ರೋಚಕ ಹಣಾಹಣಿ ಇಂದಿನಿಂದ

3 gkp 03
Published on

ಪೊನ್ನಂಪೇಟೆ: ಕೊಡವ ಹಾಕಿ ಅಕಾಡೆಮಿ ವತಿಯಿಂದ ಕರ್ನಾಟಕ ಪಬ್ಲಿಕ್ ಶಾಲೆಯ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ಪಾಂಡಂಡ ಎಂ. ಕುಟ್ಟಪ್ಪ ಜ್ಞಾಪಕಾರ್ಥ ಕೊಡವ ಕೌಟುಂಬಿಕ ರಿಂಕ್ ಹಾಕಿ ನಮ್ಮೆಯಲ್ಲಿ 28 ತಂಡಗಳು ಉಳಿದುಕೊಂಡಿದ್ದು, ಶುಕ್ರವಾರದಿಂದ ರೋಚಕ ಹಣಾಹಣಿಯ ನಿರೀಕ್ಷೆ ಮೂಡಿಸಿವೆ.


ಗುರುವಾರ ಮೊದಲ ಸುತ್ತಿನ ಪಂದ್ಯಗಳು ಕೊನೆಗೊಂಡಿದ್ದು, ಒಟ್ಟು 113 ತಂಡಗಳಲ್ಲಿ 85 ತಂಡಗಳು ಸೋತು ನಿರ್ಗಮಿಸಿವೆ. 28 ತಂಡಗಳು ಶುಕ್ರವಾರದಿಂದ ಸೆಣೆಸಾಟ ನಡೆಸಲಿವೆ. ಮೂರು ದಿನಗಳ ಪಂದ್ಯಗಳು ಉಳಿದುಕೊಂಡಿದ್ದು, ಕ್ರೀಡಾಭಿಮಾನಿಗಳಲ್ಲಿ ಉತ್ಸಾಹ ಇಮ್ಮಡಿಗೊಂಡಿವೆ. ಶನಿವಾರ ಪ್ರೀಕ್ವಾರ್ಟರ್, ಭಾನುವಾರ ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯಗಳು ನಡೆಯಲಿವೆ.


ಪ್ರೀ ಕ್ವಾರ್ಟರ್‌ಗೆ: ಕಲಿಯಂಡ ತಂಡವು ಎರಡು ಗೆಲುವಿನೊಂದಿಗೆ ಪ್ರೀಕ್ವಾರ್ಟರ್‌ಗೆ ಪ್ರವೇಶ ಪಡೆದುಕೊಂಡಿತು. ಕಲಿಯಂಡವು ಮೊದಲ ಪಂದ್ಯದಲ್ಲಿ ಮಣೋಟಿರವನ್ನು 6-1 ಗೋಲುಗಳಿಂದ ಸೋಲಿಸಿತು. ಕಲಿಯಂಡ ಕಾರ್ಯಪ್ಪ 2, ಮಾಚಯ್ಯ, ಕಿರಣ್, ಬಿದ್ದಪ್ಪ, ಮುತ್ತಪ್ಪ, ಮಣೋಟಿರ ಅಯ್ಯಪ್ಪ ಒಂದೊಂದು ಗೋಲುಗಳಿಂದ ರಂಜಿಸಿದರು. ಮತ್ತೊಂದು ಪಂದ್ಯದಲ್ಲಿ ಮಾಚಿಮಡವನ್ನು 5-3 ಗೋಲುಗಳಿಂದ ಜಯಿಸಿತು. ಕಲಿಯಂಡ ಕಿರಣ್ 3, ಬಿದ್ದಪ್ಪ, ಕಾರ್ಯಪ್ಪ, ತಲಾ 1, ಮಾಚಿಮಡ ಮಂದಣ್ಣ 2, ಚರಣ್ 1 ಗೋಲು ಹೊಡೆದು ಖುಷಿಪಟ್ಟರು.


