ರೋಗ ಹರಡಲು ಏಕ ಪ್ರಕಾರದ ಬೆಳೆ ಕಾರಣ

IMG_20250607_191844
Published on

ಅರಕಲಗೂಡು: ತಾಲೂಕಿನ ಮಧುರನಹಳ್ಳಿ ಗ್ರಾಮದಲ್ಲಿ ಶನಿವಾರ ಹಾಸನದ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ ಹಾಗೂ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಯೋಗದಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

ಹಾಸನ ಕಂದಲಿಯ ಕೃಷಿ ವಿಜ್ಞಾನ ಕೇಂದ್ರದ ಕೀಟಶಾಸ್ತ್ರ ವಿಜ್ಞಾನಿ ಡಾ.ಟಿ ನಾಗರಾಜ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿವಿಧ ಬೆಳೆಗಳನ್ನು ಭಾದಿಸುವ ಕೀಟ ಹಾಗೂ ರೋಗಗಳ ಸಮಗ್ರ ನಿರ್ವಹಣೆ ಕುರಿತು ಮಾಹಿತಿ ನೀಡಿದರು.

ರಾಮನಾಥಪುರ ಹೋಬಳಿಯ ಭಾಗದಲ್ಲಿ ಅತ್ಯಧಿಕವಾಗಿ ಬೆಳೆಯುವ ಮೆಕ್ಕೆಜೋಳವನ್ನು ಸೈನಿಕ ಹುಳು ಹಾಗೂ ಕೇದಿಗೆ ರೋಗ ಅತ್ಯಧಿಕವಾಗಿ ಬಾಧಿಸುತ್ತಿದ್ದು ಈ ರೋಗಗಳನ್ನು ನಿಯಂತ್ರಿಸಲು ಕೃಷಿಕರು ಕೈಗೊಳ್ಳಬೇಕಾದ ಕ್ರಮಗಳನ್ನು ವಿವರಿಸಿದರು. ಲಕ್ಷಣಗಳನ್ನು ಆಧರಿಸಿ ರೋಗವನ್ನು ಪತ್ತೆ ಹಚ್ಚಿ ಆನಂತರ ಉಪಚಾರ ನೀಡಬೇಕು ಎಂದು ಮನವಿ ಮಾಡಿದರು. ಅತ್ಯಧಿಕ ಪ್ರಮಾಣದಲ್ಲಿ ಏಕ ಪ್ರಕಾರದ ಬೆಳೆಗಳನ್ನು ಬೆಳೆಯುತ್ತಿರುವುದು ವ್ಯಾಪಕವಾಗಿ ರೋಗ ಹರಡಲು ಕಾರಣವಾಗಿದೆ. ಕೃಷಿಕರು ಆಗಿಂದಾಗ್ಗೆ ಬೆಳೆಗಳ ಬದಲಾವಣೆ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಮೆಕ್ಕೆಜೋಳ, ಶುಂಠಿ, ಭತ್ತ ಹಾಗೂ ಅಡಿಕೆ ಬೆಳೆಗಳು ಮಣ್ಣಿನ ಸಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಹೀರುವ ಮೂಲಕ ರೋಗ ರೋಗನಿರೋಧಕ ಶಕ್ತಿಯನ್ನು ಹಾಗೂ ಫಲವತ್ತತೆಯನ್ನು ಕಡಿಮೆ ಮಾಡುತ್ತವೆ. ಅವುಗಳನ್ನು ಅಧಿಕ ಮಾಡುವ ನಿಟ್ಟಿನಲ್ಲಿ ದ್ವಿದಳ ಧಾನ್ಯದ ಬೆಳೆಗಳನ್ನು ಕೃಷಿಕರು ಬೆಳೆದುಕೊಳ್ಳಬೇಕು ಎಂದು ನಾಗರಾಜ್ ತಿಳಿಸಿದರು.

ಬೆಂಗಳೂರಿನ ರಾಷ್ಟ್ರೀಯ ಪಶು ರೋಗ ಸೋಂಕುಶಾಸ್ತ್ರ ಮತ್ತು ಮಾಹಿತಿ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ.ಸತೀಶ್ ಗೌಡ ಮಾತನಾಡಿ, ನಾವು ಸಾಕಣೆ ಮಾಡುವ ಜಾನುವಾರುಗಳಿಗೆ ಸುಮಾರು 15 ವಿಧದ ಮಾರಣಾಂತಿಕ ಕಾಯಿಲೆಗಳು ಬರುವ ಸಾಧ್ಯತೆ ಇದ್ದು, ಈ ಪೈಕಿ ಅನೇಕ ರೋಗಗಳಿಗೆ ನಮ್ಮ ಸಂಸ್ಥೆ ಲಸಿಕೆಯನ್ನು ಪತ್ತೆಹಚ್ಚಿದೆ. ರಾಜ್ಯ ಸರ್ಕಾರದ ಪಶು ವೈದ್ಯಕೀಯ ಸೇವಾ ಇಲಾಖೆ ಈ ಎಲ್ಲ ಲಸಿಕೆಗಳನ್ನು ಉಚಿತವಾಗಿ ಜಾನುವಾರುಗಳಿಗೆ ನೀಡುತ್ತಿದ್ದು, ಪ್ರತಿಯೊಬ್ಬ ಪಶುಪಾಲಕರು ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ತಿಳಿಸಿದರು.

