ರೌಡಿಶೀಟರ್ ಅನಿಲ್ ಕೊಲೆಗೆ ಸಂಚು ರೂಪಿಸಿದ್ದ ಇಬ್ಬರ ಬಂಧನ

18 smg Vignesh(1)(2)
Published on

ಶಿವಮೊಗ್ಗ: ಅಣ್ಣಪ್ಪ ಅಲಿಯಾಸ್ ಹಂದಿ ಅಣ್ಣಿ ಬರ್ಬರ ಹತ್ಯೆ ಬೆನ್ನಲ್ಲೇ ಆತನ ಸಹಚರ ರೌಡಿಶೀಟರ್ ಅನಿಲ್ ಅಲಿಯಾಸ್ ಅಂಬುವಿನ ಕೊಲೆಗೆ ಸಂಚು ರೂಪಿಸಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ತಲೆಮರೆಸಿಕೊಂಡಿದ್ದಾನೆ.
ಬುದ್ಧನಗರದ ಪವನ್ ಅಲಿಯಾಸ್ ವ್ನಿೇಶ್ ಮತ್ತು ಓ.ಟಿ.ರಸ್ತೆಯ ಕಿರಣ್‌ಕುಮಾರ್ ಅಲಿಯಾಸ್ ಕುಟ್ಟಿ ಬಂಧಿತರು. ಚಂದನ್ ಎಂಬಾತ ಪರಾರಿಯಾಗಿದ್ದಾನೆ. ಬಂಧಿತರಿಂದ ಲಾಂಗ್, ಮಚ್ಚುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ನಗರದಲ್ಲಿ ಮೂರುವರೆ ವರ್ಷದ ಹಿಂದೆ ರೌಡಿಶೀಟರ್ ಬಂಕ್ ಬಾಲು ಕೊಲೆ ನಡೆದಿತ್ತು. ಆ ಕೊಲೆಯನ್ನು ಹಂದಿ ಅಣ್ಣಿಯ ಸಹಚರ ಅನಿಲ್ ಮತ್ತು ಆತನ ಸಂಗಡಿಗರು ಮಾಡಿದ್ದರು. ಅದಕ್ಕೆ ಪ್ರತೀಕಾರವಾಗಿ ಅನಿಲ್‌ನನ್ನು ಮುಗಿಸಲು ಮೂವರೂ ಸ್ಕೆಚ್ ಹಾಕಿದ್ದರು. ಅದಕ್ಕಾಗಿ ಬುದ್ಧನಗರದ ಪವನ್ ಮನೆಯಲ್ಲಿ ಮಾರಕಾಸ್ತ್ರಗಳನ್ನು ಸಂಗ್ರಹಿಸಿದ್ದರು.
ಖಚಿತ ಮಾಹಿತಿ ಮೇರೆಗೆ ಭಾನುವಾರ ಇನ್‌ಸ್ಪೆಕ್ಟರ್ ರವಿಕುಮಾರ ನೇತೃತ್ವದಲ್ಲಿ ಪವನ್ ಮನೆ ಮೇಲೆ ದಾಳಿ ನಡೆಸಿ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದರು. ಜತೆಗೆ ಪವನ್‌ನನ್ನು ವಿಚಾರಣೆ ನಡೆಸಿದಾಗ ಅನಿಲ್ ಕೊಲೆಗೆ ಮೂವರು ಸ್ಕೆಚ್ ಹಾಕಿದ್ದನ್ನು ಬಾಯಿಬಿಟ್ಟಿದ್ದಾನೆ. ಪವನ್ ನೀಡಿದ ಮಾಹಿತಿ ಆಧಾರದ ಮೇಲೆ ಕಿರಣ್‌ಕುಮಾರ್‌ನನ್ನೂ ಬಂಧಿಸಿದ್ದಾರೆ.
ಒಂದು ತಿಂಗಳಿಂದ ಸ್ಕೆಚ್ ಹಾಕಿದ್ದರು !: ಕಳೆದೊಂದು ತಿಂಗಳಿಂದ ಅನಿಲ್ ಕೊಲೆಗೆ ಮೂವರು ಸಂಚು ರೂಪಿಸಿದ್ದರು. ಪವನ್ ಮನೆಯ ಬಳಿ ಭೇಟಿಯಾದಾಗ ಬಂಕ್ ಬಾಲುನನ್ನು ಹೊಡೆದ ಅನಿಲನನ್ನು ಸ್ಕೆಚ್ ಹಾಕಿ ಹೊಡೆಯೋಣ. ಅದಕ್ಕಾಗಿ ಆಯುಧಗಳನ್ನು ಖರೀದಿಸಿಟ್ಟಿರುವಂತೆ ಚಂದನ್ ತಿಳಿಸಿದ್ದ. ಅವರ ಜತೆ ಕಿರಣ್‌ಕುಮಾರ್ ಕೂಡ ಕೈಜೋಡಿಸಿದ್ದ. ಅಂದುಕೊಂಡಂತೆ ಪವನ್ ಮನೆಯಲ್ಲಿ ಮಾರಕಾಸ್ತ್ರಗಳನ್ನು ತಂದು ಇಟ್ಟಿದ್ದರು. ಆನಂತರ ಅನಿಲ್‌ನ ಚಲನವಲನಗಳ ಬಗ್ಗೆ ನಿಗಾ ವಹಿಸಿದ್ದರು. ಸಂಚು ರೂಪಿಸಿ ಅನಿಲ್‌ನ ಹತ್ಯೆಗೂ ಮುನ್ನವೇ ಪೊಲೀಸರ ಅತಿಥಿಯಾಗಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net