ರೌಡಿ ಶೀಟರ್ ಬರ್ಬರ ಹತ್ಯೆ ಇಬ್ಬರ ಬಂಧನ

ರೌಡಿ ಶೀಟರ್ ಬರ್ಬರ ಹತ್ಯೆ ಇಬ್ಬರ ಬಂಧನ
Published on

ಹಾಸನ: ತಾಲೂಕು ದಾಸರಕೊಪ್ಪಲು ಗ್ರಾಮದ ಸಂತೋಷ ಅಲಿಯಾಸ್ ಪುಲ್ಲಿ (35) ಎಂಬ ರೌಡಿ ಶೀಟರ್ ನಾಪತ್ತೆ ಆಗಿದ್ದ ಪ್ರಕರಣವನ್ನು ಕೆ.ಆರ್. ಪುರಂ ಬಡಾವಣೆ ಠಾಣೆ ಪೊಲೀಸರು ಭೇದಿಸಿದ್ದು, ಇಬ್ಬರು ಕೊಲೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ ತಿಳಿಸಿದರು.

ಪುಲ್ಲಿಯನ್ನು ಆತನ ಗೆಳೆಯರಾದ ಪ್ರೀತಮ್ ಅಲಿಯಾಸ್ ಪ್ರೀತಮ್ ಗೌಡ (25) ಮತ್ತು ಬಿ.ಎಸ್. ಕೀರ್ತಿ (24) ಎಂಬಿಬ್ಬರು ಪ್ರವಾಸಕ್ಕೆಂದು ಚಿಕ್ಕಮಗಳೂರಿಗೆ ಕರೆದುಕೊಂಡು ಹೋಗಿ ಅರಣ್ಯಪ್ರದೇಶವೊಂದರಲ್ಲಿ ಕೊಲೆ ಮಾಡಿ ಹೂತು ಹಾಕಿದ್ದು ಪೊಲೀಸರ ತನಿಕೆಯಿಂದ ಬೆಳಕಿಗೆ ಬಂದಿದೆ ಎಎಸ್ಪಿ ತಮ್ಮಯ್ಯ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪ್ರಕರಣದ ವಿವರ:

ದಾಸರಕೊಪ್ಪಲು ಗ್ರಾಮದ ಪುಲ್ಲಿ ಈ ಹಿಂದೆ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದು, ರೌಡಿ ಪಟ್ಟಿಗೆ ಸೇರಿದ್ದಾನೆ. ಈತನನ್ನು ಕಳೆದ ಫೆಬ್ರವರಿ 9 ರಂದು ಆರೋಪಿಗಳಾದ ಪ್ರೀತಮ್ ಮತ್ತು ಬಿ.ಎಸ್. ಕೀರ್ತಿ ಎಂಬಿಬ್ಬರು ಚಿಕ್ಕಮಗಳೂರು ಪ್ರವಾಸಕ್ಕೆಂದು ಕರೆದೊಯ್ದಿದ್ದರು. ಅದಾದ ವಾರ ಕಳೆದರೂ ಪುಲ್ಲಿ ಮನೆಗೆ ಹಿಂದಿರುಗಿರಲಿಲ್ಲ. ಈ ಹಿಂದೆಯೂ ಪುಲ್ಲಿ ಅನೇಕ ಬಾರಿ ಮನೆಯಿಂದ ವಾರಗಟ್ಟಲೆ ಹೊರಗೇ ಇರುತ್ತಿದ್ದರಿಂದ ಆತನ ಮನೆಯವರು ತಲೆಕೆಡಿಸಿಕೊಂಡಿರಲಿಲ್ಲ.

ಆದರೆ ಕಳೆದ ಫೆ.26 ರಂದು ಪುಲ್ಲಿಯ ತಂದೆ ದಾಸೇಗೌಡರಿಗೆ ಅದೇ ಗ್ರಾಮದ ಕೇಶವಮೂರ್ತಿ ಎಂಬುವರು, ‘ನಿಮ್ಮ ಮಗನನ್ನು ಆತನ ಸ್ನೇಹಿತರೇ ಕರೆದೊಯ್ದು ಕೊಲೆ ಮಾಡಿದ್ದಾರಂತೆ’ ಎಂಬ ಸುದ್ದಿ ಮುಟ್ಟಿಸಿದ್ದರಿಂದ ಆತಂಕಗೊಂಡ ದಾಸೇಗೌಡರು ಬಡಾವಣೆ ಠಾಣೆಗೆ ದೂರು ನೀಡಿದ್ದರು.

ಈ ಪ್ರಕರಣವನ್ನು ಸವಾಲಾಗಿ ತೆಗೆದುಕೊಂಡ ಎಸ್ಪಿ ಹರಿರಾಮ್ ಶಂಕರ್ ಮತ್ತು ಎಎಸ್‌ಪಿ ತಮ್ಮಯ್ಯ ಅವರು ತನಿಖೆಗಾಗಿ ಪೊಲೀಸರ ವಿಶೇಷ ತಂಡ ರಚಿಸಿದ್ದರು. ಖಚಿತ ಸುಳಿವಿನ ಮೇರೆಗೆ ಮಾರ್ಚ್ 4 ರಂದು ನಗರದ ರಿಂಗ್ ರಸ್ತೆಯ ಟೀ ಅಂಗಡಿಯೊಂದರಲ್ಲಿದ್ದ ಆರೋಪಿಗಳನ್ನು ಪೊಲೀಸರು ಸುತ್ತುವರಿದು ಬಂಧಿಸಿದ್ದಾರೆ.

