ರೋಗ ಬಾರದಂತೆ ಮುಂಜಾಗ್ರತೆ ವಹಿಸಿ

23gkl2
Published on

ಗುರುಮಠಕಲ್: ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ಮೊದಲು ರೋಗ ಬಾರದಂತೆ ಮುಂಜಾಗ್ರತೆ ವಹಿಸುವುದು ಬಹಳ ಅಗತ್ಯವಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಹಣಮಂತರೆಡ್ಡಿ ಹೇಳಿದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಮತ್ತು ವೈದೇಹಿ ಆಸ್ಪತ್ರೆಯ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು, ರೋಗ ಬಂದ ತಕ್ಷಣ ಚಿಕಿತ್ಸೆ ಪಡೆಯುವುದು ಒಳ್ಳೆಯದು. ಆದರೆ ಅದನ್ನು ಬಾರದಂತೆ ಎಚ್ಚರಿಕೆ ವಹಿಸುವುದು ಬಹಳ ಮುಖ್ಯವಾಗಿದೆ ಎಂದರು.

ಮಳೆಗಾಲ ಆರಂಭವಾಗಿದ್ದು ಈ ವೇಳೆ ಕಾಲರಾ, ಚಿಕೂನ್ ಗುನ್ಯಾ, ಡೆಂಘೆ ರೋಗಗಳು ಕಾಡುವ ಸಾಧ್ಯತೆ ಇದ್ದು, ಕಡ್ಡಾಯವಾಗಿ ಜನರು ನೀರು ಕಾಯಿಸಿ, ಆರಿಸಿ ಸೋಸಿ ಕಡಿಯುವುದನ್ನು ರೂಢಿಸಿಕೊಳ್ಳಬೇಕು. ಅಲ್ಲದೆ ಮನೆಯ ಸುತ್ತಲಿನ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

ಡೆಂಘೆ ಕಾಯಿಲೆ ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ತಡವಾಗಿ ಚಿಕಿತ್ಸೆಗೆಂದು ಹೋಗುವ ವೇಳೆ ಪ್ರಾಣಾಪಾಯ ಸಂಭವಿಸಿದ ಉದಾಹರಣೆ ನಮ್ಮ ಮುಂದೆ ಇವೆ. ಹೀಗಾಗಿ ಮನೆಯ ಸುತ್ತಮುತ್ತ ಯಾವುದೇ ಕಾರಣಕ್ಕೂ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಮನೆಯಲ್ಲಿ ನೀರು ಸಂಗ್ರಹಿಸುವ ಟ್ಯಾಂಕ್ ವಾರಕ್ಕೆ ಒಮ್ಮೆಯಾದರು ಶುಚಿಗೊಳಿಸಬೆಕು ಎಂದು ಸಲಹೆ ನೀಡಿದರು.

ನಾವು ಗಡಿ ಭಾಗದವರಾಗಿದ್ದರಿಂದ ಮಾರಣಾಂತಿಕ ಕಾಯಿಲೆಗಳಿಗೆ ಉತ್ತಮ ಚಿಕಿತ್ಸೆ ಸಿಗಬೇಕು ಎನ್ನುವ ದೃಷ್ಟಿಯಿಂದ ಇಂತಹ ಶಿಬಿರಗಳನ್ನು ಆಯೋಜಿಸಲಗುತ್ತಿದೆ. ಹೀಗಾಗಿ ಇದರ ಲಾಭ ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ವೈದೇಹಿ ಆಸ್ಪತ್ರೆ ಡಾ.ಶಿಲ್ಪಾ ಮಾತನಾಡಿ, ಹೆಚ್ಚಿನ ಚಿಕಿತ್ಸೆಯ ಅಗತ್ಯ ಇದ್ದವರಿಗೆ ಬೆಂಗಳೂರಿಗೆ ಕರೆದುಕೊಂಡು ಹೋಗಿ ನಗರದ ನಮ್ಮ ಆಸ್ಪತ್ರೆಯಲ್ಲಿ ಉಚಿತ ವಸತಿ, ಉಪಹಾರ ಮತ್ತು ಊಟವನ್ನು ನೀಡಿ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು.

ಖಾಸಾ ಮಠದ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿದರು. ವೈದ್ಯಾಧಿಕಾರಿ ಡಾ.ಶಿವಪ್ರಸಾದ ಮೈತ್ರಿ ಹಾಗೂ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಂತೋಷ ನಿರೇಟಿ ಮಾತನಾಡಿದರು.

ಈ ವೇಳೆ ಡಾ.ಮಹೇಶಕುಮಾರ, ಡಾ.ವಿಘ್ನೇಶ್ವರ, ಡಾ.ಪ್ರದೀಪ, ಡಾ.ಪ್ರವೀಣ, ಡಾ.ಗಿರೀಶ, ಡಾ.ಸದನ್, ಡಾ.ತರುಣ, ಡಾ.ಅಜಿತ, ಸಮುದಾಯ ಆರೋಗ್ಯ ಕೇಂದ್ರದ ಹರೀಶ, ರಾಕೇಶ, ಪ್ರಶಾಂತ, ಭೀಮಶಂಕರ, ಭಾನುಪ್ರಕಾಶ, ಅಮೀನ್, ರವಿ ಬಂಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net