ಮೈಸೂರು: ರೌಡಿಶೀಟರ್ ಒಂಟಿಕೊಪ್ಪಲಿನ ನಿವಾಸಿ ಚಂದ್ರು ಅಲಿಯಾಸ್ ಚಂದು ಹತ್ಯೆ ಪ್ರಕರಣದಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸರು 7 ಜನ ಆರೋಪಿಗಳನ್ನು ಶನಿವಾರ ಬಂಧಿಸಿದ್ದಾರೆ.
ನಗರದ ವಾಣಿ ವಿಲಾಸ ಮೊಹಲ್ಲಾದ ಕಾಳಿದಾಸ ರಸ್ತೆಯ ಟೈಲರ್ ಶಾಪ್ ಬಳಿ ಚಂದ್ರು ಮೇಲೆ ಮೇ 18ರಂದು ಮೂರು ಬೈಕ್‌ನಲ್ಲಿ ಬಂದ ಗುಂಪು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿ ಆಗಿತ್ತು.
ಸ್ಥಳದಲ್ಲಿ ಇದ್ದ ಸಿಸಿ ಟಿವಿ ಫೂಟೇಜ್ ಮೂಲಕ ಕಂಡು ಬಂದಿರುವ ದೃಶ್ಯಾವಳಿ ಪರಿಶೀಲಿಸಿದ ಪೊಲೀಸರು, ಮೂರು ದ್ವಿಚಕ್ರ ವಾಹನಗಳಲ್ಲಿ ತ್ರಿಪಲ್ ರೈಡಿಂಗ್ ಬಂದಿದ್ದ ಆರೋಪಿಗಳು ಕೊಲೆ ಮಾಡಿದ್ದರು. ದೃಶ್ಯಾವಳಿ ಆಧರಿಸಿ 4 ರಿಂದ 5 ಜನ ಹಂತಕರನ್ನು ಪೊಲೀಸರು ಗುರುತು ಮಾಡಿದ್ದರು. ಇದರ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪಡುವಾರಹಳ್ಳಿಯ ದೇವು ಅಲಿಯಾಸ್ ದೇವೇಂದ್ರ ಹತ್ಯೆಯ ಹಳೇ ವೈಷಮ್ಯದಿಂದ ಈ ಹತ್ಯೆ ಮಾಡಲು ಕಾರಣ ಎನ್ನಲಾಗಿದೆ.
ಎನ್.ಆರ್. ವಿಭಾಗದ ಎಸಿಪಿ ಅಶ್ವತ್ಥನಾರಾಯಣ, ದೇವರಾಜ ವಿಭಾಗ ಎಸಿಪಿ ಶಾಂತಮಲ್ಲಪ್ಪ, ಸಿಸಿಬಿ ಘಟಕದ ಎಸಿಪಿ ಸಂದೇಶ್ ಕುಮಾರ್, ಮಂಡಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಯೋಗೇಶ್ ಇತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.