

ಹೊಳೆನರಸೀಪುರ: ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗುವಂತೆ ಸರ್ಕಾರಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಾಹನದ ಸಿಬ್ಬಂದಿ ಒತ್ತಾಯಿಸುತ್ತಾರೆ ಎಂಬ ದೂರುಗಳಿವೆ ಎಂದು ಶಾಸಕ ಎಚ್.ಡಿ.ರೇವಣ್ಣ ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಆಸ್ಪತ್ರೆಗಳಿಂದ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರೋಗಿಗಳನ್ನು ಆಂಬುಲೆನ್ಸ್ ಮೂಲಕ ಕಳುಹಿಸಿದರೆ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಪಡೆಯಿರಿ ಎಂದು ಆಂಬುಲೆನ್ಸ್ ಸಿಬ್ಬಂದಿ ತಿಳಿಸುವ ಮೂಲಕ ಬಡ ರೋಗಿಗಳನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಡಿಎಚ್‌ಒಗೆ ತಿಳಿಸಿರುವುದಾಗಿ ಹೇಳಿದರು. ಸರ್ಕಾರಿ ಆಸ್ಪತ್ರೆಯಲ್ಲಿ ಸುಮಾರು 600 ಸಿಬ್ಬಂದಿ ಗುತ್ತಿಗೆ ಆಧಾರದ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂತಹ ನೌಕರರಿಗೆ ಆರು ತಿಂಗಳಿಂದ ಸಂಬಳ ನೀಡದೆ ಸಂಕಷ್ಟದಲ್ಲಿದ್ದಾರೆ. ಗುತ್ತಿಗೆ ಏಜೆನ್ಸಿ ಅವನನ್ನು ಪ್ರಶ್ನಿಸಿದರೆ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ ಎಂಬ ಹಾರಿಕೆ ಉತ್ತರವನ್ನು ನೀಡುತ್ತಾನೆ. ಬಡ ನೌಕರರು ಜೀವನ ನಡೆಸಲು ಸಂಬಳ ಅವಶ್ಯಕತೆ ಇರುವುದರಿಂದ ಕೂಡಲೇ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ತಾಲೂಕಿನ ಹಂಗರಹಳ್ಳಿ ರೈಲ್ವೆ ಮೇಲ್ಸೇತುವೆ ಪಕ್ಕದಲ್ಲಿ ಮತ್ತೊಂದು ಮೇಲ್ಸೇತುವೆಯನ್ನು 36 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ವಾಹನ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಫ್ಲಾಟ್ ಫಾರ್ಮ್ ಅಭಿವೃದ್ಧಿಗಾಗಿ ಭೂಸ್ವಾಧೀನ ಪ್ರಕ್ರಿಯೆ ಚಾಲ್ತಿಯಲ್ಲಿದೆ. ರೈಲ್ವೆ ಅಂಡರ್ ಪಾಸ್ ಸಮೀಪದಿಂದ ಸುಮಾರು 29 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಮುಂದಿನ ವಾರದಲ್ಲಿ ಕಾಮಗಾರಿ ಪ್ರಾರಂಭಿಸಲಾಗುತ್ತದೆ ಎಂದು ಹೇಳಿದರು.
ಪುರಸಭೆ ವ್ಯಾಪ್ತಿಯ ಸೂರನಹಳ್ಳಿಗೆ ತೆರಳಿ ಬಡಾವಣೆಯ ಜನರಿಗೆ ಪಡಿತರ ವಿತರಣೆಗಾಗಿ ಉಪ ಕೇಂದ್ರಕ್ಕೆ ಚಾಲನೆ ನೀಡಿದರು. ತಾಲೂಕಿನಲ್ಲಿ ಪಡಿತರ ವಿತರಣೆಗಾಗಿ 12 ಉಪಕೇಂದ್ರಗಳನ್ನು ತೆರೆಯಲಾಗಿದೆ. ಹರಳಹಳ್ಳಿ, ಉಣ್ಣೆನಹಳ್ಳಿ, ಹೂವಿನಹಳ್ಳಿ, ಕುರುಬರಹಳ್ಳಿ, ಒಂಟಿ ಗುಡ್ಡ ಕಾವಲು, ದೊಡ್ಡ ಕುಂಚೆಕೊಪ್ಪಲು, ಶೇರೆಗಾರನ ಕೊಪ್ಪಲು, ವಡ್ಡರಪಾಳ್ಯ, ಮೂಡಲ ಕೊಪ್ಪಲು, ಕ್ಯಾತನಹಳ್ಳಿ, ಸೂರನಹಳ್ಳಿ, ಚಿಕ್ಕ ಬ್ಯಾಗತವಳ್ಳಿ ಗ್ರಾಮಗಳ ಗ್ರಾಮಸ್ಥರು ಈ ಅನುಕೂಲವನ್ನು ಪಡೆದುಕೊಳ್ಳುತ್ತಾರೆ ಎಂದು ಹೇಳಿದರು.
ತಿಂಗಳಲ್ಲಿ ಒಂದು ದಿನ ಪಡಿತರ ವಿತರಣೆ ಮಾಡಲಾಗುತ್ತದೆ. ಹಲವು ಸೊಸೈಟಿಗಳಲ್ಲಿ ಅಧಿಕ ಜನರು ಇರುವುದರಿಂದ ಪಡಿತರ ವಿತರಿಸಲು ತೊಂದರೆಯಾಗಿತ್ತು. ಈ ಸಮಸ್ಯೆಯನ್ನು ನಿವಾರಿಸಲು ಉಪ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಹೇಳಿದರು.
ಗ್ರಾಮದ ರಘು, ಬಾಲಾಜಿ, ನಾರಾಯಣ, ಹರೀಶ್ ಇತರರು ಇದ್ದರು.