವೃತ್ತದ ದೊಡ್ಡಬಳ್ಳಾಪುರ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ದಾಟುವಾಗ ಮಂಗಳವಾರ ಬೆಳಗ್ಗೆ ಲಾರಿ ಡಿಕ್ಕಿಯಾಗಿ ಆಗಳಕುಪ್ಪೆಯ ಕೆಂಪಣ್ಣ(88) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕೆಂಪಣ್ಣ ಆಸ್ಪತ್ರೆಗೆ ಬಂದು ಗಾಯಕ್ಕೆ ಡ್ರೆಸ್ಸಿಂಗ್ ಮಾಡಿಸಿಕೊಂಡು ಊರಿನ ಕಡೆ ಹೋಗಲು ರಸ್ತೆ ದಾಟುವಾಗ ತುಮಕೂರು ಮಾರ್ಗದಿಂದ ಬಂದ ಲಾರಿ ಡಿಕ್ಕಿಯಾಗಿದೆ. ಲಾರಿಯ ಎರಡು ಚಕ್ರಗಳು ಕೆಂಪಣ್ಣನ ಸೊಂಟದ ಮೇಲೆ ಹತ್ತಿದ್ದರಿಂದ ಅವರು ಸ್ಥಳದಲ್ಲಿಯೇ ಮೃತಪಟ್ಟರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ದಾಬಸ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.