

ಪಾಂಡವಪುರ: ಪಟ್ಟಣದ ಉಪವಿಭಾಗೀಯ ಆಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ವೈದ್ಯರ ಭ್ರಷ್ಟಾಚಾರ, ಅಶುಚಿತ್ವ, ನಿರ್ವಹಣೆ ಹಾಗೂ ಸೌಲಭ್ಯಗಳ ಕೊರತೆ ಬಗ್ಗೆ ಸಾರ್ವಜನಿಕರು ಮತ್ತು ರೋಗಿಗಳು ದೂರುಗಳ ಸುರಿಮಳೆಗೈದರು.
ಆಸ್ಪತ್ರೆಯಲ್ಲಿನ ಅವ್ಯವಸ್ಥೆಗಳ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರಗಳು ಕೇಳಿಬಂದ ಹಿನ್ನೆಲೆಯಲ್ಲಿ ಶುಕ್ರವಾರ ಭೇಟಿ ನೀಡಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಆಸ್ಪತ್ರೆಯ ಶೌಚಗೃಹ, ಸುತ್ತಲಿನ ವಾತಾವರಣ, ವಾರ್ಡ್‌ಗಳಲ್ಲಿನ ಶುಚಿತ್ವ, ಮೂಲಸೌಕರ್ಯ, ಸಿಬ್ಬಂದಿ ಕೊರತೆ, ಆಂಬುಲೆನ್ಸ್‌ಗಳ ಸುಸ್ಥಿತಿ, ನಾನ್‌ಕ್ಲಿನಿಕ್ ಮತ್ತು ಡಿ ಗ್ರೂಪ್ ನೌಕರರು ಎದುರಿಸುತ್ತಿರುವ ಸಮಸ್ಯೆ ಹಾಗೂ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಸಿಗುತ್ತಿದೆಯೋ, ಇಲ್ಲವೋ ಎಂಬುದನ್ನು ಕೂಲಂಕಷವಾಗಿ ಪರಿಶೀಲನೆ ನಡೆಸುವುದರ ಜತೆಗೆ ಒಳರೋಗಿಗಳನ್ನು ಪ್ರಶ್ನಿಸಿ ಎಲ್ಲದರ ಬಗ್ಗೆ ಮಾಹಿತಿ ಪಡೆದುಕೊಂಡರು.
ವೈದ್ಯರ ವಿರುದ್ಧ ಭ್ರಷ್ಟಾಚಾರದ ದೂರು: ಉಪವಿಭಾಗೀಯ ಆಸ್ಪತ್ರೆ ವೈದ್ಯರ ನಡವಳಿಕೆ ಮತ್ತು ಭ್ರಷ್ಟಾಚಾರದ ವಿರುದ್ಧ ಸಾರ್ವಜನಿಕರು ಮತ್ತು ರೋಗಿಗಳು ಶಾಸಕರಿಗೆ ದೂರುಗಳ ಸುರಿಮಳೆಗೈದು ಇಲ್ಲಿನ ವ್ಯವಸ್ಥೆಯನ್ನು ಸರಿಪಡಿಸುವಂತೆ ಮನವಿ ಮಾಡಿಕೊಂಡರು. ಹೆರಿಗೆ ಮತ್ತು ಸ್ತ್ರೀರೋಗ ತಜ್ಞರಾಗಿರುವ ಡಾ.