ರೋಗ ಉಲ್ಬಣವಾಗದಂತೆ ಎಚ್ಚರವಹಿಸಿ : ಸಿಬ್ಬಂದಿಗೆ ಸಂಸದ ಮುನಿಸ್ವಾಮಿ ಸಲಹೆ, ಆರೋಗ್ಯ ಮೇಳಕ್ಕೆ ಚಾಲನೆ

1
Published on

ಕೋಲಾರ: ರೋಗಗಳು ಉಲ್ಬಣವಾಗುವ ಕಡೆ ಆರೋಗ್ಯ ಇಲಾಖೆ ಸಿಬ್ಬಂದಿ ತೆರಳಿ ಜನಜಾಗೃತಿ ಮುಡಿಸಲು ಮುಂದಾಗುವುದರ ಜತೆಗೆ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಂಸದ ಎಸ್​.ಮುನಿಸ್ವಾಮಿ ಸಲಹೆ ನೀಡಿದರು. ನಗರದ ಜೂನಿಯರ್​ ಕಾಲೇಜು ಮೈದಾನದಲ್ಲಿ ಸೋಮವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದ್ದ ತಾಲೂಕು ಮಟ್ಟದ ಆರೋಗ್ಯ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು. ಆರೋಗ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಸಾಂಕ್ರಾಮಿಕ ರೋಗಗಳು ಸೇರಿ ಇತರ ರೋಗಗಳು ಹೆಚ್ಚಾಗಿ ಬರುವ ಕಡೆ ನಿಗಾವಹಿಸಬೇಕು. ನರ್ಸಿಂಗ್​ ವಿದ್ಯಾರ್ಥಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಸ್ವಯಂ ಸೇವಕರನ್ನು ಒಗ್ಗೂಡಿಸಿಕೊಂಡು ಮನೆಮನೆಗೆ ತೆರಳಿ ಜಾಗೃತಿ ಮೂಡಿಸಬೇಕು. ಆ ಮೂಲಕ ಕೋಲಾರವನ್ನು ಆರೋಗ್ಯ ಜಿಲ್ಲೆಯನ್ನಾಗಿಸಬೇಕು. ಆಯುಷ್ಮಾನ್​ ಭಾರತ್​ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಮುಂದಾಗಬೇಕು ಎಂದರು. ಖಾಸಗಿ ಆಸ್ಪತ್ರೆಯವರು ಶಿಬಿರ ಮಾಡಿ ಡಿಮ್ಯಾಂಡ್​ ಕ್ರಿಯೇಟ್​ ಮಾಡಿ ಹಣ ಸಂಪಾದಿಸಿಕೊಂಡು ಆರೋಗ್ಯ ಹಾಳು ಮಾಡಿ ಕಳುಹಿಸುತ್ತಾರೆ. ಆದರೆ ಸರ್ಕಾರದಿಂದ ಆರೋಗ್ಯ ಶಿಬಿರ ಆಯೋಜಿಸುತ್ತಿದ್ದು, ಸಾರ್ವಜನಿಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಕರೊನಾದಿಂದ ದೇಶದಲ್ಲಿ ಅರ್ಧದಷ್ಟು ಜನ ಖಾಲಿ ಆಗುತ್ತಾರೆ ಎಂದು ಶತೃದೇಶದವರು ಕಾಯುತ್ತಿದ್ದರು. ಆದರೆ ಅದನ್ನು ಅರಿತ ಪ್ರಧಾನಿ ನರೇಂದ್ರ ಮೋದಿ ಅವರು ದೇಶೀಯ ಲಸಿಕೆಗಳನ್ನು ವಿಜ್ಞಾನಿಗಳ ಮೂಲಕ ಕಂಡು ಹಿಡಿಯುವಂತೆ ಮಾಡಿ, ನಮ್ಮ ದೇಶದವರಷ್ಟೇ ಅಲ್ಲದೆ ಬೇರೆ ದೇಶಗಳಿಗೂ ನೀಡಿದರು. ಹೀಗಾಗಿ ಮೋದಿ ಕೇಂದ್ರದಲ್ಲಿ ಇದ್ದರೆ ಎಲ್ಲವೂ ಸಾಧ್ಯ. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಎಲ್ಲ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ ಎಂದರು. ಕರೊನಾ ವೇಳೆ ನಮ್ಮಲ್ಲಿಯೂ ಅನೇಕ ಜನಪ್ರತಿನಿಧಿಗಳು ಮನೆಯಲ್ಲಿ ಸೇರಿಕೊಂಡಿದ್ದರು. ನಾನೇ ಪಿಪಿಇ ಕಿಟ್​ ಹಾಕಿಕೊಂಡು ಮುಂದೆ ಹೋದೆ. ಅಧಿಕಾರಿಗಳು ಧೈರ್ಯವಾಗಿ ಕೆಲಸ ಮಾಡಿದರು. ಆಶಾ ಅಂಗನವಾಡಿ ಕಾರ್ಯಕರ್ತರ ಶ್ರಮವೂ ಹೆಚ್ಚಾಗಿದೆ. ಅದೇ ರೀತಿ ಆರೋಗ್ಯ ಮೇಳವೂ ಯಶಸ್ವಿಯಾಗಿಸಬೇಕು ಎಂದರು. ಎಂಎಲ್ಸಿ ಇಂಚರ ಗೋವಿಂದರಾಜು ಮಾತನಾಡಿ, ನಮ್ಮ ದೇಶದಲ್ಲಿ ಊಟಕ್ಕೆ ಸರಿಯಾದ ಲೆಕ್ಕಾಚಾರವಿಲ್ಲ. ಜಂಕ್​ ಫುಡ್​ ಹೆಚ್ಚು ತಿನ್ನುತ್ತಾರೆ. ಸರಿಯಾದ ಮಾಹಿತಿ ಇಲ್ಲದೆ ಆರೋಗ್ಯ ಕೆಡಿಸಿಕೊಳ್ಳುತ್ತಿದ್ದಾರೆ. ಕಾಯಿಲೆಗಳು ಹೆಚ್ಚಾಗಿ ಮೃತಪಡುತ್ತಿದ್ದಾರೆ. ಆರೋಗ್ಯ ನಿರೀಕ್ಷಕರು ಹೋಟೆಲ್​ಗಳಿಗೆ ಭೇಟಿ ನೀಡಿ ಆಹಾರದ ಗುಣಮಟ್ಟ ಪರಿಶೀಲನೆ ಮಾಡುತ್ತಿಲ್ಲ. ಸಿಎಂ ಬಂದಾಗ ಮಾತ್ರ ತಪಾಸಣೆ ಮಾಡೋದಲ್ಲ. ಇತ್ತೀಚೆಗೆ ರಸ್ತೆ ಬದಿ ತಳ್ಳುವ ಗಾಡಿಗಳಲ್ಲಿ ತಿಂಡಿ, ಊಟ ಹೆಚ್ಚಾಗಿ ಸಿಗುತ್ತಿದ್ದು, ಆಹಾರದೊಂದಿಗೆ ಧೂಳು ಸೇರುತ್ತಿದ್ದರೂ ಕ್ರಮ ಜರುಗಿಸುತ್ತಿಲ್ಲ. ಆಹಾರ ಪದಾರ್ಥಗಳನ್ನು ಮಾರುವವರೂ ಸುರಕ್ಷತೆಯ ಬಗ್ಗೆ ಎಚ್ಚರ ವಹಿಸುತ್ತಿಲ್ಲ. ಸಾರ್ವಜನಿಕರು ಆರೋಗ್ಯ ಕೆಡದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು. ಜಿಲ್ಲಾಧಿಕಾರಿ ವೆಂಕಟ್​ ರಾಜಾ, ಜಿಪಂ ಸಿಇಒ ಎಸ್​.ಉಕೇಶ್​ಕುಮಾರ್​, ಕೆಯುಡಿಎ ಅಧ್ಯಕ್ಷ ಓಂಶಕ್ತಿ ಚಲಪತಿ, ಸದಸ್ಯ ಅಪ್ಪಿ ನಾರಾಯಣಸ್ವಾಮಿ, ವಕ್ಫ್​ಬೋರ್ಡ್​ ಅಧ್ಯಕ್ಷ ಜಮೀವುಲ್ಲಾ, ದಿಶಾ ಸದಸ್ಯ ಸಾ.ಮಾ.ಅನಿಲ್​ ಬಾಬು, ಜಿಲ್ಲಾ ಆರ್​ಸಿಎಚ್​ ಅಧಿಕಾರಿ ಡಾ.ವಿಜಯಕುಮಾರಿ, ಆಯುಷ್​ ಅಧಿಕಾರಿ ಡಾ.ರಾಘವೇಂದ್ರ ಶೆಟ್ಟಿಗಾರ್​, ಸರ್ವೇಕ್ಷಣಾಧಿಕಾರಿ ಡಾ.ಚಾರಿಣಿ, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಕಮಲಾ, ಕುಟುಂಬ ಕಲ್ಯಾಣ ಅಧಿಕಾರಿ ಡಾ.ಚಂದನ್​, ಡಾ.ಎನ್​.ಸಿ.ನಾರಾಯಣಸ್ವಾಮಿ, ಡಾ.ಪುಣ್ಯಮೂರ್ತಿ, ಮತ್ತಿತರರಿದ್ದರು.

