ರೋಗಿಗಳ ಜೀವ ಉಳಿಸುವ ಅಮೃತ ರಕ್ತ

7-pnp 2
Published on

ಪಾಂಡವಪುರ: ಸಾವು-ಬದುಕಿನ ನಡುವೆ ಹೋರಾಡುವ ಲಕ್ಷಾಂತರ ರೋಗಿಗಳು, ಗಾಯಾಳುಗಳ ಜೀವ ಉಳಿಸುವ ಅಮೃತ ರಕ್ತ ಎಂದು ಲಯನ್ಸ್ ಅಕ್ಷಯ ಪ್ರಾಂತೀಯ ಅಧ್ಯಕ್ಷ ಟಿ.ಪಿ.ರೇವಣ್ಣ ಹೇಳಿದರು.

ಪಟ್ಟಣದ ಹಳೇ ಬಸ್‌ನಿಲ್ದಾಣ ಸಿದ್ಧಿ ವಿನಾಯಕ ಮಂಟಪದಲ್ಲಿ ಲಯನ್ಸ್ ಅಕ್ಷಯ ಪಾಂಡವ ಸಂಸ್ಥೆ, ಜೀವಧಾರೆ ಟ್ರಸ್ಟ್ ಮಂಡ್ಯ ವತಿಯಿಂದ ಶನಿವಾರ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ನಾಗಾಲೋಟದಲ್ಲಿ ಬೆಳೆಯುತ್ತಿರುವ ಜನಸಂಖ್ಯೆ ನಡುವೆ ಪ್ರತಿನಿತ್ಯ ಅಪಘಾತ ಎನ್ನುವುದು ಸಾಮಾನ್ಯವಾಗಿದೆ. ನಮ್ಮ ಸುತ್ತ್ತಲಿನ ಪರಿಸರ, ಕಲುಷಿತ ಆಹಾರ ಮತ್ತು ನೀರಿನ ಸೇವನೆ, ದುಶ್ಚಟಗಳು ಇತ್ಯಾದಿ ಕಾರಣಗಳಿಂದ ಅನೇಕ ಮಾರಕ ರೋಗಗಳು ಮನುಷ್ಯನನ್ನು ಕಾಡುತ್ತಿವೆ. ಇದಕ್ಕೆ ಚಿಕಿತ್ಸೆ ನೀಡುವಾಗ ರಕ್ತ ಪಾತ್ರ ಮಹತ್ವದಾಗಿರುತ್ತದೆ. ಹೀಗಾಗಿ ಪ್ರತಿಯೊಬ್ಬರೂ ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಕೆಲಸ ಮಾಡಬೇಕು. ಲಯನ್ಸ್ ಸಂಸ್ಥೆ ಹಿಂದಿನಿಂದಲೂ ರಕ್ತದಾನಕ್ಕೆ ಬಹಳ ಮಹತ್ವ ನೀಡಿ ಶಿಬಿರಗಳನ್ನು ಆಯೋಜಿಸಿಕೊಂಡು ಬಂದಿದೆ. ಆರೋಗ್ಯವಂತ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನದಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ಜೀವಧಾರೆ ಟ್ರಸ್ಟ್‌ನ ನಟರಾಜು ಮಾತನಾಡಿ, ಯುವಪೀಳಿಗೆಗೆ ರಕ್ತದಾನದ ಮಹತ್ವವನ್ನು ತಿಳಿಸುವುದರ ಜತೆಗೆ ಪ್ರತಿ ಗ್ರಾಮದಲ್ಲೂ ರಕ್ತದಾನ ಶಿಬಿರ ಆಯೋಜಿಸುವ ಮೂಲಕ ಜೀವಧಾರೆ ಟ್ರಸ್ಟ್ ಯುವಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಾ ಬಂದಿದೆ. ಲಯನ್ಸ್ ಸಂಸ್ಥೆ ಕೂಡ ಶಿಬಿರ ಆಯೋಜನೆಗೆ ಸಹಕಾರ ನೀಡುತ್ತಿದೆ. ಲಯನ್ಸ್ ಸಂಸ್ಥೆಯ ಈ ಕಾರ್ಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಗಣಪತಿ ಸೇವಾ ಸಮಿತಿ ಮುಖ್ಯಸ್ಥ ಸುಬ್ರಹ್ಮಣ್ಯ, ಮಾಣಿಕ್ಯನಹಳ್ಳಿ ಅಶೋಕ್, ಪ.ಮ.ನಂಜುಂಡ್ವಾಮಿ, ಮನೋಜ್, ಬೀರಶೆಟ್ಟಹಳ್ಳಿ ಕುಮಾರ್, ಬಿಜಿಎಸ್ ಆಸ್ಪತ್ರೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net