ಶಿಲ್ಪಾ ಅವರು ಒಂದು ಸಿಸೇರಿಯನ್ ಹೆರಿಗೆಗೆ 10 ಸಾವಿರ ರೂ. ನೀಡುವಂತೆ ಒತ್ತಾಯಿಸುತ್ತಾರೆ. ಜತೆಗೆ ಆಸ್ಪತ್ರೆ ಪಕ್ಕದ ಕಟ್ಟಡವೊಂದರಲ್ಲಿ ಖಾಸಗಿಯಾಗಿ ಕ್ಲಿನಿಕ್ ತೆರೆದಿದ್ದು, ಇಲ್ಲಿಗೆ ಬರುವ ಗರ್ಭಿಣಿಯರನ್ನು ಕ್ಲಿನಿಕ್‌ಗೆ ಬರುವಂತೆ ಒತ್ತಡ ಹಾಕುತ್ತಾರೆ. ಸಾರ್ವಜನಿಕ ಆಸ್ಪತೆಗೆ ಬರುವ ರೋಗಿಗಳು ಬಡವರಾಗಿರುತ್ತಾರೆ. ಖಾಸಗಿಯಾಗಿ ಚಿಕಿತ್ಸೆ ಪಡೆಯಲು ಸಾಧ್ಯವಿರುವುದಿಲ್ಲ. ಆದರೆ, ಸ್ತ್ರೀ ರೋಗ ತಜ್ಞರು ಇಲ್ಲಿಗೆ ಬರುವ ರೋಗಿಗಳನ್ನು ನೋಡುವುದಿರಲಿ, ಕನಿಷ್ಠ ಮಾತನಾಡಿಸುವುದು ಇಲ್ಲ. ಅವರ ಖಾಸಗಿ ಕ್ಲಿನಿಕ್‌ಗೆ ಹೋದರೆ ಕಾಳಜಿ ವಹಿಸಿ ನೋಡಿಕೊಳ್ಳುತ್ತಾರೆ ಎಂಬ ಆರೋಪಗಳನ್ನು ಮಾಡಿದರು.
ಆಸ್ಪತೆಯ ಶೌಚಗೃಹ, ಒಳ ಮತ್ತು ಹೊರ ಆವರಣಗಳು ನಿರ್ವಹಣೆ ಇಲ್ಲದೆ ಗಬ್ಬು ನಾರುತ್ತಿರುತ್ತದೆ. ಶೌಚಗೃಹಗಳಂತೂ ಕಾಲಿಡದಷ್ಟು ಹದಗೆಟ್ಟಿರುತ್ತದೆ. ಆದರೂ ಇದರ ಸ್ವಚ್ಛತೆ ಬಗ್ಗೆ ವೈದ್ಯಾಧಿಕಾರಿಗಳು ಗಮನ ಹರಿಸುವುದಿಲ್ಲ. ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ವೈದ್ಯರ ಕೊರತೆ ಇದೆ. ಶಾಸಕರು ಬರುತ್ತಾರೆ ಎಂಬ ಕಾರಣಕ್ಕೆ ಈ ದಿನ ಎಲ್ಲವನ್ನೂ ಸ್ವಚ್ಛ ಮಾಡಿ ನಿಮಗೆ ತೋರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದೇ ಪರಿಸ್ಥಿತಿ ಮುಂದುವರಿಯುತ್ತದೆ. ಈ ಆಸ್ಪತ್ರೆ ಕೇವಲ ಕ್ಲಿನಿಕ್‌ನಂತೆ ಕೆಮ್ಮು, ಶೀತ, ಜ್ವರ ಮತ್ತು ಸಣ್ಣಪುಟ್ಟ ಗಾಯಗಳಿಗೆ ಚಿಕಿತ್ಸೆ ನೀಡುವ ಕ್ಲಿನಿಕ್ ರೀತಿ ಕೆಲಸ ಮಾಡುತ್ತಿದೆ. ಸ್ವಲ್ಪ ಸೀರಿಯಸ್ ಎಂದರೂ ಮೈಸೂರಿನ ಕೆ.ಆರ್.ಆಸ್ಪತ್ರೆ ಅಥವಾ ಮಂಡ್ಯದ ಮಿಮ್ಸ್‌ಗೆ ಶಿಫಾರಸು ಮಾಡುತ್ತಾರೆ. ಕನಿಷ್ಠ ಪರೀಕ್ಷೆ ಕೂಡ ಮಾಡುವುದಿಲ್ಲ. ಇದಕ್ಕೆ ಶಾಶ್ವತ ಪರಿಹಾರ ನೀಡುವಂತೆ ಸಾರ್ವಜನಿಕರು ಆಗ್ರಹಿಸಿದರು.