ಪ್ರತಿ ತಾಲೂಕಿನಲ್ಲೂ ಮೇಳಗಳನ್ನು ಆಯೋಜನೆ ಮಾಡಲಾಗುವುದು. ಆಧಾರ್​, ರೇಷನ್​ ಕಾರ್ಡ್​ ದಾಖಲೆ ನೀಡಿ ಆಯುಷ್ಮಾನ್​ ಭಾರತ್​ ಕಾರ್ಡ್​ ಪಡೆದುಕೊಳ್ಳಬಹುದಾಗಿದೆ. ಜಿಲ್ಲೆಯಲ್ಲಿ 4.53 ಲಕ್ಷ ಮಂದಿಗೆ ಆಯುಷ್ಮಾನ್​ ಕಾರ್ಡ್​ ವಿತರಿಸಲಾಗಿದೆ. 71 ಸಾವಿರಕ್ಕೂ ಹೆಚ್ಚು ಮಂದಿ ಚಿಕಿತ್ಸೆ ಪಡೆದುಕೊಂಡಿದ್ದು, ಸಾರ್ವಜನಿಕರಿಗೆ ಉಪಯೋಗವಾಗುತ್ತಿದೆ. ಡಾ.ಜಗದೀಶ್​, ಡಿಎಚ್​ಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net