

ಮೈಸೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಶಾಸಕ ಸಾ.ರಾ.ಮಹೇಶ್ ಅವರು ಒಂದು ಕೋಟಿ ರೂ.ಗೆ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಭೂ ಕಬಳಿಕೆ ಮಾಡಿದ್ದಾರೆ ಎಂದು ರೋಹಿಣಿ ಸಿಂಧೂರಿ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದ್ದರಿಂದ ಇದರ ಬಗ್ಗೆ ಸಾ.ರಾ.ಮಹೇಶ್ ಅವರು ನಗರದ ಎರಡನೇ ಜಿಲ್ಲಾ ಸೆಷನ್ಸ್ ನ್ಯಾಯಲಯದಲ್ಲಿ ಒಂದು ಕೋಟಿ ರೂ.ಗೆ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾಹಿತಿ ನೀಡಿದ ಸಾ.ರಾ.ಮಹೇಶ್ ಅವರು, ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ನನ್ನ ವಿರುದ್ಧ ರೋಹಿಣಿ ಸಿಂಧೂರಿ ಅವರು ಭೂಕಬಳಿಕೆ ಆರೋಪ ಮಾಡಿದ್ದರು. ಆದರೆ ತನಿಖೆ ನಡೆಸಿದ ಪ್ರಾದೇಶಿಕ ಆಯುಕ್ತರು ಭೂ ಕಬಳಿಕೆ ಆರೋಪ ಸುಳ್ಳು ಎಂದು ವರದಿ ನೀಡಿದ್ದಾರೆ. ಹೀಗಾಗಿ ರೋಹಿಣಿ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದೆ. ಅದರಂತೆ ಸಿವಿಲ್ ಮತ್ತು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾವೆ ಹೂಡಿದ್ದೇನೆ ಎಂದು ತಿಳಿಸಿದರು.
ವಕೀಲ ಅರುಣ್ ಕುಮಾರ್ ಮಾತನಾಡಿ, ರೋಹಿಣಿ ಸಿಂಧೂರಿ ಅವರು ಆಡಿಯೋದಲ್ಲಿ ಸಾ.ರಾ.ಮಹೇಶ್ ಭೂ ಕಬಳಿಕೆ ಮಾಡಿದ್ದು, ಜೈಲಲ್ಲಿ ಇರುತ್ತಾರೆ ಎಂದು ಆರೋಪ ಮಾಡಿದ್ದಾರೆ. ಈ ಸಂಬಂಧ ಸಾ.ರಾ.ಮಹೇಶ್ ಪರವಾಗಿ 2021ರ ಜುಲೈ 1ರಂದು ಲೀಗಲ್ ನೋಟಿಸ್ ಜಾರಿ ಮಾಡಲಾಗಿತ್ತು ಎಂದು ಹೇಳಿದರು.
ಸಾಮಾಜಿಕ ಜಾಲತಾಣದ ಆಡಿಯೋದಲ್ಲಿ ನಿಮ್ಮ ದ್ವನಿಯೇ, ಉದ್ದೇಶ ಪೂರ್ವಕವಾಗಿ ಮಾತನಾಡಿದ್ದೀರ ಎಂದು ಎರಡು ಪ್ರಶ್ನೆಗಳನ್ನು ನೋಟಿಸ್‌ನಲ್ಲಿ ಕೇಳಲಾಗಿತ್ತು. ಅದಕ್ಕೆ ಅವರು, ಅದು ನನ್ನ ಖಾಸಗಿ ಸಂಭಾಷಣೆ ಎಂದು ಒಪ್ಪಿಕೊಂಡಿದ್ದಾರೆ. ಅದರ ಆಧಾರದ ಮೇಲೆ ಎರಡನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹಾಕಲಾಗಿದೆ ಎಂದು ಹೇಳಿದರು.
ಪ್ರಕರಣದ ಆಧಾರದ ಮೇಲೆ 20-10-2022ರಂದು ರೋಹಿಣಿ ಸಿಂಧೂರಿ ನ್ಯಾಯಾಲಯಕ್ಕೆ ಉತ್ತರ ಕೊಡಬೇಕಾಗುತ್ತೆ. ಈಗಾಗಲೇ ಖಾಸಗಿ ಸಂಭಾಷಣೆ ಅಂತ ಒಪ್ಪಿಕೊಂಡಿರುವುದರಿಂದ ಬೇರೆ ಹೇಳಿಕೆ ನೀಡಲು ಅವಕಾಶ ಇಲ್ಲ. ಆ ಸಂಭಾಷಣೆಯ ಹಿನ್ನೆಲೆ, ಉದ್ದೇಶವನ್ನೂ ಕೇಸ್‌ಗೆ ಸೇರಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶ ಇದೆ ಎಂದರು.