ರೋಗಿಗಳೊಂದಿಗೆ ಮಾನವೀಯತೆಯಿಂದ ವರ್ತಿಸಿ, ವಿಭಾಗೀಯ ಜಂಟಿ ನಿರ್ದೇಶಕ ಡಾ. ಶ್ರೀನಿವಾಸ್ ಸಲಹೆ

photo tgl 1(3.9.2021) DJD visit chc tgl
Published on

ತ್ಯಾಮಗೊಂಡ್ಲು: ಚಿಕಿತ್ಸೆ ಪಡೆಯಲು ಬರುವ ರೋಗಿಗಳೊಂದಿಗೆ ಮಾನವೀಯತೆಯಿಂದ ವರ್ತಿಸಬೇಕು. ಅನುಕಂಪದೊಂದಿಗೆ ಸಮಸ್ಯೆ ಕೇಳಿ, ಚಿಕಿತ್ಸೆ ಕೊಟ್ಟರೆ ಅವರು ಬೇಗನೆ ಚೇತರಿಸಿಕೊಳ್ಳುತ್ತಾರೆ ಎಂದು ರಾಜ್ಯ ವಿಭಾಗೀಯ ಜಂಟಿ ನಿರ್ದೇಶಕ ಡಾ. ಶ್ರೀನಿವಾಸ್ ಸಲಹೆ ನೀಡಿದರು.

ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸಿಬ್ಬಂದಿ ಜತೆ ಮಾತನಾಡಿದರು.

ಕೆಳಹಂತದ ಸಿಬ್ಬಂದಿಯಿಂದ ಹಿಡಿದು ವೈದ್ಯರ ತನಕ ಯಾರೊಬ್ಬರೂ ರೋಗಿಗಳನ್ನು ಕಡೆಗಣಿಸಬಾರದು. ಸರ್ಕಾರಿ ಆಸ್ಪತ್ರೆಗೆ ಬರುವವರು ಕಡುಬಡವರಾಗಿರುತ್ತಾರೆ. ಅವರಿಗೆ ಪ್ರಾಮುಖ್ಯತೆ ನೀಡಬೇಕು. ಸರ್ಕಾರದಿಂದ ಎಲ್ಲ ರೀತಿಯ ಔಷಧ ಸರಬರಾಜು ಮಾಡಲಾಗುತ್ತದೆ. ಏನೇ ಸಮಸ್ಯೆ ಇದ್ದರೂ ನನ್ನ ಗಮನಕ್ಕೆ ತಂದಲ್ಲಿ, ಅದನ್ನು ಸರಿಪಡಿಸುತ್ತೇನೆ ಎಂದರು.

ಕೆಲವು ಕಡೆ ಕಟ್ಟಡ ಸೋರುತ್ತಿದೆ. ನೀರಿನ ವ್ಯವಸ್ಥೆ ಸರಿಪಡಿಸಬೇಕು. ರೋಗಿಗಳಿಗೆ ಬಿಸಿನೀರಿನ ವ್ಯವಸ್ಥೆ ಆಗಬೇಕು. ಮುಂದಿನ ಬಾರಿ ಬರುವಾಗ ಎಲ್ಲವೂ ಸರಿಯಿರಬೇಕು. ಇಲ್ಲವಾದಲ್ಲಿ ಕಠಿಣ ಕ್ರಮ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸ್ವಚ್ಛತೆ ಕಾಯ್ದುಕೊಳ್ಳಿ: ಕರೊನಾ ಪಿಡುಗಿನ ಸಂದರ್ಭದಲ್ಲಿ ಆಸ್ಪತ್ರೆಯ ಎಲ್ಲ ಸಿಬ್ಬಂದಿ ಪ್ರಾಣದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಮುಂದೆಯೂ ಇದೇ ರೀತಿ ಕಾರ್ಯನಿರ್ವಹಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಆಸ್ಪತ್ರೆಯ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಆಡಳಿತ ವೈದ್ಯಾಧಿಕಾರಿ ಡಾ.ಲಕ್ಷ್ಮೀಕಾಂತ್ ಅವರಿಗೆ ಡಾ. ಶ್ರೀನಿವಾಸ್ ಸೂಚಿಸಿದರು.