ಎರಡಂಕಿ ಗೋಲುಗಳು: ಕೊಡವ ಕೌಟುಂಬಿಕ ಹಾಕಿ ಜನಕ ಪಾಂಡಂಡ ಎಂ. ಕುಟ್ಟಪ್ಪ ಅವರ ಕುಟುಂಬ ತಂಡ ಸೇರಿದಂತೆ 4 ತಂಡಗಳು ಎರಡಂಕಿ ಗೋಲು ಹೊಡೆದು ಸಂಚಲನ ಮೂಡಿಸಿದವು. ಪಾಂಡಂಡ ತಂಡವು ಕುಂಬೇರ ವಿರುದ್ಧ 12-3 ಗೋಲುಗಳ ಜಯ ಸಾಧನೆ ಮಾಡಿತು. ಪಾಂಡಂಡ ಬೋಪಣ್ಣ 4, ಕಾರ್ಲ್ ಕಾರ್ಯಪ್ಪ, ದೇಚಮ್ಮ ತಲಾ 3, ನಾಣಯ್ಯ, ಅಯ್ಯಪ್ಪ, ಕುಂಬೇರ ಪರ್ಷಿದ್, ಚಿಣ್ಣಪ್ಪ, ಅದ್ವಿತ್ ತಲಾ 1 ಗೋಲು ದಾಖಲಿಸಿದರು. ಪೊರುಕೊಂಡಕ್ಕೆ ಚೆಯ್ಯಂಡ ವಿರುದ್ಧ 12-2 ಗೋಲುಗಳ ಜಯ ದೊರೆಯಿತು. ಪೊರುಕೊಂಡ ಅನಿಲ್ 8 ಗೋಲು ಸಿಡಿಸಿದರು. ಲವ 3, ಚೆಂಗಪ್ಪ, ಚೆಯ್ಯಂಡ ಮಂಜು, ಶಂಕರಿ ತಲಾ 1 ಗೋಲು ಹೊಡೆದರು. ಪುಚ್ಚಿಮಂಡವು ಮುದ್ದಂಡ ವಿರುದ್ಧ 12-1 ಗೋಲುಗಳ ಜಯಭೇರಿ ಸಾಧಿಸಿತು. ಪುಚ್ಚಿಮಂಡ ಭವನ್ 6, ಯಶ್ವಿನ್ 4, ವಿವತ್ 2, ಮುದ್ದಂಡ ಸುಬ್ಬಯ್ಯ 1 ಗೋಲು ಹೊಡೆದರು. ಕೋಟೆರವು ಐತಿಚಂಡವನ್ನು 11-3 ಬೃಹತ್ ಅಂತರದಲ್ಲಿ ಮಣಿಸಿತು. ಕೋಟೆರ ಕೌಶಿಕ್ 7 ಗೋಲು ಹೊಡೆದು ಸಂಭ್ರಮಿಸಿದರು. ಭರತ್ 2, ನಿಖಿಲ್, ನಾಣಯ್ಯ, ಐತಿಚಂಡ ಸಜನ್, ಮಂದಣ್ಣ, ಪೊನ್ನಣ್ಣ ತಲಾ ಒಂದೊಂದು ಗೋಲು ಬಾರಿಸಿದರು.


ಗೆಲುವಿನ ನಗು: ಮತ್ತೆ 6 ತಂಡಗಳು ಗೆಲುವಿನೊಂದಿಗೆ ಹೆಜ್ಜೆ ಇಟ್ಟವು. ಮಚ್ಚಾರಂಡಕ್ಕೆ ಪೊನ್ನಿಮಾಡ ವಿರುದ್ಧ 9-3 ಗೋಲುಗಳ ಜಯ ಲಭಿಸಿತು. ಮಚ್ಚಾರಂಡ ತಮ್ಮಯ್ಯ ಹಾಗೂ ಗಗನ್ ತಲಾ 4, ಮೊಣ್ಣಪ್ಪ 1, ಪೊನ್ನಿಮಾಡ ಸಂತೋಷ್ 3 ಗೋಲು ಹೊಡೆದು ತಂಡಕ್ಕೆ ನೆರವಾದರು.
ಅಪ್ಪಂಡೇರಂಡವು ಮೇರಿಯಂಡವನ್ನು 7-6 ಗೋಲುಗಳ ಅಂತರದಲ್ಲಿ ಮಣಿಸಿತು. ಅಪ್ಪಂಡೇರಂಡ ಬೋಪಣ್ಣ ಮತ್ತು ಮೇರಿಯಂಡ ರಾಯ್ ಅಯ್ಯಣ್ಣ ತಲಾ 6 ಗೋಲು ಹೊಡೆದು ಎರಡು ತಂಡದಲ್ಲಿಯೂ ಸಂಚಲನ ಮೂಡಿಸಿದರು. ಅಪ್ಪಂಡೇರಂಡ ಪೂವಯ್ಯ 1 ಗೋಲು ಹೊಡೆದರು.
ಮಾಚಿಮಡಕ್ಕೆ ಕಾಡ್ಯಮಡ ವಿರುದ್ಧ 6-3 ಗೋಲುಗಳ ಜಯ ದೊರೆಯಿತು. ಮಾಚಿಮಾಡ ಕಾರ್ಯಪ್ಪ ಮತ್ತು ಕಾಡ್ಯಮಡ ಚಿಣ್ಣಪ್ಪ ತಲಾ 3 ಗೋಲು ಹೊಡೆದರು. ಮಾಚಿಮಡ ಮಂದಣ್ಣ 2, ಚರಣ್ 1 ಗೋಲುಗಳ ಕಾಣಿಕೆ ನೀಡಿದರು.