ಗುತ್ತಿಗೆದಾರನಿಂದ ಹಣ ವಸೂಲಿ: ನಾನ್ ಕ್ಲಿನಿಕ್ ನೌಕರರ ಗುತ್ತಿಗೆ ಪಡೆದಿರುವ ಗುತ್ತಿಗೆದಾರ ಬರುವ ಸಂಬಳದಲ್ಲಿ ಮಾಸಿಕವಾಗಿ 5 ಸಾವಿರ ರೂ. ಪಡೆದುಕೊಳ್ಳುತ್ತಿದ್ದಾನೆ. ಇದನ್ನು ಪ್ರಶ್ನಿಸಿದರೆ ನಿಮ್ಮನ್ನು ಕೆಲಸದಿಂದ ತೆಗೆದು ಹಾಕುತ್ತೇನೆ ಎಂದು ದಬಾಯಿಸಿ ಬಾಯಿ ಮುಚ್ಚಿಸುತ್ತಾನೆ. ಕೆಲವೊಮ್ಮೆ ಎರಡು ಮೂರು ತಿಂಗಳಾದರೂ ಸಂಬಳ ಕೊಡುವುದಿಲ್ಲ. ಇದರಿಂದ ನಮ್ಮ ಸಂಸಾರ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ನಾನ್ ಕ್ಲಿನಿಕ್ ನೌಕರರು ಶಾಸಕರಿಗೆ ದೂರು ನೀಡಿದರು.
ವಾರ್ನಿಂಗ್ ಕೊಟ್ಟ ಶಾಸಕ: ಸಾರ್ವಜನಿಕರು, ರೋಗಿಗಳು ಮತ್ತು ನಾನ್ ಕ್ಲಿನಿಕಲ್ ನೌಕರರಿಂದ ಸಮಸ್ಯೆ ಆಲಿಸಿದ ಬಳಿಕ ವೈದ್ಯರ ಸಭೆ ನಡೆಸಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು, ಸಾರ್ವಜನಿಕವಾಗಿ ಕೇಳಿ ಬರುತ್ತಿರುವ ಆರೋಪಗಳನ್ನು ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳಬೇಕು. ಇಲ್ಲವಾದರೆ ಯಾವ ಮುಲಾಜಿಗೂ ಒಳಗಾಗದೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರಲ್ಲದೆ, ಗುತ್ತಿಗೆದಾರನಿಗೆ ಮೊಬೈಲ್ ಕರೆ ಮಾಡಿ ನಾನ್ ಕ್ಲಿನಿಕಲ್ ನೌಕರರಿಂದ ಪಡೆದುಕೊಂಡಿರುವ 5 ಸಾವಿರ ರೂ. ಹಣವನ್ನು ತಕ್ಷಣ ಹಿಂದಿರುಗಿಸಬೇಕು. ಮಾಸಿಕ 5ನೇ ತಾರೀಖಿನೊಳಗೆ ಸರ್ಕಾರ ನಿಗದಿ ಮಾಡಿರುವ ಕಮಿಷನ್ ಹಣವನ್ನು ಹೊರತುಪಡಿಸಿ ಉಳಿದೆಲ್ಲ ಸಂಬಳವನ್ನು ನಿಗದಿತ ದಿನಾಂಕದೊಳಗೆ ನೌಕರರ ಅಕೌಂಟ್‌ಗೆ ಜಮಾ ಮಾಡಬೇಕು ಎಂದು ಎಚ್ಚರಿಕೆ ನೀಡಿ ತಾಕೀತು ಮಾಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಸಿ.ಎ. ಕುಮಾರ್, ಆಸ್ಪತ್ರೆ ವೈದ್ಯಾಧಿಕಾರಿ ಡಾ.ಕುಮಾರ್, ಪುರಸಭೆ ಸದಸ್ಯ ಪಾರ್ಥಸಾರಥಿ, ಕಾಂಗ್ರೆಸ್ ಮುಖಂಡ ಸಿ.ಆರ್. ರಮೇಶ್, ಚಿಟ್ಟನಹಳ್ಳಿ ಮಹೇಶ್ ಇತರರು ಇದ್ದರು.