ಹಾಸನ ಆಕಾಶವಾಣಿಯ ಕೃಷಿರಂಗ ವಿಭಾಗದ ಪ್ರಸಾರ ನಿರ್ವಾಹಕ ಅರಕಲಗೂಡು ವಿ.ಮಧುಸೂದನ್ ಮಾತನಾಡಿ, ವಿಕಸಿತ ಕೃಷಿ ಸಂಕಲ್ಪ ಅಭಿಯಾನವನ್ನು ಕೃಷಿಕರಿಗೆ ಸೂಕ್ತ ಮಾಹಿತಿಯನ್ನು ನೀಡುವ ಉದ್ದೇಶದಿಂದ ಆರಂಭಿಸಿದ್ದು, ಅದರ ಸದ್ಬಳಕೆಯನ್ನು ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಎನ್.ಪಲ್ಲವಿ ಮಾತನಾಡಿ, ಮಣ್ಣಿನ ಫಲವತ್ತತೆಯನ್ನು ಅರಿತು ಬೆಳೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಹಾಗೂ ಮಣ್ಣು ಪರೀಕ್ಷೆ ಮಾಡಿಸುವ ಮೂಲಕವೇ ಪೋಷಕಾಂಶಗಳ ಸರಬರಾಜು ಮಾಡಬೇಕು ಎಂದು ಮಾಹಿತಿ ನೀಡಿದರು.

ರಾಷ್ಟ್ರೀಯ ಪಶು ಪೋಷಣೆ ಮತ್ತು ಶರೀರ ಕ್ರಿಯಾ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ.ಸಿ.ಜಿ.ಡೇವಿಡ್, ಕೇಂದ್ರೀಯ ಒಳನಾಡು ಮೀನುಗಾರಿಕಾ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಡಾ.ಸೋನಾಲಿಕ ಸಾಹು ಮಾತನಾಡಿದರು.

ಕೆರಗೋಡು ಗ್ರಾಮದ ಪ್ರಗತಿಪರ ಕೃಷಿಕ ಕೆ.ಎಸ್.ಮಂಜುನಾಥ್, ಕೆ. ಮಹದೇವಪ್ಪ, ಮಧುರನಹಳ್ಳಿಯ ಎಂ.ಎಸ್.ರವೀಂದ್ರ, ದೇವಕಿ ಚಂದ್ರಶೇಖರ್ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕುರಿತು ಅಭಿಪ್ರಾಯಗಳನ್ನು ಹಂಚಿಕೊಂಡರು.

ಕೃಷಿ ಇಲಾಖೆಯ ರಾಮನಾಥಪುರ ಹೋಬಳಿಯ ಕೃಷಿ ಅಧಿಕಾರಿ ಜ್ಞಾನಮೂರ್ತಿ ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ, ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಿಬ್ಬಂದಿ ಹಾಗೂ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ದೇಶಪಾಂಡೆ ಇತರರಿದ್ದರು.

ಮಧುರನಹಳ್ಳಿ ಹಣ್ಣು ಲಕ್ಕೂರು ಹಾಗೂ ಕೆರಗೋಡು ಗ್ರಾಮದ ನೂರಾರು ಕೃಷಿಕರು ಪಾಲ್ಗೊಂಡು ವಿಜ್ಞಾನಿಗಳೊಂದಿಗೆ ಸಂವಾದ ನಡೆಸುವ ಮೂಲಕ ಮಾಹಿತಿ ಪಡೆದುಕೊಂಡರು. ವೇದಿ ವೇದಿಕೆಯ ಸಮಾರಂಭದ ನಂತರ ಕ್ಷೇತ್ರ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಿ ವಿವಿಧ ರೋಗಗಳ ಕುರಿತು ಪ್ರಾಯೋಗಿಕ ಮಾಹಿತಿಯನ್ನು ಹಂಚಿಕೊಳ್ಳಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net