ಪೊನ್ನೋಲತಂಡವು ಕುಕ್ಕೇರವನ್ನು 8-4 ಗೋಲುಗಳ ಅಂತರದಲ್ಲಿ ಸೋಲಿಸಿತು. ಪೊನ್ನೋಲತಂಡ ನಾಣಯ್ಯ, ಶರತ್ ತಲಾ 3 ಗೋಲು, ಅಶ್ವಿನ್, ಕುಕ್ಕೇರ ಸುಬ್ಬಯ್ಯ ತಲಾ 2 ಗೋಲು, ಚೆಂಗಪ್ಪ, ಮಂದಣ್ಣ ತಲಾ ಒಂದೊಂದು ಗೋಲು ಹೊಡೆದರು.
ಕಡೇಮಡಕ್ಕೆ ಅರೆಯಡ ವಿರುದ್ಧ 4-3 ಗೋಲುಗಳ ರೋಚಕ ಗೆಲುವು ದೊರೆಯಿತು. ಕಡೇಮಡ ಚರ್ಮಣ 2, ಕುಶಾಲಪ್ಪ, ಪೂವಣ್ಣ, ಅರೆಯಡ ಗಣೇಶ್, ಚಮನ್, ಶ್ರವಣ್ ಒಂದೊಂದು ಗೋಲುಗಳ ಕಾಣಿಕೆ ನೀಡಿದರು.
ಮುಕ್ಕಾಟೀರಕ್ಕೆ (ಪುಲಿಕೋಟ್) ಚೆರಿಯಂಡ ವಿರುದ್ಧ 4-2 ಗೋಲುಗಳ ಜಯ ದೊರೆಯಿತು. ಮುಕ್ಕಾಟೀರ ಮುತ್ತಪ್ಪ 3, ಮಾಚಯ್ಯ, ಚೆರಿಯಂಡ ತನೀಶ್, ದೀಪು ತಲಾ 1 ಗೋಲು ಬಾರಿಸಿದರು.

ಶುಕ್ರವಾರದ ಪಂದ್ಯಗಳು
ಬೆ. 8.30 ; ದೇಯಂಡ-ಮೇಕೇರಿರ
9.30 ; ಮಾರ್ಚಂಡ-ಶಾಂತೆಯಂಡ
10.00 ; ಕೋಟೆರ-ಅಪ್ಪಂಡೇರಂಡ
10.30 ; ಮಚ್ಚಾರಂಡ-ಸೋಮೆಯಂಡ
11.00 ; ಇಟ್ಟೀರ-ಪೊನ್ನೋಲತಂಡ
11.30 ; ಕಡೇಮಡ-ಮುಕ್ಕಾಟಿರ (ಪುಲಿಕೋಟ್)
12.00 ; ಪಾಂಡಂಡ-ಪೊರುಕೊಂಡ
12.30 ; ನೆಲ್ಲಮಕ್ಕಡ-ಪುಚ್ಚಿಮಂಡ
1.00 ; ಮಾರ್ಚಂಡ/ಶಾಂತೆಯಂಡ-ದೇಯಂಡ/ ಮೇಕೇರಿರ
1.30 ; ಕೋಟೆರ/ಅಪ್ಪಂಡೇರಂಡ-ಮಚ್ಚಾರಂಡ/ಸೋಮೆಯಂಡ
2.00 ; ಇಟ್ಟೀರ/ಪೊನ್ನೋಲತಂಡ-ಕಡೇಮಡ/ಮುಕ್ಕಾಟಿರ (ಪುಲಿಕೋಟ್)
2.30 ; ನೆಲ್ಲಮಕ್ಕಡ/ಪುಚ್ಚಿಮಂಡ-ಪಾಂಡಂಡ/ಪೊರುಕೊಂಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net