ರೋಗಬಾಧೆ ತಡೆಗೆ ಬೋರ್ಡೋ ದ್ರಾವಣ ಸಿಂಪಡಣೆ

Oplus_16908288
Oplus_16908288
Published on

 ವಿರಾಜಪೇಟೆ: ಕೊಡಗಿನಲ್ಲಿ ಮಳೆಗಾಲ ಆರಂಭವಾಯಿತು ಎಂದರೆ ಒಂದೆಡೆ ಕೃಷಿ ಚಟುವಟಿಕೆಗಳು ಗರಿಗೆದರಿದರೆ ಇನ್ನೊಂದು ಕಡೆ ಮಳೆಯ ಪ್ರಮಾಣ ಹೆಚ್ಚುತ್ತಾ ಹೋದಂತೆ ಉಪ ವಾಣಿಜ್ಯ ಬೆಳೆಯಾದ ಅಡಕೆ ಹಾಗೂ ಕರಿಮೆಣಸಿಗೆ ರೋಗ ಬಾಧೆ ಬಂದು ಫಸಲು ನಷ್ಟ ಹಾಗೂ ಗಿಡ ಬಳ್ಳಿಗಳು ಸತ್ತು ಹೋಗುವ ಸಾಧ್ಯತೆ ಹೆಚ್ಚು. ಆದರಿಂದ ಇದರ ಮುಕ್ತಿಗಾಗಿ ಬೋರ್ಡೊ ದ್ರಾವಣ ಸಿಂಪಡಣೆ ಅತ್ಯಂತ ಅವಶ್ಯಕ.

ಬೋರ್ಡೊ ದ್ರಾವಣ ತಯಾರಿಸಲು ಬೇಕಾದ ವಸ್ತುಗಳು: 100 ಲೀಟರ್ ನೀರು , ಮೈಲುತುತ್ತ 1 ಕೆ.ಜಿ., ಸುಣ್ಣ 1 ಕೆ.ಜಿ., ಸ್ವಚ್ಛವಾದ ಕಬ್ಬಿಣದ ತುಂಡು/ಚಾಕು/ಪಿ.ಎಚ್.ಪೇಪರ್, 10 ಲೀಟರ್. ಸಾಮರ್ಥ್ಯದ 2 ಪ್ಲಾಸ್ಟಿಕ್ ಬಕೆಟ್, 100 ಲೀಟರ್ ಸಾಮರ್ಥ್ಯದ 1 ಪ್ಲಾಸ್ಟಿಕ್ ಡ್ರಮ್/ಬ್ಯಾರಲ್.

ತಯಾರಿಕೆ ವಿಧಾನ: ಒಂದು ಕೆ.ಜಿ. ಮೈಲುತುತ್ತವನ್ನು 10 ಲೀಟರ್ ನೀರಿರುವ ಪ್ಲಾಸ್ಟಿಕ್ ಬಕೆಟ್‌ನಲ್ಲಿ ಸಂಪೂರ್ಣವಾಗಿ ಕರಗಿಸಬೇಕು.

