ರೋಪ್​ವೇ ಕಾಮಗಾರಿ ಆರಂಭವಾಗಲಿ

27
Published on

ಮಧುಗಿರಿ: ಮೊದಲ ಹಂತದಲ್ಲಿ ರೋಪ್​ವೇ ಕಾಮಗಾರಿಯನ್ನು ಆರಂಭಿಸುವಂತೆ ಸಹಕಾರ ಸಚಿವ ಕೆ.ಎನ್​.ರಾಜಣ್ಣ ಅಧಿಕಾರಿಗಳಿಗೆ ಸೂಚಿಸಿದರು. ಪಟ್ಟಣದ ನ್ಯಾಯಾಲಯಗಳ ಸಂಕೀರ್ಣಗಳ ಸಮೀಪ ಇರುವ ರೋಪ್​ ವೇ ಕಾಮಗಾರಿಯ ಸ್ಥಳಕ್ಕೆ ಬುಧವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಮಾತನಾಡಿ, 10 ವರ್ಷಗಳ ಹಿಂದೆಯೇ ರೋಪ್​ ವೇ ಕಾಮಗಾರಿಗಾಗಿ 9 ಎಕರೆ ಸ್ಥಳವನ್ನು ನಿಗದಿಪಡಿಸಲಾಗಿತ್ತು. ಈ ಕಾಮಗಾರಿಯು ಮೂರು ಹಂತಗಳಲ್ಲಿ ಮುಕ್ತಾಯಗೊಳಿಸಬೇಕು.

ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ರೋಪ್​ವೇ ಕಾಮಗಾರಿಗಳಿಗಾಗಿ ಪ್ರತ್ಯೇಕವಾಗಿ ಪ್ರಾಧಿಕಾರವನ್ನು ಸ್ಥಾಪಿಸಲಾಗಿದ್ದು, ಆ ಇಲಾಖೆಯ ಮಾನದಂಡಗಳಂತೆ ರೋಪ್​ ವೇ ಕಾಮಗಾರಿಗಳನ್ನು ರಾಜ್ಯದಲ್ಲಿ ನಿರ್ವಹಣೆ ಮಾಡಲಾಗುವುದು. ಮೊದಲ ಹಂತದಲ್ಲಿ ರೋಪ್​ವೇ ಕಾಮಗಾರಿ ಆರಂಭಿಸಿ ಈ ಕಾಮಗಾರಿಗಾಗಿ 50 ಕೋಟಿ ರೂ. ನಿಗದಿಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಸರ್ಕಾರದಿಂದ ಹಣ ಬಿಡುಗಡೆ ಮಾಡಿಸಲಾಗುವುದು. ಪ್ರಥಮ ಆದ್ಯತೆಯನ್ನು ರೋಪ್​ ವೇ ಕಾಮಗಾರಿಗೆ ನೀಡುವುದರ ಮೂಲಕ ಪೂರ್ಣಗೊಳಿಸಬೇಕೆಂದರು.

ಈ ಮೂರು ಹಂತಗಳಲ್ಲಿ ರೋಪ್​ ವೇ ನಿಮಾರ್ಣ ಮತ್ತು ಮೂಲ ಸೌಕರ್ಯಗಳು ಒದಗಿಸಲಾಗುವುದು. ಎರಡನೇ ಹಂತದಲ್ಲಿ ಪುಡ್​ ಪಾರ್ಕ್​, ಅಮ್ಯೂಸ್​ ಮೆಂಟ್​ ಪಾರ್ಕ್​, ಸ್ವಿಮ್ಮಿಂಗ್​ ಪುಲ್​ ನಿಮಾರ್ಣ ಮಾಡಲಾಗುವುದು. ಕಾಮಗಾರಿ ಆರಂಭಕ್ಕೆ ಅಗತ್ಯವಿರುವ ವಿದ್ಯುತ್​, ರಸ್ತೆ ಮತ್ತಿತರ ಸೌಕರ್ಯಗಳನ್ನು ಒದಗಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು. ಮುಖ್ಯಾಧಿಕಾರಿ ಸುರೇಶ್​, ವಯಲ ಅರಣ್ಯಾಧಿಕಾರಿ ಎಚ್​.ಎಂ.ಸುರೇಶ್​, ಉಪವಲಯ ಅರಣ್ಯಾಧಿಕಾರಿ ಮುತ್ತುರಾಜು, ಮುಖಂಡರಾದ ಎಂ.ಕೆ.ನಂಜುಂಡಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net