

ಬಸವಕಲ್ಯಾಣ: ಗ್ರಾಮದಲ್ಲಿ ನಿರ್ಮಿಸಿಕೊಂಡ ಶೌಚಗೃಹಗಳನ್ನು ಪ್ರತಿಯೊಬ್ಬರೂ ಬಳಸಿಕೊಳ್ಳುವ ಮೂಲಕ ಸ್ವಚ್ಛತೆ ಕಾಪಾಡಿಕೊಳ್ಳಬೇಕಾದ ಅವಶ್ಯಕತೆವಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಸುಲ್ಪಿ ಹೇಳಿದರು.
ವಿಶ್ವ ಶೌಚಾಲಯ ಮತ್ತು ವಿಶ್ವ ಮಾನವ ಹಕ್ಕುಗಳ ಅಂಗವಾಗಿ ನಮ್ಮ ಶೌಚಾಲಯ-ನಮ್ಮ ಗೌರವ ಎಂಬ ಶೀರ್ಷಿಕೆ ಹಾಗೂ ಅಂದದ ಶೌಚಾಲಯ ಆನಂದದ ಜೀವನ ಎಂಬ ಅಭಿಯಾನದ ನಿಮಿತ್ತ ತಾಲೂಕಿನ ಎಕಲೂರ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮದಲ್ಲಿ ವೈಯಕ್ತಿಕ ಮತ್ತು ಸಮುದಾಯದಡಿ ನಿರ್ಮಿಸಿಕೊಂಡ ಶೌಚಗೃಹಗಳನ್ನು ಸಮರ್ಪಕವಾಗಿ ಬಳಸುವ ಮೂಲಕ ರೋಗಮುಕ್ತ ಗ್ರಾಮಕ್ಕೆ ಸಹಕರಿಸಬೇಕು ಎಂದರು.
ಅಭಿಯಾನದ ನಿಮಿತ್ತ ಸರ್ಕಾರದ ಆದೇಶದಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಶಾಲೆಯಿಂದ ಹೊರಟ ಜಾಗೃತಿ ಜಾಥಾ ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ನಡೆಸಲಾಯಿತು. ಪಿಡಿಒ ಸುಲೋಚನಾ ಬಂಡೆ, ಕಾರ್ಯದರ್ಶಿ ರಾಕೇಶ ಐನೋಳ್ಳಿ, ಐಇಸಿ ಸಂಯೋಜನ ವೀರಾರೆಡ್ಡಿ, ಡಿಇಒ ಧನರಾಜ ಸ್ವಾಮಿ ಇತರರಿದ್ದರು.