

ಚಾಮರಾಜನಗರ: ದೇಶದಲ್ಲಿ ಶೋಷಿತ ಸಮುದಾಯಗಳು ಮತ್ತು ಬಹುಜನರ ಸ್ವತಂತ್ರ ರಾಜಕಾರಣಕ್ಕೆ ದಾದಾ ಸಾಹೇಬ್ ಕಾನ್ಶಿರಾಂ ಪ್ರೇರಣರಾಗಿದ್ದಾರೆ ಎಂದು ಕಾನ್ಶಿರಾಂ ವಿದ್ಯಾರ್ಥಿ ಸಂಘದ ವಾಸು ಹೊಂಡರಬಾಳು ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ದಾದಾ ಸಾಹೇಬ್ ಕಾನ್ಶಿರಾಂ ಅವರ ಜನ್ಮದಿನಾಚರಣೆ ಅಂಗವಾಗಿ ಒಳ ರೋಗಿಗಳಿಗೆ ಶನಿವಾರ ಹಣ್ಣು-ಹಂಪಲು ವಿತರಿಸಿ ಮಾತನಾಡಿದರು.
ದೇಶಕ್ಕೆ ಸಮಾನತೆಯ ಸಂವಿಧಾನವನ್ನು ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ಶೋಷಿತ ಸಮುದಾಯದವರು ರಾಜ್ಯಾಧಿಕಾರವನ್ನು ಪಡೆಯಬೇಕು ಎಂಬ ಆಶಯವನ್ನು ಹೊಂದಿದ್ದರು. ದಾದಾಸಾಹೇಬ್ ಕಾನ್ಶಿರಾಂ ಅವರು ಅಂಬೇಡ್ಕರ್ ಅವರ ಆಶಯವನ್ನು ಉತ್ತರಪ್ರದೇಶದಲ್ಲಿ ನಿಜವಾಗಿಸಿದರು. ಬಿಎಸ್ಪಿಯನ್ನು ಸತತ ನಾಲ್ಕೂ ಬಾರಿ ಅಧಿಕಾರಕ್ಕೆ ತರುವ ಮೂಲಕ ಶೋಷಿತರು ಮತ್ತು ಬಹುಜನರಿಗೆ ಸ್ವತಂತ್ರ ರಾಜಕಾರಣವನ್ನು ಕಲಿಸಿಕೊಟ್ಟರು ಎಂದರು.
ಅಂಬೇಡ್ಕರ್ ಅವರ ಸಂವಿಧಾನವನ್ನೇ ಪಕ್ಷದ ಪ್ರಣಾಳಿಕೆಯನ್ನಾಗಿ ರೂಪಿಸಿಕೊಂಡು ದೇಶದ ಬಹುದೊಡ್ಡ ರಾಜ್ಯದಲ್ಲಿ ಅಧಿಕಾರವನ್ನು ಹಿಡಿಯುವುದು ಮುಳ್ಳಿನ ಹಾದಿಯಾಗಿತ್ತು. ಕಾನ್ಶಿರಾಂಜೀ ಅವರ ತ್ಯಾಗ ಮತ್ತು ಬಲಿದಾನದಿಂದ ಬಹುಜನ ಸಮಾಜ ಆಳುವ ವರ್ಗವಾಗಿದೆ. ನಾವೆಲ್ಲರೂ ಅವರ ರಾಜಕಾರಣದ ಮಹತ್ವವನ್ನು ಅರಿತುಕೊಂಡು ಸಾಗಬೇಕಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಮತ್ತು ಬಹುಜನರನ್ನು ಸಂಘಟಿಸಬೇಕಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ರಮೇಶ್, ಅಮಚವಾಡಿ ಕಾಂತರಾಜು, ಬಾಬು ರಾಮಸಮುದ್ರ, ವಿದ್ಯಾರ್ಥಿನಿ ಭಾಗ್ಯ, ನಿಶಾ, ಕೀರ್ತನಾ, ಸಂಜು ಹಾಗೂ ಇತರರು ಹಾಜರಿದ್ದರು.