ಇನ್ನೊಂದು 10 ಲೀಟರ್ ನೀರಿರುವ ಪ್ಲಾಸ್ಟಿಕ್ ಬಕೆಟ್‌ನಲ್ಲಿ 1 ಕೆ.ಜಿ. ಸುಣ್ಣವನ್ನು ಸಂಪೂರ್ಣವಾಗಿ ಕರಗಿಸಬೇಕು. ಕರಗಿದ 10 ಲೀಟರ್ ಸುಣ್ಣದ ದ್ರಾವಣದಲ್ಲಿ ಸ್ವಲ್ಪ ಪ್ರಮಾಣದ ಸುಣ್ಣದ ದ್ರಾವಣವನ್ನು 80 ಲೀಟರ್ ನೀರಿರುವ 1 ಪ್ಲಾಸ್ಟಿಕ್ ಡ್ರಮ್‌ಗೆ ಸುರಿಯಬೇಕು. ನಂತರ 10 ಲೀಟರ್ ಮೈಲುತುತ್ತಿನ ದ್ರಾವಣವನ್ನು ನಿಧಾನವಾಗಿ ಸುರಿದು ಚೆನ್ನಾಗಿ ಕಲಸಬೇಕು. ನಂತರ ರಸಸಾರವನ್ನು ಪರೀಕ್ಷೆ ಮಾಡುತ್ತಾ ಸ್ವಲ್ಪ ಸ್ವಲ್ಪ ಉಳಿದ ಸುಣ್ಣದ ದ್ರಾವಣವನ್ನು ಸುರಿಯಬೇಕಾಗುತ್ತದೆ. ಕೆಲವು ಸಂಧರ್ಭದಲ್ಲಿ ಉತ್ತಮ ಗುಣಮಟ್ಟದ ಸುಣ್ಣವನ್ನು ಉಪಯೋಗಿಸಿದರೆ 100 ಲೀಟರ್ ದ್ರಾವಣಕ್ಕೆ 500 ಗ್ರಾಂ ಸುಣ್ಣ ಸಾಕಾಗುತ್ತದೆ. ಆದರೆ ಸುಣ್ಣದ ಪ್ರಮಾಣವನ್ನು ರಸಸಾರವನ್ನು ಪರೀಕ್ಷೆ ಮಾಡುತ್ತ ಸುರಿಯಬೇಕು. ಅಂದಾಜಿನ ಮೂಲಕ ಸುಣ್ಣವನ್ನು ಸುರಿಯಬಾದು. ಸರಿಯಾದ ಶೇ.1ರ ಬೋರ್ಡೊ ದ್ರಾವಣದ ಮಿಶ್ರಣವು ತಿಳಿ ನೀಲಿ ಬಣ್ಣದಾಗಿರುತ್ತದೆ.

ಪ್ರಮುಖ ಅಂಶಗಳು: ಬೋರ್ಡೊ ದ್ರಾವಣ ತಯಾರಿಸಲು ಯಾವಾಗಲೂ ಮಣ್ಣಿನ ಅಥವಾ ಕಟ್ಟಿಗೆ ಅಥವಾ ಪ್ಲಾಸ್ಟಿಕ್ ಪಾತ್ರೆಗಳನ್ನು ಮಾತ್ರ ಉಪಯೋಗಿಸಬೇಕು.

ಬೋರ್ಡೊ ದ್ರಾವಣವನ್ನು ಬಹಳ ಹೊತ್ತು ಇಟ್ಟಾಗ ತನ್ನ ಪರಿಣಾಮಕಾರಿಯನ್ನು ಕಳೆದುಕೊಳ್ಳುವುದರಿಂದ ದ್ರಾವಣವನ್ನು ತಯಾರಿಸಿದ ಕೂಡಲೇ ಉಪಯೋಗಿಸಬೇಕು. ಒಂದು ವೇಳೆ ಒಂದು ದಿನ ಇಟ್ಟು ಉಪಯೋಗಿಸುವುದಿದ್ದಲ್ಲಿ 250 ಗ್ರಾಂ ಬೆಲ್ಲವನ್ನು 100 ಲೀಟರ್ ದ್ರಾವಣಕ್ಕೆ ಬೆರೆಸಿ ಇಟ್ಟುಕೊಳ್ಳಬಹುದು. ಬೋರ್ಡೊ ದ್ರಾವಣಕ್ಕೆ ಯಾವುದೇ ಪೀಡನಾಶಕಗಳನ್ನು ಮಿಶ್ರಣ ಮಾಡಿ ಸಿಂಪಡಣೆ ಮಾಡಬಾರದು. ಬೋರ್ಡೊ ದ್ರಾವಣವನ್ನು ಬಟ್ಟೆಯಲ್ಲಿ ಅಥವಾ ಸಣ್ಣ ಕಣ್ಣಿನ ಜರಡಿಯಲ್ಲಿ ಶೋಧಿಸಿ ಉಪಯೋಗಿಸಬೇಕು. ಬೋರ್ಡೊ ದ್ರಾವಣಕ್ಕೆ ಆಮ್ಲೀಯತೆ ಇರಬಾರದು. ಶುದ್ಧ ಸುಟ್ಟ ಸುಣ್ಣವನ್ನು ಉಪಯೋಗಿಸಬೇಕು. ಸಿಂಪಡಣೆಯ ಸಮಯದಲ್ಲಿ ದ್ರಾವಣವನ್ನು ಆಗಾಗ್ಗೆ ಚೆನ್ನಾಗಿ ಕಲಕಿ ಬಳಸಬೇಕು.

ಹೆಚ್ಚಿನ ಮಾಹಿತಿಗಾಗಿ ಐ.ಸಿ.ಎ.ಆರ್. ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು, ದೂರವಾಣಿ: 08274-295274 ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net