ವಾಹನ ನಿಲುಗಡೆ ವ್ಯವಸ್ಥೆ ಸರಿಪಡಿಸಿ: ಆಸ್ಪತ್ರೆಗೆ ಬರುವವರ ದ್ಚಿಚಕ್ರವಾಹನ ಸೇರಿ ಎಲ್ಲ ಬಗೆಯ ವಾಹನಗಳನ್ನು ಸರಿಯಾಗಿ ನಿಲುಗಡೆ ಮಾಡಲು ಸಮರ್ಪಕವಾದ ವ್ಯವಸ್ಥೆ ಮಾಡಿ. ಈಗಿರುವ ಅವ್ಯವಸ್ಥೆಯಿಂದಾಗಿ ಆಂಬುಲೆನ್ಸ್ ಆಸ್ಪತ್ರೆಯ ಒಳಬರಲು ಕಷ್ಟವಾಗುತ್ತಿದೆ. ಪೊಲೀಸ್ ಇಲಾಖೆ ಜತೆ ಚರ್ಚಿಸಿ, ಅಡ್ಡಾದಿಡ್ಡಿಯಾಗಿ ವಾಹನ ನಿಲುಗಡೆ ಮಾಡುವವ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಳ್ಳುವಂತೆ ರಾಜ್ಯ ವಿಭಾಗೀಯ ಜಂಟಿ ನಿರ್ದೇಶಕರು ತಿಳಿಸಿದರು.

ಮಕ್ಕಳ ತಜ್ಞ ಡಾ. ವೀರೇಂದ್ರಕುಮಾರ್, ದಂತ ವೈದ್ಯ ಡಾ. ಸತ್ಯಂ ಗೋರ್, ಾರ್ಮಾಸಿಸ್ಟ್ ಕವಿತಾ, ಐಸಿಟಿಸಿ ಕೌನ್ಸೆಲರ್ ಪಿ. ಶ್ರೀಲತಾ ಮತ್ತಿತರರಿದ್ದರು.

ಕರೊನಾ ಚಿಕಿತ್ಸೆಗೆ ಆಸ್ಪತ್ರೆಯ ಮತ್ತೊಂದು ಭಾಗದಲ್ಲಿ ವ್ಯವಸ್ಥೆ ಮಾಡಲು ಸೂಚಿಸಿದ್ದೇನೆ. 30 ಹಾಸಿಗೆ ಸೌಲಭ್ಯವುಳ್ಳ ಈ ಸುಸಜ್ಜಿತ ಆಸ್ಪತ್ರೆಯಲ್ಲಿ ಒಳರೋಗಿಗಳನ್ನು ದಾಖಲಿಸಿಕೊಂಡು ಆಯುಷ್ಮಾನ್ ಭಾರತ ಮತ್ತು ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಚಿಕಿತ್ಸೆ ನೀಡಲು ವ್ಯವಸ್ಥೆಗಳಿವೆ. ಗರ್ಭಿಣಿಯರು, ಮಧುಮೇಹ, ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡಬೇಕು. ಆಸ್ಪತ್ರೆಗೆ ವಾರಕ್ಕೊಮ್ಮೆ ಭೇಟಿ ನೀಡಿ ಪರಿಶೀಲಿಸುವಂತೆ ತಾಲೂಕು ವೈದ್ಯಾಧಿಕಾರಿಗೆ ಹೇಳಿದ್ದೇನೆ. ಡಾ. ಶ್ರೀನಿವಾಸ್, ರಾಜ್ಯ ವಿಭಾಗೀಯ ಜಂಟಿ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net