

ಚಾಮರಾಜನಗರ: ಆಸ್ಪತ್ರೆಗಳಿಗೆ ಬಂದಂತಹ ರೋಗಿಗಳನ್ನು ಕಾಳಜಿಯಿಂದ ನೋಡಿ ಮತ್ತು ಅವರಿಗೆ ಆತ್ಮಸ್ಥೈರ್ಯ ತುಂಬಿ ಹಾರೈಕೆ ಮಾಡುವಲ್ಲಿ ಶುಶ್ರೂಷಕರ ಪಾತ್ರ ಬಹುಮುಖ್ಯವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಚಿದಂಬರ ಹೇಳಿದರು.
ನಗರದ ಜೆಎಸ್‌ಎಸ್ ಕಾಲೇಜಿನ ಆವರಣದಲ್ಲಿ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳು, ಜೆಎಸ್‌ಎಸ್ ಆಸ್ಪತ್ರೆ, ಜೆಎಸ್‌ಎಸ್ ಕಾಲೇಜ್ ಆಫ್ ನರ್ಸಿಂಗ್ ಮತ್ತು ಜೆಎಸ್‌ಎಸ್ ಸ್ಕೂಲ್ ಆಫ್ ನರ್ಸಿಂಗ್ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಶುಶ್ರೂಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರೋಗಿಗಳು ತಮ್ಮ ಕಾಯಿಲೆ ವಾಸಿಯಾಗುತ್ತೆ ಎಂಬ ನಂಬಿಕೆಯಿಂದ ಆಸ್ಪತ್ರೆಗೆ ಬರುತ್ತಾರೆ. ಆ ಸಂದರ್ಭದಲ್ಲಿ ಶುಶ್ರೂಷಕರು ಅವರನ್ನು ಸಮಾಧಾನದಿಂದ ಮಾತನಾಡಿಸಿ, ಧೈರ್ಯ ತುಂಬಿ ಚಿಕಿತ್ಸೆಯನ್ನು ನೀಡಬೇಕು. ಆರಂಭದಲ್ಲಿ ಅವರು ಗಾಬರಿಯಿಂದ ಇರುತ್ತಾರೆ, ಅವರನ್ನು ಉತ್ತಮವಾಗಿ ಹಾರೈಕೆ ಮಾಡಬೇಕು. ರೋಗಿಗಳನ್ನು ಯಾವ ರೀತಿಯಾಗಿ ಮಾತನಾಡಿಸಬೇಕು ಎಂಬುದನ್ನು ನರ್ಸಿಂಗ್ ಪದವಿಯನ್ನು ಅಧ್ಯಯನ ಮಾಡುತ್ತಿರುವವರು ಮೊದಲು ಕಲಿತುಕೊಳ್ಳಬೇಕು ಎಂದು ಸಲಹೆ ನೀಡಿದರು.
ಫ್ಲಾರೆನ್ಸ್ ನೈಟಿಂಗೇಲ್ ಅವರು ನಮ್ಮೆಲ್ಲರಿಗೂ ಸ್ಫೂರ್ತಿದಾಯಕವಾಗಿದ್ದಾರೆ. ಅವರು ನರ್ಸಿಂಗ್ ವೃತ್ತಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಕೆಲವೊಬ್ಬರ ಜೀವನವನ್ನು ಓದಿದರೆ ಸಾಕು ನಾವು ಮುಂದೆ ಏನಾಗಬೇಕು ಎಂಬುದನ್ನು ತಿಳಿದುಕೊಳ್ಳಬಹುದು. ಫ್ಲಾರೆನ್ಸ್ ಅವರು ತಮ್ಮ ಜೀವನವನ್ನು ಇತರರ ಹಾರೈಕೆಗಾಗಿ ಮೀಸಲಿಟ್ಟಿದ್ದರು. ಅವರ ಆದರ್ಶಗಳನ್ನು ಅಳವಡಿಸಿಕೊಂಡು ಸಾಗಬೇಕಿದೆ ಎಂದರು.
ಈ ವೇಳೆ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಕೆ.ಆರ್.ಮಹೇಶ್, ಸಿಮ್ಸ್ ಸಮುದಾಯ ವೈದ್ಯಕಿಯ ವಿಭಾಗದ ಪ್ರಾಧ್ಯಾಪಕಿ ಡಾ. ಎಂ.ಎಸ್.ದಮಯಂತಿ, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ವಿನಯ್ ಕುಮಾರ್, ವಿಕಾಸ ನಂದಿ ಹಾಗೂ ಇತರರು ಉಪಸ್ಥಿತರಿದ್ದರು.