

ಕಡೂರು: ಸದೃಢ ದೇಹ ಕಾಪಾಡಿಕೊಳ್ಳಲು ಪ್ರತಿನಿತ್ಯ ಯೋಗಾಭ್ಯಾಸ ಮಾಡಬೇಕು ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ತಿಳಿಸಿದರು.
ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಪುರಸಭೆ, ವಿಜಯವಾಣಿ ದಿನಪತ್ರಿಕೆ, ಆಯುಷ್ ಇಲಾಖೆ, ಶ್ರೀ ರಾಘವೇಂದ್ರ ಯೋಗ ಶಿಕ್ಷಣ ಕೇಂದ್ರ ಮತ್ತು ಸಂಘ ಸಂಸ್ಥೆಗಳೊಂದಿಗೆ ನಡೆದ ಸಾಮೂಹಿಕ ಯೋಗಾಭ್ಯಾಸದಲ್ಲಿ ಮಾತನಾಡಿದರು.
ಯೋಗದ ನಿಯಮಗಳನ್ನು ಪಾಲಿಸುವಲ್ಲಿ ಭಾರತ ಮುಂಚೂಣಿಯಲ್ಲಿದೆ. ಕಲುಷಿತ ಆಹಾರ ಸೇವನೆಯಿಂದ ಅನೇಕ ರೋಗಗಳಿಗೆ ತುತ್ತಾಗಿದ್ದೇವೆ. ಇದಕ್ಕೆ ಪರಿಹಾರವೇ ಯೋಗಾಭ್ಯಾಸ. ನಮ್ಮ ದೇಹದ ನಿಯಂತ್ರಣ, ಮನಸ್ಸಿನ ಸಮತೋಲನ, ಆರೋಗ್ಯದ ವೃದ್ಧಿಗೆ ಯೋಗಾಭ್ಯಾಸ ಸಹಕಾರಿಯಾಗುತ್ತದೆ ಎಂದರು.
ಪುರಸಭೆಯಿಂದ ಸುಸಜ್ಜಿತ ಯೋಗ ಮಂದಿರ ನಿರ್ಮಿಸಲಾಗುತ್ತಿದೆ. ಯೋಗಾಭ್ಯಾಸಕ್ಕೆ ತೊಡಗಿಸಿಕೊಳ್ಳುವ ಯೋಗಪಟುಗಳಿಗೆ ಪುರಸಭೆ ಪರಿಮಿತಿಯಲ್ಲಿ ಪ್ರೋತ್ಸಾಹ ನೀಡಲಾಗುವುದು ಎಂದರು.
ಆಯುಷ್ ಇಲಾಖೆ ವೈದ್ಯಾಧಿಕಾರಿ ಡಾ. ದೊಡ್ಡಗುಣಿ ಮಾತನಾಡಿ, ಆರೋಗ್ಯವಂತ ಸಮಾಜಕ್ಕೆ ಯೋಗಾಭ್ಯಾಸಕ್ಕೆ ಒತ್ತುಕೊಡಬೇಕಿದೆ. ಕ್ರಮಬದ್ಧ ಆಹಾರ ಪದ್ಧತಿಯಿಂದ ಜೀವನ ಶೈಲಿ ಸುಧಾರಿಸಿಕೊಳ್ಳಬಹುದಾಗಿದೆ ಎಂದರು.
ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಶ್ರೀ ರಾಘವೇಂದ್ರ ಯೋಗ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು, ಪಟ್ಟಣದ ನಾಗರಿಕರು ಸಾಮೂಹಿಕ ಯೋಗಾಭ್ಯಾಸದಲ್ಲಿ ಪಾಲ್ಗೊಂಡರು. ಯೋಗಪಟುಗಳಿಂದ ಆಕರ್ಷಕ ಪ್ರದರ್ಶನ ನಡೆಸಲಾಯಿತು. ಯೋಗ ಶಿಕ್ಷಕ ದಂಪತಿ ಬಿ.ಎಂ.ಗಿರೀಶ್ ಮತ್ತು ವಿಜಯಾ ಗಿರೀಶ್ ಯೋಗದ ಮಹತ್ವದ ಕುರಿತು ಅರಿವು ಮೂಡಿಸಿದರು.
ಪುರಸಭೆ ಉಪಾಧ್ಯಕ್ಷೆ ಮಂಜುಳಾ ಚಂದ್ರು, ತಾಲೂಕು ವೈದ್ಯಾಧಿಕಾರಿ ಡಾ. ಸಿ.ಎಸ್.ರವಿಕುಮಾರ್, ಡಾ. ಉಮೇಶ್, ಡಾ. ಮಂಜುನಾಥ್, ಕ್ರೀಡಾಧಿಕಾರಿ ಮುರಳಿ, ಬಿಇಒ ಸಿದ್ದರಾಜುನಾಯ್ಕ, ಬೆಂಕಿ ಶೇಖರಪ್ಪ, ಜೆಸಿಐ ಸ್ವರ್ಣಶ್ರೀ ಅಧ್ಯಕ್ಷೆ ಆಶಾ, ಟಿ.ಆರ್. ಲಕ್ಕಪ್ಪ, ಸೂರಿ ಶ್ರೀನಿವಾಸ್ ಇತರರಿದ್ದರು.