ರೋಗಿಗಳನ್ನು ದೇವರೆಂದು ಭಾವಿಸಿ

28_01
Published on

ವೈದ್ಯರಿಗೆ ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಸಲಹೆ, ಆಸ್ಪತ್ರೆ ಉದ್ಘಾಟನೆ

ಮಧುಗಿರಿ: ಶಿಕ್ಷಕ ಮತ್ತು ವೈದ್ಯಕಿಯ ಹುದ್ದೆ ಶ್ರೇಷ್ಠ ವೃತ್ತಿಯಾಗಿದೆ. ವೈದ್ಯರು ರೋಗಿಗಳನ್ನು ದೇವರ ಸಮಾನ ಎಂದು ಭಾವಿಸಿ ಸೇವೆ ಮಾಡಬೇಕು ಎಂದು ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ರಸ್ತೆಯಲ್ಲಿ ಸೋಮವಾರ ನೂತನ ಡಯಾಲಿಸಿಸ್​ ಕೇಂದ್ರ ಮತ್ತು ಶಾರದಾ ಕಣ್ಣಿನ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿ, ಇಂದು ಎಲ್ಲವೂ ಕಲುಷಿತವಾಗಿದ್ದು, ಹಿಂದಿನ ಕಾಲದ ವಾತಾವರಣ, ಆಚಾರ ವಿಚಾರ ಕಣ್ಮರೆಯಾಗುತ್ತಿವೆ. ಆರೋಗ್ಯವೇ ಬಹುದೊಡ್ಡ ಸಂಪತ್ತು. ಏನಿದ್ದರೆ ಏನು ಬಂತು. ಆರೋಗ್ಯವಿಲ್ಲದಿದ್ದರೆ?. ಆರೋಗ್ಯವಂತ ವ್ಯಕ್ತಿಯ ದೇಹ ಅರಮನೆಯಿದ್ದಂತೆ. ಇಂದು ನಾವು ಎಷ್ಟು ದೀರ್ಘವಾಗಿ ಬದುಕುತ್ತೇವೆ ಎಂಬುದು ಮುಖ್ಯವಲ್ಲ. ಎಷ್ಟು ಆರೋಗ್ಯವಾಗಿ ಬದುಕಿರುತ್ತೇವೆ ಎಂಬುದು ಮುಖ್ಯ ಎಂದರು.

ಹೃದಯವಂತಿಕೆ ಇರುವ ವ್ಯಕ್ತಿಗಳು ಸಿಗುವುದು ಅಪರೂಪ. ತಂದೆ&ತಾಯಿಗಿಂತ ದೊಡ್ಡ ದೇವರು ಯಾರೂ ಇಲ್ಲ. ಅವರು ಜೀವ ಮತ್ತು ಜೀವನ ಕೊಡುವವರು. ಅವರ ಋಣ ತೀರಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಮಧುಗಿರಿ ಜಿಲ್ಲೆ ಆಗುವಂತಿದ್ದು, ಈ ಭಾಗದಲ್ಲಿ ಇಂತಹ ಹೈಟೆಕ್​ ಆಸ್ಪತ್ರೆ ನಿಮಾರ್ಣ ಮಾಡಿರುವುದು ಈ ಭಾಗದ ಜನತೆಗೆ ಅನುಕೂಲವಾಗಲಿದೆ. ತಮ್ಮ ಹಿರಿಯರ ನೆನಪಿನಲ್ಲಿ ನಮ್ಮ ಊರು ನಮ್ಮ ಜನ ಎಂಬ ಭಾವನೆಯಿಂದ ದಾನಿಗಳಾದ ಎಚ್​.ಬಿ. ಶಿವಕುಮಾರ್​, ಎಚ್​.ಬಿ.ರುದ್ರೇಶ್​, ಎನ್​.ಎಂ.ಶಿವಕುಮಾರ್​, ಎಚ್​. ವಿ.ವೀರೇಶ್​ ಮತ್ತು ತಂಡದವರು ಡಯಾಲಿಸೀಸ್​ ಕೇಂದ್ರ ಮತ್ತು ಕಣ್ಣಿನ ಆಸ್ಪತ್ರೆ ಸೇವೆ ನೀಡುತ್ತಿದ್ದಾರೆ. ಹತ್ತಿದ ಏಣಿಯನ್ನು ಮರೆಯುಂತಹ ಈ ದಿನಗಳಲ್ಲಿ ಇಂತಹ ಸೇವೆಗಳು ಶ್ಲಾಘನೀಯ. ಹೈಟೆಕ್​ ಆಸ್ಪತ್ರೆಯ ಸೌಲಭ್ಯಗಳನ್ನು ಬಡವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಆಸ್ಪತ್ರೆ ಪ್ರಾರಂಭದ ಜತೆಗೆ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಯೋಜನೆ ಸಿದ್ಧಗಂಗಾ ಶ್ರೀ ಸಿದ್ದಲಿಂಗ ಸ್ವಾಮೀಜಿ ಆಶೀರ್ವಾದ ಹಾಗೂ ಮಾರ್ಗದರ್ಶನದೊಂದಿಗೆ ಸಾರ್ವಜನಿಕರ ಅನುಕೂಲಕ್ಕಾಗಿ ಆರಂಭಿಸಲಾಗುತ್ತಿದ್ದು, ಸಿದ್ಧಗಂಗಾ ಆಸ್ಪತ್ರೆಯ ವೈದ್ಯರು ಡಯಾಲಿಸಿಸ್​ ಕೇಂದ್ರದ ಜವಾಬ್ದಾರಿ ವಹಿಸಿದ್ದು, ರೋಗಿಗಳಿಗೆ ಉಚಿತ ಸೇವೆ ನೀಡಲಾಗುತ್ತದೆ. ಪಾವಗಡ ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಜಪಾನಂದಜೀ ಮಹಾರಾಜ್​ ಅವರು ಮಧುಗಿರಿ, ಪಾವಗಡ ಭಾಗದಲ್ಲಿ ಆರೋಗ್ಯ ಸೇವೆ ಮಾಡುತ್ತಿದ್ದಾರೆ. ನೇತ್ರಗಳ ಬಗ್ಗೆ ಕಾಳಜಿ ಇರುವುದ್ದರಿಂದ 50 ಸಾವಿರ ಕಣ್ಣಿನ ಆಪರೇಷನ್​ ಸೇವೆ ಮಾಡಿದ್ದು, ಇದು ಗಿನ್ನೆಸ್​ ದಾಖಲೆಗೆ ಸೇರುವಂತದ್ದು, ಹೊರಭಾಗದಲ್ಲಿ ಪ್ರಕೃತಿ ವಿಕೋಪಗಳಾದಾಗ ಅಲ್ಲಿಯೂ ಇನ್ಫೋಸಿಸ್​ ಸಹಯೋಗದಲ್ಲಿ ಸೇವೆ ಮಾಡುತ್ತಿದ್ದಾರೆ ಎಂದರು.