ತೀವ್ರ ವಿಚಾರಣೆ ನಂತರ ಪುಲ್ಲಿಯನ್ನು ತಾವೇ ಕೊಲೆ ಮಾಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಪುಲ್ಲಿ ಮತ್ತು ಪ್ರೀತಮ್ ಗೌಡ ಇಬ್ಬರೂ ಹಿಂದೆ ಕೊಲೆ ಪ್ರಕರಣವೊಂದರಲ್ಲಿ ಆರೋಪಿಗಳಾಗಿದ್ದರು. ಇವರಿಬ್ಬರ ನಡುವೆ ಇತ್ತೀಚೆಗೇ ಯಾವುದೋ ವಿಷಯಕ್ಕೆ ವೈಮನಸ್ಸು ಉಂಟಾಗಿತ್ತು ಎನ್ನಲಾಗಿದೆ. ಪೂರ್ವಸಂಚಿನಂತೆ ಪುಲ್ಲಿಯನ್ನು ಪ್ರವಾಸಕ್ಕೆಂದು ಕರೆದೊಯ್ದು ಫೆ.10 ರಂದು ಚಿಕ್ಕಮಗಳೂರು ತಾಲೂಕು ಕಸಬಾ ಹೋಬಳಿ ಕುರುವಂಗಿ ಗ್ರಾಮದ ಸ.ನಂ. 194ರ ಅರಣ್ಯ ಪ್ರದೇಶದಲ್ಲಿ ಮೂವರು ಮದ್ಯ ಸೇವನೆ ಮಾಡಿ, ನಂತರ ಪುಲ್ಲಿಗೆ ಗಾಂಜಾ ಸೇವನೆ ಮಾಡಿಸಿ, ಆತ ಪ್ರಜ್ಞೆ ತಪ್ಪಿದ ಮೇಲೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಅದೇ ಅರಣ್ಯ ಪ್ರದೇಶದಲ್ಲಿ ಗುಂಡಿ ತೆಗೆದು ಹೂತು ಹಾಕಿದ್ದರು.

ಗಡಿಪಾರಿಗೆ ಶಿಫಾರಸ್ಸಾಗಿದ್ದ ಪುಲ್ಲಿ:

ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವು ರೌಡಿಶೀಟರ್‌ಗಳನ್ನು ಗಡಿಪಾರು ಮಾಡಲು ಸಿದ್ಧತೆ ನಡೆಸಲಾಗಿದೆ. ಈಗಾಗಲೇ 6 ರೌಡಿ ಶೀಟರ್‌ಗಳನ್ನು ಗಡಿಪಾರು ಮಾಡಿದ್ದು, ಇನ್ನೂ 11 ಮಂದಿ ರೌಡಿ ಶೀಟರ್‌ಗಳ ಗಡಿಪಾರು ಮಾಡಲು ಶಿಫಾರಸು ಮಾಡಿ ಉಪ ವಿಭಾಗಾಧಿಕಾರಿಗೆ ಎಸ್ಪಿ ಹರಿರಾಮ್ ಶಂಕರ್ ಪಟ್ಟಿ ಸಲ್ಲಿಸಿದ್ದರು. ಆ ಪಟ್ಟಿಯಲ್ಲಿ ಸಂತೋಷ್ ಅಲಿಯಾಸ್ ಪುಲ್ಲಿ ಹೆಸರು ಸಹ ಇತ್ತು ಎಂದು ಹೇಳಲಾಗಿದೆ.

ಪೂರ್ವ ನಿಯೋಜಿತ ಕೃತ್ಯ:

ಪುಲ್ಲಿಯನ್ನು ಕೊಲೆ ಮಾಡಲೇಬೇಕೆಂಬ ಉದ್ದೇಶದಿಂದ ಪ್ರೀತಮ್ ಗೌಡ ಮತ್ತು ಕೀರ್ತಿ ಕಾರಿನ ಡಿಕ್ಕಿಯಲ್ಲಿ ಹಾರೆ, ಗುದ್ದಲಿ ಮತ್ತು ಪಿಕಾಸಿಗಳನ್ನು ಇಟ್ಟುಕೊಂಡು ಪುಲ್ಲಿಯನ್ನು ಪ್ರವಾಸಕ್ಕೆ ಕರೆದೊಯ್ದಿದ್ದರು. ಇದೊಂದು ಪೂರ್ವನಿಯೋಜಿತ ಕೊಲೆ ಪ್ರಕರಣವಾಗಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ದೊರೆಯುವಂತೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಎಸ್ಪಿ ತಮ್ಮಯ್ಯ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net