ಪಾವಗಡ ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಜಪಾನಂದಜೀ ಮಹಾರಾಜ್​ ಮಾತನಾಡಿ, ನಿಜವಾದ ಬಡವರ ಬಳಿ ಬಿಪಿಎಲ್​ ಕಾರ್ಡ್​ ಇಲ್ಲ. ಆದರೆ ಕೆಲ ಬಿಎಂಡಬ್ಲ್ಯು ಕಾರು ಹೊಂದಿರುವವರು ಬಿಪಿಎಲ್​ ಕಾರ್ಡ್​ ಇದೆ. ಸರ್ಕಾರವೇ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ಸರ್ಕಾರದ ಸಹಕಾರಕ್ಕಾಗಿ ಡಯಾಲಿಸೀಸ್​ ಮತ್ತು ಕಣ್ಣಿನ ಆಸ್ಪತ್ರೆ ಪ್ರಾರಂಭ ಮಾಡಲಾಗಿದೆ. ಸಿದ್ಧಗಂಗಾ ಮಠದ ಆಸ್ಪತ್ರೆಯ ಶಕ್ತಿ ನಮಗೆ ಸಹಕಾರ ನೀಡುತ್ತಿದೆ. ನಾವು ಇಂದು ಮಂಗಳ ಗ್ರಹಕ್ಕೆ ಹೋಗುತ್ತಿದ್ದೇವೆ. ಆದರೆ ಮನದ ಅಂಗಳಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಹೈಟೆಕ್​ ತಂತ್ರಜ್ಞಾನ ಬಳಸಿ ಆಸ್ಪತ್ರೆ ನಿರ್ಮಿಸಲಾಗಿದ್ದು, ಎಲ್ಲ ಕೊಠಡಿಗಳಿಗೂ ಎಸಿ, ಟಿವಿ ಅಳವಡಿಸಲಾಗಿದೆ. ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ. ನವ ಭಾರತ ನಿಮಾರ್ಣವಾಗಬೇಕಾದರೆ ಗ್ರಾಮಾಂತರ ಪ್ರದೇಶದಿಂದ ನಿಮಾರ್ಣವಾಗಬೇಕು ಎಂದರು. ಡಾ.ಜಿ.ಕೆ.ಜಯರಾಮ್​, ಡಾ.ಅಭಿಷೇಕ್​, ಡಾ.ನಟರಾಜು, ಲಯನ್ಸ್​ ಕ್ಲಬ್​ ಅಧ್ಯಕ್ಷ ಮಲ್ಲೇಶಯ್ಯ, ಅನುರಾಧ ಉಮಾ ಶಂಕರ್​, ಪಾವಗಡ ಶ್ರೀರಾಮಕೃಷ್ಣ ಸೇವಾಶ್ರಮದ ಯೋಜನೆಗಳ ಸಂಯೋಜಕ ಎಚ್​.ಆರ್​.ಶಶಿಕುಮಾರ್​ ಇದ್ದರು.

ನಮಾಜ್​ ಗೌರವ: ಶ್ರೀ ಸಿದ್ದಲಿಂಗ ಶ್ರೀಗಳು ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಪಕ್ಕದ ಮಸೀದಿಯಿಂದ ನಮಾಜ್​ ಪ್ರಾರ್ಥನೆ ಕೇಳಿ ಬಂತು. ತಕ್ಷಣ ಭಾಷಣ ನಿಲ್ಲಿಸಿದ ಶ್ರೀಗಳು, ಪ್ರಾರ್ಥನೆ ಮುಗಿಯುವವರೆಗೂ ಕಾದು ನಂತರ ಮತ್ತೆ ಭಾಷಣ ಆರಂಭಿಸಿದರು. ನಾವು ನಿನ್ನೆಯಷ್ಟೇ ಗಣರಾಜ್ಯೋತ್ಸವ ಆಚರಿಸಿದ್ದು, ಈ ದೇಶದ ಪ್ರಜೆಗಳಾಗಿ ನಮ್ಮ ಧರ್ಮದ ಜತೆಗೆ ಎಲ್ಲ ಧರ್ಮವನ್ನೂ ನಾವು ಗೌರವಿಸಬೇಕು. ನಾವು ಅವರ ಧರ್ಮವನ್ನು ಗೌರವಿಸಬೇಕು. ಅವರೂ ನಮ್ಮ ಧರ್ಮವನ್ನು ಗೌರವಿಸಬೇಕು ಎಂದು ಸ್ವಾಮೀಜಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net